ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೊನೆಯ ಬಜೆಟ್ ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರೈತರು 500 ರುಪಾಯಿಯಲ್ಲಿ ಗೌರವದಿಂದ ಬದುಕಲು ಸಾಧ್ಯವೆ? ಎಂದು ಶುಕ್ರವಾರ ಪ್ರಶ್ನಿಸಿದ್ದಾರೆ.
ಇಂದು ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಮಂಡಿಸಿದ ಎನ್ ಡಿಎ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಅನ್ನದಾತರಿಗೆ 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' ಸ್ಥಾಪನೆಗೆ ಸಮ್ಮತಿ ಸೂಚಿಸಿದ್ದು, ಈ ಯೋಜನೆ ಅಡಿ ಸರ್ಕಾರ ವಾರ್ಷಿಕ 6 ಸಾವಿರ ರುಪಾಯಿಯನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಿದೆ.
ಎರಡು ಹೆಕ್ಟೇರ್ ಗಿಂತ ಕಡಿಮೆ ಭೂಮಿ ಹೊಂದಿರುವ ಅತಿ ಸಣ್ಣ ರೈತರಿಗೆ ಈ ಸೌಲಭ್ಯ ದೊರೆಯಲಿದ್ದು, ವಾರ್ಷಿಕ 6 ಸಾವಿರ ರುಪಾಯಿಯನ್ನು ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಸರ್ಕಾರ ಜಮೆ ಮಾಡಲಿದೆ.
ಬಜೆಟ್ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ತರೂರ್ ಅವರು, ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ಮಿತಿ ಹೆಚ್ಚಿಸಿದ್ದು ಬಿಟ್ಟರೆ ಬಜೆಟ್ ನಲ್ಲಿ ಬೇರೆ ಯಾವುದೇ ಉತ್ತಮ ಯೋಜನೆ ಇಲ್ಲ ಎಂದು ಟೀಕಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಸಣ್ಣ ರೈತರಿಗೆ ನಗದು ನೀಡುವ ಘೋಷಣೆ ಮಾಡಿದೆ. ಅದು ವಾರ್ಷಿಕ 6 ಸಾವಿರ ರುಪಾಯಿ. ಅಂದರೆ ತಿಂಗಳಿಗೆ 500 ರುಪಾಯಿ ನೀಡುವುದಾಗಿ ಹೇಳಿದೆ. ಕೇವಲ 500 ರುಪಾಯಿಯಲ್ಲಿ ರೈತರ ಗೌರವದಿಂದ ಬದುಕಲು ಸಾಧ್ಯವೆ? ಎಂದು ತರೂರ್ ಪ್ರಶ್ನಿಸಿದ್ದಾರೆ.