

ನೀವು ಮಾಲ್, ಸೂಪರ್ ಮಾರ್ಕೆಟ್ಗಳಲ್ಲಿ ಖರೀದಿಸುವ ಉತ್ಪನ್ನಗಳು ಗುಣಮಟ್ಟದ್ದೇ
ಅಥವಾ ಚೈನಾದ್ದಾ? ಇವು ಎಲ್ಲಿ ತಯಾರಾಗುತ್ತವೆ? ಬಹುರಾಷ್ಟ್ರೀಯ ಕಂಪನಿಗಳು ಅಗತ್ಯ ಮಾಹಿತಿಗಳನ್ನು ಮುಚ್ಚಿಟ್ಟು ವಿದೇಶಿ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರುತ್ತಿವೆಯೇ? ಮಾಲ್, ಸೂಪರ್ ಮಾರ್ಕೆಟ್ಗಳಲ್ಲಿ ಸಿಗುವ ವಸ್ತುಗಳ ಬ್ರಾಂಡ್ ಖರೀದಿಸಬಹುದೇ?
ಇಂಥ ಸಂದೇಹ ಎಂದಾದರೂ ನಿಮಗೆ ಮೂಡಿರುತ್ತದೆ. ಆದರೆ ಈ ಸಂದೇಹ ನಿವಾರಣೆಗೆ ಹೆಚ್ಚಿನ ಪ್ರಯಾಸ ಪಡಬೇಕಿಲ್ಲ. ಬಾರ್ಕೋಡ್ನಲ್ಲಿ ಪರಿಹಾರ ಸಿಗುತ್ತದೆ.
ಏನಿದು ಬಾರ್ ಕೋಡ್?
12 ಅಂಕೆಗಳನ್ನು ಹೊಂದಿರುವ ಈ ಬಾರ್ ಕೋಡ್ ಉತ್ಪನ್ನದ ಸ್ಥಾನವನ್ನು ಹೇಳುತ್ತದೆ. ಆದರೆ, ಬಹುತೇಕ ಗ್ರಾಹಕರು ಅದನ್ನು ನಿರ್ಲಕ್ಷಿಸುವುದೇ ಹೆಚ್ಚು. ಮಾಲ್, ಸೂಪರ್ ಮಾರ್ಕೆಟ್ಗಳಲ್ಲಿ ವಸ್ತುಗಳನ್ನು ಕೊಳ್ಳುವಾಗ ಅದನ್ನು ಒಮ್ಮೆ ನೀವು ಪರೀಕ್ಷಿಸುವುದು ಒಳಿತು. ಅದು ಕೇವಲ ಬಿಲ್ಲಿಂಗ್ಗೆ ಮಾತ್ರವಲ್ಲ, ವಸ್ತುಗಳ ಗುಣಮಟ್ಟ ಅಳೆಯಲೂ ಉಪಯೋಗವಾಗುತ್ತದೆ. ಹಲವು ಉತ್ಪನ್ನಗಳು ಎಲ್ಲಿ ತಯಾರಾಗುತ್ತವೆ, ಮತ್ತಿತರ ಅಗತ್ಯ ಮಾಹಿತಿಗಳನ್ನು ಪ್ಯಾಕ್ಗಳ ಮೇಲೆ ನಮೂದಿಸಿರುವುದಿಲ್ಲ. ಗ್ರಾಹಕರನ್ನು ಏಮಾರಿಸಿ ತಮ್ಮ ವ್ಯಾಪಾರ ಕುದುರಿಸಲು ಜಗತ್ತಿನಾದ್ಯಂತ ಸಾವಿರಾರು ಕಂಪನಿಗಳು ಹೊಂಚುಹಾಕುತ್ತಿವೆ. ಹೀಗಾಗಿ ಬಾರ್ಕೋಡ್ ಬಗ್ಗೆ ಮಾಹಿತಿ ಹೊಂದಿರುವುದು ಪ್ರತಿ ಗ್ರಾಹಕನಿಗೆ ಅಗತ್ಯ. ಮುಖ್ಯವಾಗಿ ಮಾಲ್, ಸೂಪರ್ ಮಾರ್ಕೆಟ್ಗಳಲ್ಲಿ ಆಹಾರ ಹಾಗೂ ಪಾನೀಯಗಳನ್ನು ಖರೀದಿಸುವಾಗ ತಪ್ಪದೇ ಪರಿಶೀಲಿಸಿ.
ಯಾಕೆ ನೋಡಬೇಕು?
ಕೆಲ ಪ್ರತಿಷ್ಠಿತ ಕಂಪನಿಗಳ ಹೊರತಾಗಿ ಉಳಿದ ಕಂಪನಿಯ ಉತ್ಪನ್ನಗಳನ್ನು ಕೊಳ್ಳುವಾಗ ತುಸು ಯೋಚಿಸಿ. ಪ್ಯಾಕೆಟ್ ಮೇಲೆ ಗರಿಷ್ಠ ಮಾರಾಟ ಬೆಲೆ, ಅದರ ಮುಕ್ತಾಯದ ಅವಧಿ, ತೂಕ ಜತೆಗೆ ಈ ಉತ್ಪನ್ನ ಎಲ್ಲಿ ತಯಾರಾಗಿದೆ ಎಂಬುದು ನಮೂದಾಗಿರಬೇಕು. ಆದರೆ ಎಲ್ಲ ಉತ್ಪನ್ನಗಳ ಪ್ಯಾಕೆಟ್ ಮೇಲೆ ಇದು ಬರೆದಿರುವುದಿಲ್ಲ. ಇಂಥ ವೇಳೆ ಬಾರ್ಕೋಡ್, ಗ್ರಾಹಕರಿಗೆ ನೆರವಾಗುತ್ತದೆ. ವಿವಿಧ ಬ್ರಾಂಡ್ಗಳ ಹೆಸರಲ್ಲಿ ನಿಮಗೆ ಚೀನಾ ಉತ್ಪನ್ನಗಳನ್ನು ಮಾರಬಹುದು. ಲೇಬಲ್ ಮೇಲೆ 'ಮೇಡ್ ಇನ್ ಚೈನಾ' ಎಂದು ಬರೆದಿದ್ದರೆ ಗ್ರಾಹಕರು ಅದನ್ನು ಕೊಳ್ಳಲು ಹಿಂದೇಟು ಹಾಕಬಹುದು. ಅಥವಾ ಕಡಿಮೆ ಬೆಲೆಯಲ್ಲಿ ನೀಡುವಂತೆ ಕೇಳಬಹುದು- ಇದನ್ನು ತಪ್ಪಿಸಲು ಕೇವಲ ಬಾರ್ಕೋಡ್ಗಳನ್ನು ಮಾತ್ರ ಬಳಸಿ ಉತ್ಪನ್ನ ಯಾವ ದೇಶದ್ದು ಎಂದು ಹೇಳಲಾಗಿದೆ.
ಮೇಡ್ ಇನ್ ಇಂಡಿಯಾ
ಕೆಲ ಉತ್ಪನ್ನಗಳ ಮೇಲೆ ದೇಶದ ಸ್ಥಳಗಳನ್ನು ಬರೆದಿದ್ದರೂ ಅವು ನಿಜವಾಗಿ ನಮ್ಮ ದೇಶದ್ದೇ ಆಗಿರುವುದಿಲ್ಲ. ಕಂಪನಿಗಳು ತಮ್ಮ ವಿತರಕರ ಹೆಸರು ಹಾಗೂ ವಿಳಾಸ ನಮೂದಿಸಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಹೀಗಾಗಿ ಪ್ಯಾಕ್ಗಳ ಮೇಲೆ ಹೆಸರಿದ್ದರೂ ಅವು ನಿಜವಾಗಿ ಯಾವ ದೇಶದಲ್ಲಿ ತಯಾರಾಗಿವೆ ಎಂಬುದು ಗ್ರಾಹಕರಿಗೆ ತಿಳಿಯುವುದೇ ಇಲ್ಲ. ಈ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಬಾರ್ಕೋಡ್ಗಳು ಬೇಕೇ ಬೇಕಾಗುತ್ತವೆ.
ಯಾವಾಗ ಶುರುವಾಯ್ತು?
ಬಾರ್ಕೋಡ್ ವ್ಯವಸ್ಥೆ ಮೊದಲ ಬಾರಿಗೆ ಜಾರಿಯಾಗಿದ್ದು ಕಾರುಗಳಲ್ಲಿ. ಆದರೆ ಇದು ವ್ಯಾವಹಾರಿಕವಾಗಿ ಯಶಸ್ವಿಯಾಗಲಿಲ್ಲ. ಆದರೆ ಈ ವ್ಯವಸ್ಥೆ ಇತರ ಉಪಯೋಗಕ್ಕೆ ಹಬ್ಬಿತು. 1974ರ ಜೂನ್ನಲ್ಲಿ ರಿಗ್ಲಿ ಕಂಪನಿ, ಚ್ಯೂಯಿಂಗ್ ಗಮ್ಗೆ ಬಳಸಲು ನಿರ್ಧರಿಸಿತು. ಇದಾದ ಬಳಿಕ ವ್ಯಾವಹಾರಿಕವಾಗಿ ಅದರ ಉಪಯೋಗ ಶುರುವಾಯಿತು.
ಬಾರ್ಕೋಡ್ ರಹಸ್ಯ
12 ಅಂಕೆಗಳ ಬಾರ್ಕೋಡ್ನ ಮೊದಲ ಮೂರು ಅಂಕೆಗಳಿಂದ ಅವು ಎಲ್ಲಿ ತಯಾರಾಗಿವೆ ಎಂದು ತಿಳಿದುಕೊಳ್ಳಬಹುದು. ಕೆಲ ಬಾರ್ಕೋಡ್ನ ಆರಂಭದ ಮೂರು ಅಂಕೆ ಹಾಗೂ ಅವುಗಳ ದೇಶ ಯಾವುದು ಎಂಬುದರ ವಿವರ ಇಲ್ಲಿದೆ...
890 ಭಾರತ
690, 691, 692 ಚೈನಾ
00 - 09 ಯುಎಸ್ಎ ಹಾಗೂ ಕೆನಡಾ
30 - 37 ಪ್ರಾನ್ಸ್
40 - 44 ಜರ್ಮನಿ
471 ತೈವಾನ್
49 ಜಪಾನ್
50 ಇಂಗ್ಲೆಂಡ್
- ಗಣೇಶ ಹೆಗಡೆ