

ಅನುಭವಿಗಳ ತೂಕದ ಮಾತು
ಉದ್ಯಮ ಸ್ಥಾಪನೆಯ ಉದ್ದೇಶ ಹೊಂದಿರುವವರಿಗೆ ಹಲವು ಐಡಿಯಾಗಳಿರುತ್ತವೆ. ಅವುಗಳನ್ನು ಮಾರುಕಟ್ಟೆಗೆ ತಂದರೆ ಅದು ಯಶಸ್ವಿಯಾಗುತ್ತದೆ ಎನ್ನುವ ವಿಶ್ವಾಸವೂ ಇರುತ್ತದೆ. ಆದರೆ, ಇಂಥ ವೇಳೆ ಮುಖ್ಯವಾಗಿ ಎದುರಾಗುವ ಸಮಸ್ಯೆಯೆಂದರೆ ಅದು ಹಣಕಾಸಿನದ್ದೇ.
ಯಾವುದೇ ಉದ್ಯಮ, ಆರಂಭದಲ್ಲಿ ಕಣ್ಣೀರಿಳಿಸುತ್ತದೆ. ಆದರೆ ಈ ಸಾಹಸಿ ಉದ್ಯಮಿ ತನ್ನ ಬಗ್ಗೆ ದೃಢ ನಿರ್ಧಾರ ಕೈಗೊಂಡು ಮುನ್ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಇಂಥ ಸಾಹಸಿ ಉದ್ಯಮಿಗಳಿಗೆ ನೆರವಾಗಲು ಇರುವುದೇ ಸೀಡ್ ಫಂಡ್, ವೆಂಚರ್ ಕ್ಯಾಪಿಟಲ್ ಮತ್ತು ಪ್ರೈವೇಟ್ ಈಕ್ವಿಟಿ ವಿಧಾನಗಳು. ಈ ರೀತಿ ಉದ್ಯಮವನ್ನು ಸ್ಥಾಪಿಸಿ ಯಶಸ್ವಿಯಾಗಿರುವವರು ಹಲವು ಮಂದಿ ಕಾಣಸಿಗುತ್ತಾರೆ.
ಉತ್ತಮ ಯೋಚನೆಗಳಿಗೆ ಹಣಕಾಸು ಸಂಪನ್ಮೂಲವನ್ನು ಒದಗಿಸಿರುವ ಮತ್ತು ಯಶಸ್ವಿ ಉದ್ಯಮ ಸ್ಥಾಪನೆಗೆ ನೆರವಾಗಿರುವವರು ಈ ಕುರಿತಂತೆ ಹಲವು ಮಾಹಿತಿಗಳನ್ನು ನೀಡುತ್ತಾರೆ.
ಇವರು ಅಂಥವರಲ್ಲೊಬ್ಬರು!
ಅಸೆಂಟ್ ಕ್ಯಾಪಿಟ ಸ್ಥಾಪಕ ರಾಜಕುಮಾರ್ ಇಂಥ ಸಾಹಸ ಮಾಡಿದವರಲ್ಲೊಬ್ಬರು. ಉದ್ಯಮಿ ಮತ್ತು ಹೂಡಿಕೆದಾರರಿಗೆ ನಡುವೆ ಪ್ರೈವೇಟ್ ಈಕ್ವಿಟಿ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರವರು. ಈ 8 ವರ್ಷಗಳ ಅವಧಿಯಲ್ಲಿ 65 ದಶಕೋಟಿ ಡಾಲರ್ ಪ್ರಮಾಣದಲ್ಲಿ ಹಣಕಾಸು ನೆರವನ್ನು ಈ ಮೂಲಕ ಒದಗಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರ ನಂಬಿಕೆ ಕಳೆದುಕೊಂಡಿದೆ. ಐಪಿಒಗಳ ಮೂಲಕ ಹಣ ಸಂಗ್ರಹಿಸುವುದು ಸುಲಭವಲ್ಲ. ಉದ್ಯಮ ಆರಂಭಿಸುವವರಿಗೆ ಇರುವ ಸರಾಗ ಹಾದಿ ಎಂದರೆ ಈ ರೀತಿಯ ಪ್ರೈವೇಟ್ ಈಕ್ವಿಟಿ ವಿಧಾನ ಎನ್ನಬಹುದಾಗಿದೆ ಎನ್ನುತ್ತಾರೆ.
ಇತ್ತೀಚಿನ ದಿನಗಳಲ್ಲಿ ಕಾಣ ಸಿಕ್ಕುವ ಒಂದು ಅಂಶವೆಂದರೆ ಉದ್ಯಮ ಸ್ಥಾಪಿಸಿ ಮಾರುವುದೇ ಆಗಿದೆ. ಬ್ಯುಲ್ಡ್ ಆ್ಯಂಡ್ ಸೇಲ್ ಉದ್ಯಮಿಗಳ ಇತ್ತೀಚಿನ ಅಪ್ಯಾಯಮಾನ ಕ್ಷೇತ್ರವಾಗಿದೆ. ಇದೊಂದು ರೀತಿಯಲ್ಲಿ ಹೂಡಿಕೆದಾರರಿಗೆ- ಉದ್ಯಮ ಸ್ಥಾಪಿಸುವವರಿಗೆ ವಿನ್- ವಿನ್ ಮಾದರಿ ಎನ್ನುವಂಥದ್ದಾಗಿದೆ.
ಐಡಿಜಿ ವೆಂಚರ್ಸ್ ಇಂಡಿಯಾದ ಸ್ಥಾಪಕ ಸುಧೀರ್ ಸೇಥಿ ಆರ್ಥಿಕ ಸಂಪನ್ಮೂಲ ಪಡೆದುಕೊಳ್ಳುವ ಉದ್ಯಮಿಗಳಿಗೆ ಮಹತ್ವದ ವಿಷಯಗಳನ್ನು ತಿಳಿಸುತ್ತಾರೆ. ಉದ್ಯಮ ಆರಂಭಿಸುವ ಯಾವುದೇ ವ್ಯಕ್ತಿಗೆ ಸಮಯ ಮತ್ತು ಗುರಿ ಅತ್ಯಂತ ಮುಖ್ಯ. ಎಲ್ಲಾ ಕೆಲಸವನ್ನೂ ವ್ಯವಹಾರಸ್ಥನೆನಿಸಿಕೊಂಡವನೇ ಮಾಡಲಾಗದು. ಮಾರುಕಟ್ಟೆ ವಿಸ್ತರಿಸುವುದಕ್ಕೆ ನೆಟ್ವರ್ಕ್ ಸ್ಥಾಪಿಸಿಕೊಳ್ಳಬೇಕು. ನಿರ್ವಹಣೆಯತ್ತ ಗಮನ ಹರಿಸಬೇಕು. ಇದನ್ನು ಯಾವುದೇ ಎಂಬಿಎ ಸ್ಕೂಲ್ಗಳಲ್ಲಾಗಲೀ, ಬಿಸಿನೆಸ್ ಇನ್ಸ್ಟಿಟ್ಯೂಷನ್ಗಳಲ್ಲಿ ಕಲಿಸಿಕೊಡುವುದಿಲ್ಲ. ಸಮಾಜದಲ್ಲಿ ಬೆರೆತು ಅರಿಯಬೇಕಾಗುತ್ತದೆ. ತಾನೆಲ್ಲಿ ಸಾಗುತ್ತಿದ್ದೇನೆ. ಎತ್ತ ಸಾಗಬೇಕು ಎನ್ನುವ ದೃಷ್ಟಿಕೋನ ಉದ್ಯಮಿ ಆಗಬಯಸುವವನಿಗೆ ಬಹಳ ಮುಖ್ಯ.
ಹಣಕಾಸು ಸಂಪನ್ಮೂಲ ಪಡೆದುಕೊಳ್ಳುವವನು ಯಾವ ರೀತಿಯ ರಿಸ್ಕ್ ತೆಗೆದುಕೊಳ್ಳುತ್ತಾನೆ ಎನ್ನುವುದನ್ನು ವೆಂಚರ್ ಕ್ಯಾಪಿಟಲಿಸ್ಟ್ ಆಗಲೀ, ಪಬ್ಲಿಕ್ ಈಕ್ವಿಟಿ ಡಿಸ್ಟ್ರಿಬ್ಯುಷನ್ ಮಂದಿಯಾಗಲೀ ಗಮನಿಸುತ್ತಾರೆ. ಹಾಕಿದ ಬಂಡವಾಳ ಉತ್ತಮ ಪ್ರತಿಫಲದೊಂದಿಗೆ ವಾಪಸ್ ಬರುವುದು ಅವರಿಗೂ ಮುಖ್ಯವಾಗಿರುತ್ತದೆ. ಅದೇ ರೀತಿ ತೆಗೆದುಕೊಳ್ಳುವ ರಿಸ್ಕ್ ಯಾವ ರೀತಿ ಸರಳಗೊಳಿಸಿಕೊಳ್ಳಬೇಕೆನ್ನುವುದು ಆರಂಭಿಕ ಉದ್ಯಮಿಗೂ ಅರಿವಿರಬೇಕಾಗುತ್ತದೆ.
ಬಿಸಿಐಸಿ ಕಾರ್ಯಕ್ರಮದಲ್ಲಿ ನ್ಯೂ ಎಂಟರ್ಪ್ರೈಸಸ್ ಅಸೋಸಿಯೇಟ್ಸ್ ಇಂಡಿಯಾದ ಮುಖ್ಯ ನಿರ್ದೇಶಕ ಬೆನ್ ಮಥಿಯಾ ಆರಂಭಿಕ ಉದ್ದಿಮೆದಾರರಿಗೆ ಕಿವಿಮಾತು ಹೇಳುತ್ತಾ, ಸರಕು ಅಥವಾ ಸೇವೆಯ ಗುಣಮಟ್ಟಕ್ಕೆ ಉದ್ಯಮಿಯಾಗಬಯಸುವವನು ಹೆಚ್ಚಿನ ಆದ್ಯತೆ ನೀಡಬೇಕು. ಏಕೆಂದರೆ, ಇಂದು ಯಾವ ಕಡೆಯಿಂದ ಬೇಕಾದರೂ ಸ್ಪರ್ಧೆ ಎದುರಾಗಬಹುದು. ಇದನ್ನು ಎದುರಿಸಲು ಗುಣಮಟ್ಟ ಪ್ರಮುಖ ಅಸ್ತ್ರ ಅನ್ನೋದು ಅವರ ವಾದ. ಯಾವುದೇ ಔದ್ಯಮಿಕ ಒಡಂಬಡಿಕೆ ಮಾಡಿಕೊಳ್ಳುವ ಮುನ್ನ ಕಾನೂನು ಭದ್ರತೆ ಅಗತ್ಯ. ಸೂಕ್ತ ವಕೀಲರೊಂದಿಗೆ ಸಂಪರ್ಕಿಸಿ, ಸಂಪನ್ಮೂಲ ಪಡೆದುಕೊಳ್ಳುವ ಕುರಿತಂತೆ ಹಕ್ಕುಪತ್ರಗಳನ್ನು ಮಾಡಿಕೊಳ್ಳುವುದು ಎಲ್ಲ ದೃಷ್ಟಿಯಿಂದಲೂ ಸುರಕ್ಷಿತ. ಈ ರೀತಿ ವೆಂಚರ್ ಕ್ಯಾಪಿಟಲ್, ಪಬ್ಲಿಕ್ ಈಕ್ವಿಟಿಗಳ ನೆರವಿನೊಂದಿಗೆ ಸ್ಥಾಪನೆಗೊಂಡು ಯಶಸ್ವಿಯಾಗಿರುವ ಉದ್ಯಮಗಳಿಗೆ ಕೆಲವು ಉದಾಹರಣೆಗಳೆಂದರೆ, ಥಿಂಕ್ ಲ್ಯಾಬ್, ಕಾರ್ವಾಲೆ, ವಾತ್ಸಲ್ಯ, ಎಡುಸ್ಪೋರ್ಟ್ಸ್, ರೆಡ್ ಬಸ್ ಮೊದಲಾದವುಗಳು.
ಕೆ.ಎನ್. ಸತೀಶ