
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ನಲ್ಲಿ ಬೆಂಗಳೂರಿಗೆ ಒಟ್ಟು 45,000 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ಬ್ರ್ಯಾಂಡ್ ಬೆಂಗಳೂರಿಗೆ ಆಧ್ಯತೆ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಮುಖ್ಯಮಂತ್ರಿಗಳು ಬೆಂಗಳೂರಿಗೆ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ.
ಬೆಂಗಳೂರು ವೈಟ್ ಟಾಪಿಂಗ್, ರಸ್ತೆ ಅಭಿವೃದ್ಧಿ, ನಗರೋತ್ಥಾನ, ತಾಜ್ಯ ನಿರ್ವಹಣೆ, ರಾಜಕಾಲುವೆ ತೆರವು ಮತ್ತು ದುರಸ್ತಿಗೆ ಅನುದಾನ ಘೋಷಿಸಿದ್ದಾರೆ. ಅಲ್ಲದೇ ಮೆಟ್ರೋ, ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಹಣ ಮೀಸಲಿಟ್ಟಿದ್ದಾರೆ.
ಬೆಂಗಳೂರಿಗೆ 45 ಸಾವಿರ ಕೋಟಿ ಅನುದಾನ ಘೋಷಿಸಿದ ಸಿಎಂ, ನಮ್ಮ ಮೆಟ್ರೋಗೆ 30, 000 ಕೋಟಿ ರೂ. ಒದಗಿಸಲಾಗುವುದು ಎಂದು ಹೇಳಿದರು.
2022-23ನೆ ಸಾಲಿನಲ್ಲಿ ಹಿಂದಿನ ಸರ್ಕಾರ 45 ಸಾವಿರ ಕೋಟಿ ರೂ.ಗಳ ಅಪೂರ್ಣ ಕಾಮಗಾರಿಗಳು ಹಾಗೂ ಬಾಕಿ ಮೊತ್ತದ ಹೊರೆಯನ್ನು ನಮ್ಮ ಸರ್ಕಾರದ ಮೇಲೆ ಹೊರಿಸಿದೆ. ಆದರೂ ಅವಶ್ಯಕತೆ ಇರುವ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಿ ಬ್ರಾಂಡ್ ಬೆಂಗಳೂರು ಹೆಸರನ್ನು ಚಿರಸ್ಥಾಯಿಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಗರದ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಅಮೃತ ನಗರೋತ್ಥಾನ, ಹೈಡೆನ್ಸಿಟಿ ಕಾರಿಡಾರ್, ವೈಟ್ ಟಾಪಿಂಗ್ ರಸ್ತೆ, ತ್ಯಾಜ್ಯ ನಿರ್ವಹಣೆ, ರಾಜಕಾಲುವೆಗಳ ತೆರವು ಮತ್ತು ದುರಸ್ತಿ, ರಸ್ತೆಗುಂಡಿ ಮುಚ್ಚುವುದು ಮತ್ತಿತರ ಹಲವಾರು ಪ್ರಗತಿಯಲ್ಲಿರುವ ಯೋಜನೆಗಳಿಗೆ ಪ್ರಸ್ತುತ 12 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ.
ಇದಲ್ಲದೆ, ಸಂಚಾರ ದಟ್ಟಣೆ ನಿರ್ವಹಣೆಯಿಂದಾಗಿ 30 ಸಾವಿರ ಕೋಟಿ ರೂ.ಗೂ ಹೆಚ್ಚಿನ ಅಂದಾಜು ವೆಚ್ಚದಲ್ಲಿ ನಮ್ಮ ಮೆಟ್ರೋ ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಗಳು ಪೂರ್ಣಗೊಳ್ಳಲು ಐದು ವರ್ಷಗಳ ಕಾಲಾವಕಾಶದ ಅಗತ್ಯವಿದೆ ಎಂದು ತಿಳಿಸಿದರು.
ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ನಗರದ ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ,ಸಾರ್ವಜನಿಕ ಸ್ಥಳಗಳ ಸದ್ಬಳಕೆ, ಆರೋಗ್ಯ, ಜನಸ್ನೇಹಿ ಇ-ಆಡಳಿತ, ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆ ಈ 9 ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗುವುದು ಎಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಮೇಲ್ದರ್ಜೆಗೇರಿಸಲು 1411 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಜಲಮಂಡಳಿಯ ಸ್ವಂತ ಸಂಪನ್ಮೂಲದಿಂದ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಬರುವ 2026ರ ವೇಳೆಗೆ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಿ ನಗರದಲ್ಲಿ ಸುಸ್ಥಿರ ಜಲ ಮತ್ತು ಪರಿಸರ ಸಂರಕ್ಷಣೆ ಮಾಡಲಾಗುವುದು ಎಂದು ತಿಳಿಸಿದರು.
Advertisement