ಪ್ರೈವೇಟ್ ಲೇಬಲ್

ಹಳೆಯ ಕಿರಾಣಿ ಅಂಗಡಿಗಳ ಜಾಗಕ್ಕೆ ಹೊಸ ರೀತಿಯ ಮಳಿಗೆಗಳು ಬರುವುದು ಈಗ ಸಾಮಾನ್ಯವೇ ಆಗಿಬಿಟ್ಟಿದೆ...
ಪ್ರೈವೇಟ್ ಲೇಬಲ್
Updated on: 

ಹಳೆಯ ಕಿರಾಣಿ ಅಂಗಡಿಗಳ ಜಾಗಕ್ಕೆ ಹೊಸ ರೀತಿಯ ಮಳಿಗೆಗಳು ಬರುವುದು ಈಗ ಸಾಮಾನ್ಯವೇ ಆಗಿಬಿಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ಬಿಗ್ ಬಜಾರ್, ಫುಡ್ ಬಜಾರ್‌ನಂಥ ಮಳಿಗೆಗಳು ತಮ್ಮದೇ ಆದ ಛಾಪು ಮೂಡಿಸಿವೆ. ಒಂದೇ ಮಳಿಗೆಯಲ್ಲಿ ಎಲ್ಲ ರೀತಿಯ ವಸ್ತುಗಳನ್ನು ಅವು ಮಾರಾಟ ಮಾಡುತ್ತವೆ. ಹೀಗಾಗಿ, ಗ್ರಾಹಕರಿಗೆ ಒಂದೇ ಮಳಿಗೆಯಲ್ಲಿ ಎಲ್ಲ ರೀತಿಯ ವಸ್ತುಗಳು ದೊರೆಯುತ್ತವೆ.
ಆದರೆ ಈ ಇಂಥ ಮಳಿಗೆಗಳು ತಮ್ಮ ವಹಿವಾಟಿನಲ್ಲಿ ಕೊಂಚ ಭಿನ್ನತೆ ಅನುಸರಿಸಲು ಆರಂಭಿಸಿವೆ. ನಮ್ಮ ನಿಮ್ಮಂಥ ಗ್ರಾಹಕರಿಗೆ ಅಗತ್ಯವಾದ ಬೇಳೆ ಕಾಳುಗಳು ಮತ್ತು ಇತರ ವಸ್ತುಗಳನ್ನು ತಮ್ಮದೇ ಆದ ಬ್ರಾಂಡ್‌ಗಳಲ್ಲಿ ಬಿಡುಗಡೆ ಮಾಡಲು ಅವು ಮುಂದಾಗಿವೆ (ಈಗಾಗಲೇ ಹಲವು ಆಹಾರ ಮಳಿಗೆಗಳು ಇಂಥ ಕ್ರಮ ಅನುಸರಿಸುತ್ತಿವೆ).
ದೇಶದ ಹೈಪರ್ ಮಾರ್ಕೆಟ್‌ಗಳಲ್ಲಿ ಒಂದಾಗಿರುವ ಫ್ಯೂಚರ್‌ಗ್ರೂಪ್ ಇಂಥ ಒಂದು ನಿರ್ಧಾರಕ್ಕೆ ಬಂದಿದೆ. ಇನ್ನು ಸುಮಾರು ಆರರಿಂದ ಎಂಟು ತಿಂಗಳಲ್ಲಿ ಕಂಪನಿ ತನ್ನದೇ ಆದ ಬ್ರಾಂಡ್‌ಗಳಲ್ಲಿ ವಿವಿಧ ರೀತಿಯ ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಶುರುವಾಗಿದೆ
ಪ್ರಾದೇಶಿಕವಾಗಿ ಈಗಾಗಲೇ ಫ್ಯೂಚರ್ ಗ್ರೂಪ್ ಇಂಥ ಒಂದು ಕೆಲಸಕ್ಕೆ ಕೈ ಹಾಕಿದೆ. ಕೇರಳದಲ್ಲಿ ಈಗಾಗಲೇ ಕೆಂಪು ಅಕ್ಕಿ (ಕುಸುಬಲಕ್ಕಿ)ಯನ್ನು 'ರೆಡ್ ಮಟ್ಟ' ಎಂಬ ಬ್ರಾಂಡ್ ಹೆಸರಿನಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಬೇಳೆ ಕಾಳುಗಳನ್ನು 'ಏಕ್‌ತಾ' ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತಿದೆ.
ಈ ಮೂಲಕ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಾದೇಶಿಕವಾಗಿ ತನ್ನನ್ನು ವಿಸ್ತರಿಸಿಕೊಂಡು ಜನರಿಗೆ ಹೆಚ್ಚು ಸನಿಹವಾಗಲು ಮುಂದಾಗುತ್ತದೆ. ಮತ್ತೊಂದು ಪ್ರಮುಖವಾದ ಅಂಶವೇನೆಂದರೆ ಸಮುದಾಯ ಆಧಾರಿತ ಆಹಾರ ಪದ್ಧತಿಗಳನ್ನು ಅದು ಕೇಂದ್ರೀಕರಿಸಲು ಮುಂದಾಗಿದೆ.

ಹೆಚ್ಚಲಿದೆ ಖಾಸಗಿ ಬ್ರಾಂಡ್
ಮಾರುಕಟ್ಟೆ ಸಂಶೋಧನಾ ಸಂಸ್ಥೆ ಎ.ಸಿ.ನಿಲ್ಸನ್ ನಡೆಸಿದ ಸಂಶೋಧನೆ ಪ್ರಕಾರ 2015ರ ವೇಳೆಗೆ ದೇಶದಲ್ಲಿ ಖಾಸಗಿ ಬ್ರಾಂಡ್ ವಹಿವಾಟು 3,108 ಕೋಟಿಗೆ ಹೆಚ್ಚಲಿದೆ. 2012ರಲ್ಲಿ ಖಾಸಗಿ ಬ್ರಾಂಡ್ ವಹಿವಾಟು ಶೇ.12ರಷ್ಟು ವೃದ್ಧಿಸಿದೆ.
ಇದರಲ್ಲಿ ಬೆಳಗಿನ ತಿಂಡಿಯ ವಸ್ತುಗಳು, ಪ್ಯಾಕ್ ಮಾಡಿದ ಆಹಾರ, ಕೆಚಪ್ ಮತ್ತು ಸಾಸ್‌ಗಳು ಸೇರಿ ಶೇ.75ರಷ್ಟು ಖಾಸಗಿ ಬ್ರಾಂಡ್‌ನ ವಸ್ತುಗಳು ಎಂದು ಪರಿಗಣಿತವಾಗುತ್ತವೆ. ಇದರ ಜತೆಗೆ  ಗ್ರಾಹಕರಿಗೆ ಅಗತ್ಯವಾಗಿರುವ ವಸ್ತುಗಳೂ ಕೂಡ ಅಷ್ಟೇ ವೇಗವಾಗಿ ಮಾರಾಟವಾಗಿ ಹೋಗುತ್ತವೆ.

ಟಾಟಾ ಹಿಂದೆ ಬಿದ್ದಿಲ್ಲ
ಆಹಾರ ವಸ್ತುಗಳ ವಿಚಾರದಲ್ಲಿ ಫ್ಯೂಚರ್ ಗ್ರೂಪ್ ತನ್ನದೇ ಆದ ಬ್ರಾಂಡ್‌ಗಳನ್ನು ಹೊರತರಲು ಸಿದ್ಧತೆ ನಡೆಸಿದ್ದರೆ ಟಾಟಾ ಸಮೂಹದ ಇನ್ಫಿನಿಟಿ ರಿಟೇಲ್ ಕೂಡ ಮತ್ತೊಂದು ರೀತಿಯ ಸಾಹಸಕ್ಕೆ ಮುಂದಾಗಿದೆ. ಇಲೆಕ್ಟ್ರಾನಿಕ್ ಉಪಕರಣ ಮತ್ತು ಮೊಬೈಲ್ ಫೋನ್ ಮತ್ತಿತರ ವಸ್ತುಗಳ ಮಳಿಗೆ 'ಕ್ರೋಮಾ' ಅನ್ನು ಹೊಂದಿರುವ ಈ ಸಂಸ್ಥೆ ತನ್ನದೇ ಆದ ಬ್ರಾಂಡ್‌ಗಳನ್ನು ಹೊಂದಲು ಮುಂದಾಗಿದೆ.
ಪ್ರಸಕ್ತ ವರ್ಷ ಮೊಬೈಲ್ ಫೋನ್, ಟ್ಯಾಬ್ಲೆಟ್‌ಗಳನ್ನು ತನ್ನದೇ ಆದ ಬ್ರಾಂಡ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪ್ರಸಕ್ತ ಹಣಕಾಸಿನ ವರ್ಷದಲ್ಲಿ ಖಾಸಗಿ ಬ್ರಾಂಡ್‌ಗಳ ವಸ್ತುಗಳ ಮಾರಾಟದಿಂದ 200 ಕೋಟಿ ನಿರೀಕ್ಷೆ ಮಾಡುತ್ತಿದೆ ಇನ್ಫಿನಿಟಿ ರಿಟೇಲ್.
ಅದನೇ ಇರಲಿ. ಒಂದೇ ಬ್ರಾಂಡ್‌ನ ಮಳಿಗೆಯಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ವಸ್ತುಗಳು ಈಗಾಗಲೇ ಸಿಗುತ್ತಿವೆ. ಮುಂದಿನ ದಿನಗಳಲ್ಲಿ ಅದರಲ್ಲಿ ಮತ್ತಷ್ಟು ವೆರೈಟಿಗಳು ಸಿಗುತ್ತವೆ ಎನ್ನುವುದು ಇನ್ನೂ ಖಾತರಿಯಾದಂತಾಯಿತು.

ಖಾಸಗಿ ಲೇಬಲ್ ಎಂದರೇನು?
ಸ್ವತಂತ್ರ ಉತ್ಪಾದಕರಿಂದ ಉತ್ಪಾದಿಸಲ್ಪಟ್ಟ ವಸ್ತು (ಟಿ.ವಿ.. ಫ್ರಿಡ್ಜ್, ವಾಷಿಂಗ್ ಮೆಷೀನ್ ಇತ್ಯಾದಿ)ಗಳನ್ನು ಹೈಪರ್ ಮಾರುಕಟ್ಟೆಯ ಸಂಸ್ಥೆಗಳು ಖರೀದಿಸುತ್ತವೆ. ನಂತರ ಅವುಗಳು ತಮ್ಮ ಸಂಸ್ಥೆಯ ಹೆಸರು ಮತ್ತು ಲಾಂಛನದಲ್ಲಿ ಮಾರುತ್ತವೆ. ಅಂದ ಹಾಗೆ ಇಂಥ ಉತ್ಪನ್ನ ಸಿಗುವುದು ಕೇವಲ ಈ ಕಂಪನಿಗಳ ಮಳಿಗೆಗಳಲ್ಲಿ ಮಾತ್ರ.

ದೇಶದಲ್ಲಿರುವ ಖಾಸಗಿ ಲೇಬಲ್ ಉದ್ದಿಮೆ

  •     ಹೌಸ್ ಕರಿ (ಏಛ್ಡಡಿಜ ಈ್ಡ್ಠ್ಠಣ)
  •     ಕೆ.ರಹೇಜಾ ಕಾರ್ಪ್‌ಗೆ ಒಳಪಟ್ಟ ಶಾಪರ್ಸ್ ಸ್ಟಾಪ್‌ನ 'ಸ್ಟಾಪ್‌'
  •     ಟಾಟಾ ಸಮೂಹದ ಇನ್ಫಿನಿಟಿ ರಿಟೇಲ್‌ನ 'ಕ್ರೋಮಾ'
  •     ಟೇಸ್ಟಿ ಟ್ರೀಟ್, ಕ್ಲೀನ್ ಮೇಟ್, ಕೇರ್ ಮೇಟ್, ಫ್ಯೂಚರ್ ಗ್ರೂಪ್‌ನ ಬಿಗ್ ಬಜಾರ್ ಸಹವರ್ತಿ ಬ್ಯಾಂಡ್‌ಗಳಾದ ಏಕ್‌ತಾ ಮತ್ತು ಸಚ್
ಜನಪ್ರಿಯಗೊಳ್ಳಲು ಕಾರಣ?
  •     ಖಾಸಗಿ ಸಂಸ್ಥೆಗಳ ವಸ್ತುಗಳು ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭಾಂಶ ಒದಗಿಸಿಕೊಡುತ್ತವೆ. ಜತೆಗೆ ವಿತರಣಾ ವೆಚ್ಚ ಕಡಿಮೆ ಪ್ರಮಾಣದಲ್ಲಿರುತ್ತದೆ.
  •     ವಿಶೇಷವಾಗಿ ಪ್ರಾದೇಶಿಕವಾರು ಮತ್ತು ಸಾಮುದಾಯಿಕ ಆಹಾರ ಪದ್ಧತಿಗಳು ಇರುವಲ್ಲಿ ಇಂಥ ಸಂಸ್ಥೆಗಳು ತಮ್ಮ ಉದ್ದಿಮೆಗಳನ್ನು ವಿಸ್ತರಿಸುವುದು ಕಡಿಮೆ. ಆದರೆ ಚಿಲ್ಲರೆ ಮಾರಾಟಗಾರರ ಮೂಲಕ ಅವು ತಮ್ಮ ಉತ್ಪನ್ನಗಳನ್ನು ಮಾರುತ್ತವೆ.
  • 3,108 - ಕೋಟಿ ರುಪಾಯಿ. ಇದು 2015ರ ವೇಳೆಗೆ ದೇಶದಲ್ಲಿ ವಿಸ್ತರಿಸಬಹುದಾದ ಖಾಸಗಿ ಲೇಬಲ್ (ಪ್ರೈವೇಟ್ ಲೇಬಲ್) ಉದ್ದಿಮೆಯ ಮೌಲ್ಯ.
  • ಶೇ.75 - ಖಾಸಗಿ ಲೇಬಲ್ ಲಾಂಛನದಲ್ಲಿ ಮಾರುವ ವಸ್ತುಗಳ ಪೈಕಿ ಆಹಾರ ಕ್ಷೇತ್ರದ ಪಾಲು ಇದು.
  • ಶೇ.10.5 - 2020ರ ವೇಳೆಗೆ ದೇಶದಲ್ಲಿನ ಖಾಸಗಿ ಲೇಬಲ್ ವಹಿವಾಟು ತಲುಪಲಿರುವ ಶೇಕಡವಾರು ಸಂಖ್ಯೆ.
  • ಶೇ.4.5 - ಸದ್ಯ ಇರುವ ಉದ್ದಿಮೆಯ ಪ್ರಮಾಣ.
- ಸದಾಶಿವ ಕೆ.
khandige29@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com