ಸಿದ್ದರಾಮಯ್ಯ ಬಜೆಟ್ ನಲ್ಲಿ ಪೊಲೀಸ್ ಇಲಾಖೆಗೆ ಸಿಕ್ಕಿದ್ದೇನು?

ಬೆಂಗಳೂರು ನಗರದಲ್ಲಿ ಹೊಸದಾಗಿ 05 ಸಂಚಾರ ಪೊಲೀಸ್‌ ಠಾಣೆಗಳನ್ನು ಮತ್ತು 06 ಮಹಿಳಾ ಪೊಲೀಸ್‌ ಠಾಣೆಗಳನ್ನು ಸ್ಥಾಪಿಸಲು ಕ್ರಮ. ಪೊಲೀಸ್‌ ಮೊಬಿಲಿಟಿ ಯೋಜನೆಯಡಿ ಇಲಾಖೆಯಲ್ಲಿನ ಹಳೆಯ ವಾಹನಗಳನ್ನು ಬದಲಾಯಿಸಲು 2023-24ನೇ ಸಾಲಿನಲ್ಲಿ 100 ಕೋಟಿ ರೂ. ಅನುದಾನ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಪೊಲೀಸರಿಗೆ ಪ್ರಸಕ್ತ ವರ್ಷದಲ್ಲಿ ಬರೋಬ್ಬರಿ ಪೊಲೀಸ್‌ ಗೃಹ 2025 ಯೋಜನೆಯಡಿ 2,125 ವಸತಿಗೃಹ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ಪ್ರಸಕ್ತ ವರ್ಷ 450 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರು ನಗರದಲ್ಲಿ ಹೊಸದಾಗಿ 05 ಸಂಚಾರ ಪೊಲೀಸ್‌ ಠಾಣೆಗಳನ್ನು ಮತ್ತು 06 ಮಹಿಳಾ ಪೊಲೀಸ್‌ ಠಾಣೆಗಳನ್ನು ಸ್ಥಾಪಿಸಲು ಕ್ರಮ. ಎರಡು ಹಂತಗಳಲ್ಲಿ ಒಟ್ಟು 2,454 ಹುದ್ದೆಗಳ ಸೃಷ್ಟಿ. ಪೊಲೀಸ್‌ ಮೊಬಿಲಿಟಿ ಯೋಜನೆಯಡಿ ಇಲಾಖೆಯಲ್ಲಿನ ಹಳೆಯ ವಾಹನಗಳನ್ನು ಬದಲಾಯಿಸಲು 2023-24ನೇ ಸಾಲಿನಲ್ಲಿ 100 ಕೋಟಿ ರೂ. ಅನುದಾನ ನೀಡಲಾಗುವುದು.

ಅಪರಾಧ ತನಿಖಾ ವಿಭಾಗ (CID), ಸೈಬರ್‌ ಅಪರಾಧ ಘಟಕ (CCD) ಮತ್ತು ಸೈಬರ್‌ ಎಕಾನಾಮಿಕ್ಸ್‌ ಮತ್ತು ನಾರ್ಕೋಟಿಕ್ಸ್‌ (CEN) ಪೊಲೀಸ್‌ ಠಾಣೆಗಳ ಘಟಕಗಳ ಉನ್ನತೀಕರಣಕ್ಕೆ 10 ಕೋಟಿ ರೂ. ಕೆ-ಸೇಫ್‌ ಯೋಜನೆಯಡಿ ಹತ್ತು 3 ಬೇ ಅಗ್ನಿಶಾಮಕ ಠಾಣಾ (3 Bay fire stations) ಕಟ್ಟಡಗಳ ನಿರ್ಮಾಣವನ್ನು ಹಾಗೂ ಅಗತ್ಯವಿರುವ ಅಗ್ನಿಶಾಮಕ ವಾಹನಗಳನ್ನು ಒದಗಿಸಲು 100 ಕೋಟಿ ರೂ. ನೆರವು.

ನಮ್ಮ ಸರ್ಕಾರವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚಿನ ಮಹತ್ವ ನೀಡಲಿದೆ. ʻನೈತಿಕ ಪೊಲೀಸ್ ಗಿರಿʼಯ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹರಡುವ, ಸೌಹಾರ್ದ ಕೆಡಿಸುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ ಸಮಾಜದಲ್ಲಿ ಹದಗೆಟ್ಟಿದ್ದ ಸಾಮರಸ್ಯದ ವಾತಾವರಣವನ್ನು ಮರುನಿರ್ಮಿಸಲು ನಮ್ಮ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ತವ್ಯದ ಸಮಯದಲ್ಲಿ ಪೊಲೀಸ್‌ ಇಲಾಖೆಯ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲು ಅನುಕೂಲವಾಗುವಂತೆ ಪೊಲೀಸ್‌ ತರಬೇತಿ ಶಾಲೆಗಳನ್ನು 20 ಕೋಟಿ ರೂ. ಗಳ ವೆಚ್ಚದಲ್ಲಿ ಬಲವರ್ಧನೆ ಮಾಡಲಾಗುವುದು. ಪೊಲೀಸ್‌ ಇಲಾಖೆಗೆ ಡ್ರೋನ್‌ ಕ್ಯಾಮರಾ, ಕಣ್ಗಾವಲು ಕ್ಯಾಮರಾ ಹಾಗೂ ಬಾಡಿವೋರ್ನ್‌ ಕ್ಯಾಮರಾಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರು ಕೇಂದ್ರ ಕಾರಾಗೃಹದ ಮಾದರಿಯಲ್ಲಿ ರಾಜ್ಯದ ಇತರೆ ಏಳು ಕೇಂದ್ರ ಕಾರಾಗೃಹಗಳಲ್ಲಿ 10 ಕೋಟಿ ರೂ. ಗಳ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ (STP) ಕಾರ್ಯವನ್ನು ಹಾಗೂ ಐದು ಕೇಂದ್ರ ಕಾರಾಗೃಹಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಭದ್ರತಾ ವಾಚ್ ಟವರ್ ಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com