ವಿಜಯ ಬ್ಯಾಂಕ್ಗೆ ರು. 132.46 ಕೋಟಿ ಆದಾಯ
ಕ.ಪ್ರ.ವಾರ್ತೆ, ಬೆಂಗಳೂರು, ಜು. 29-
ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ವಿಜಯ ಬ್ಯಾಂಕ್ ರು. 132.46 ಕೋಟಿ ನಿವ್ವಳ ಆದಾಯ ಗಳಿಸಿ ಶೇ. 19ರಷ್ಟು ಪ್ರಗತಿ ಕಂಡಿದೆ ಎಂದು ವಿಜಯ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಉಪೇಂದ್ರ ಕಾಮತ್ ಅವರು ತಿಳಿಸಿದ್ದಾರೆ.
ಪ್ರಥಮ ತ್ರೈಮಾಸಿಕದ ವಹಿವಾಟು ಹಾಗೂ ಸಾಧನೆ ಕುರಿತು ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ರು. 1,05,369 ಠೇವಣಿ ಹಾಗೂ ಮುಂಗಡ ರು. 67,964 ಸೇರಿದಂತೆ ಒಟ್ಟು ರು. 1,73,333 ಕೋಟಿ ವಹಿವಾಟು ನಡೆಸಿದೆ. ಇದರಲ್ಲಿ ಠೇವಣಿ ಹಾಗೂ ನಿರ್ವಹಣಾ ಆದಾಯದಲ್ಲಿ ಕ್ರಮವಾಗಿ ಶೇ.22 ಮತ್ತು ಶೇ. 28ರಷ್ಟು ಏರಿಕೆ ಆಗಿದೆ. ಜತೆಗೆ, ಬಡ್ಡಿ ಆದಾಯ ರು. 1805 ಕೋಟಿ ತಲುಪಿದ್ದು, ಬಡ್ಡಿ ಹೂಡಿಕೆ ರು. 577 ಕೋಟಿ ತಲುಪಿದ್ದು, ಇವೆರಡನ್ನೂ ಕಳೆದ ಸಾಲಿನ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಕ್ರಮವಾಗಿ ಶೇ. 7.77 ಮತ್ತು ಶೇ. 12ರಷ್ಟು ಏರಿಕೆ ಕಂಡಿವೆ. ಈ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ಒಟ್ಟು ರು. 132.46 ಕೋಟಿ ನಿವ್ವಳ ಆದಾಯ ಗಳಿಸಲಾಗಿದ್ದು, ಇದು ಕಳೆದ ಸಾಲಿನ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 19ರಷ್ಟು ಅಧಿಕ ಇದೆ ಎಂದು ಅವರು ತಿಳಿಸಿದರು.
ಬ್ಯಾಂಕ್ ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ 9 ಹೊಸ ಶಾಖೆಗಳನ್ನು ತೆರೆದಿದ್ದು, ಒಟ್ಟು ಶಾಖೆಗಳ ಸಂಖ್ಯೆ 1409 ತಲುಪಿದೆ. ಹಾಗೆಯೇ, 64 ಹೊಸ ಎಟಿಎಂಗಳನ್ನು ಹೊಸದಾಗಿ ತೆರೆಯಲಾಗಿದ್ದು, ಅವುಗಳ ಒಟ್ಟು ಸಂಖ್ಯೆ 938 ತಲುಪಿದೆ.
ಮುಂದಿನ ಗುರಿ: ಬ್ಯಾಂಕ್ 2014 ಮಾರ್ಚ್ ಒಳಗೆ ರು. 1,22,000 ಕೋಟಿ ಠೇವಣಿ ಹಾಗೂ ರು. 88,000 ಕೋಟಿ ಮುಂಗಡ ಸೇರಿದಂತೆ ಒಟ್ಟು ರು. 2,10,000 ಕೋಟಿ ವಹಿವಾಟು ನಡೆಸುವ ಗುರಿ ಇರಿಸಿಕೊಂಡಿದೆ. ಜತೆಗೆ, ಬ್ಯಾಂಕ್ ಶಾಖೆಗಳ ಸಂಖ್ಯೆಯನ್ನು 1500ಕ್ಕೇರಿಸುವ ಹಾಗೂ ಶಾಖೆಗೊಂದು ಎಟಿಎಂ ಸ್ಥಾಪಿಸುವ ಗುರಿ ಕೂಡ ಇದೆ ಎಂದು ಅವರು ತಿಳಿಸಿದರು. ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಕೆ.ರಾಮದಾಸ್ ಶೆಣೈ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

