ಲಂಚದ ಪಾಲು

ಲಂಚದ ಪಾಲು
Updated on: 

ಭ್ರಷ್ಟಾಚಾರವೆನ್ನುವುದು ಜಾಗತಿಕ ಮಟ್ಟದಲ್ಲಿ ಪೆಡಂಭೂತವಾಗಿ ಕಾಡುತ್ತಿದೆ. ಅದರ ಪ್ರಭಾವ ಭಾರತದ ಮಟ್ಟಿಗೆ ಸ್ವಲ್ಪ ಜಾಸ್ತಿಯೇ ಎನ್ನಬಹುದು. ಅಕ್ರಮ, ಹಗರಣ, ಲಂಚಾವತಾರಗಳು ಅಧಿಕಾರದ ಮಂಚವೇರಿವೆ. ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳಲ್ಲಿ ಇವುಗಳದ್ದೇ ಸುದ್ದಿ.
ಹೌದು. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ತನ್ನದೇ ಆದ ಸಂಸ್ಕೃತಿಯಿಂದ ಹಿರಿಮೆ, ಗರಿಮೆ ಇದೆ. ನಮ್ಮ ಸಂಸ್ಕೃತಿಯನ್ನು ಅನ್ಯ ರಾಷ್ಟ್ರಗಳು ಗೌರವಿಸುತ್ತಿವೆ. ಆದರೆ ಭ್ರಷ್ಟಾಚಾರ, ಲಂಚಗುಳಿತನ, ವಂಚನೆ ವಿಷಯ ಬಂದಾಗ ಭಾರತ ತಲೆತಗ್ಗಿಸುವಂತಾಗಿದೆ. ಜಾಗತಿಕ ಖ್ಯಾತಿ ಹೊಂದಿರುವ 'ಕ್ರೋಲ್ ಸಂಸ್ಥೆ' ನೀಡಿರುವ ವಾರ್ಷಿಕ ಸಂಶೋಧನೆ ವರದಿಯೇ ಇದಕ್ಕೆ ಕನ್ನಡಿ.
ಕ್ರೋಲ್ ಸಂಸ್ಥೆ 2013-14ರ ಜಾಗತಿಕ ವಂಚನೆಯ ಸಂಶೋಧನಾ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಸಂಸ್ಥೆಯ ಸಮಗ್ರ ವರದಿ ಪ್ರಕಾರ, ಭಾರತದಲ್ಲಿ ಶೇ.71ರಷ್ಟು ವಂಚನೆ ನಡೆಯುತ್ತಿದೆಯಂತೆ. ಇನ್ನೂ ಆಘಾತಕಾರಿ ವಿಷಯವೆಂದರೆ ಕಳೆದ ವರ್ಷಕ್ಕಿಂತ(ಶೇ.67) ಈ ವರ್ಷ ವಂಚನೆ ಪ್ರಮಾಣದಲ್ಲಿ ಏರಿಕೆ ಕಂಡಿದೆ! ಎಂಬುದು ವರದಿ ಸಾರಾಂಶ.
ಕ್ರೋಲ್ ಸಂಸ್ಥೆಯ ಅಧ್ಯಯನ ಸಮಿತಿಯಲ್ಲಿ ಅರ್ಥಿಕ ಗುಪ್ತಚರ ತಂಡದ 901 ಹಿರಿಯ ನಿರ್ವಹಣಾಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. ಅದರಲ್ಲಿ 51 ಅಧಿಕಾರಿಗಳು ಭಾರತೀಯರೇ ಆಗಿದ್ದರು. ಭಾರತದಲ್ಲಿ ಶೇ.69ರಷ್ಟು ಕಂಪನಿಗಳು ದೊಡ್ಡ ಮಟ್ಟದ ವಂಚನೆಯಲ್ಲಿ ಭಾಗಿಯಾಗಿವೆ. ಅದರಲ್ಲೂ 7 ವಿಧವಾದ ವಂಚನೆಯಲ್ಲಿ ತುಂಬಾ ಅನುಭವ ಹೊಂದಿರುವ ಸತ್ಯವೂ ಬಹಿರಂಗಗೊಂಡಿದೆ.

ಆಸ್ತಿಪಾಸ್ತಿ ಕಳ್ಳತನ
ಜಾಗತಿಕ ಮಟ್ಟದ ಸರಾಸರಿ ಶೇ.28ರಷ್ಟು ಆಸ್ತಿಪಾಸ್ತಿ ಕಳ್ಳತನದಲ್ಲಿ ಭಾರತದ ಶೇ.33ರಷ್ಟು ಕಂಪನಿಗಳು ಭಾಗಿಯಾಗಿವೆ.

ಭ್ರಷ್ಟಾಚಾರ
ಜಾಗತಿಕ ಮಟ್ಟದಲ್ಲಿ ಸರಾಸರಿ ಶೇ.14ರಷ್ಟು ಭ್ರಷ್ಟಾಚಾರವನ್ನು ಕಂಪನಿಗಳು ನಡೆಸಿವೆ. ಶೇ.24ರಷ್ಟು ಭಾರತೀಯ ಕಂಪನಿಗಳು ಇದರಲ್ಲಿ ಪಾಲುದಾರಿಕೆ ಹೊಂದಿವೆ.

ಆಂತರಿಕ ಹಣಕಾಸು ವಂಚನೆ
ಜಾಗತಿಕ ಮಟ್ಟದಲ್ಲಿ ಸರಾಸರಿ ಶೇ.16ರಷ್ಟು ಆಂತರಿಕ ಹಣಕಾಸು ವಂಚನೆ ನಡೆದಿದೆ. ಇದರಲ್ಲಿ ಭಾರತದ ಶೇ.22ರಷ್ಟು ಕಂಪನಿಗಳ ಪಾಲಿದೆ.

ಮಾಹಿತಿ ಕಳವು
ವಿಶ್ವ ಮಟ್ಟದಲ್ಲಿ ಶೇ.22ರಷ್ಟು ಮಾಹಿತಿ ಕಳ್ಳತನ ನಡೆದಿದೆ. ಇದರಲ್ಲಿ ಭಾರತದ ಶೇ.24ರಷ್ಟು ಕಂಪನಿಗಳು ಭಾಗಿಯಾಗಿರುವುದು ತಿಳಿದುಬಂದಿದೆ. ಸಮೀಕ್ಷೆಯಿಂದ ಮತ್ತೊಂದು ಆಸಕ್ತಿದಾಯಕ ವಿಷಯಗಳು ಬೆಳಕಿಗೆ ಬಂದಿವೆ. ಭಾರತದಲ್ಲಿ ಮಾರಾಟಗಾರರ ಮತ್ತು ಪೂರೈಕೆದಾರರ ವ್ಯಾಪ್ತಿಯಲ್ಲೂ ವಂಚನೆ ನಡೆದಿದೆ. ಶೇ.40ರಷ್ಟು ಕಂಪನಿಗಳನ್ನು ಗುರುತಿಸಿ ಸಮೀಕ್ಷೆ ನಡೆಸಿದಾಗ ಈ ಸಂಗತಿ ಬಹಿರಂಗಗೊಂಡಿದೆ. ಜಾಗತಿಕ ಸರಾಸರಿ ಮತ್ತು ಬ್ರಿಕ್ ರಾಷ್ಟ್ರಗಳ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ) ಹೋಲಿಕೆ ನೀಡಲಾಗಿದೆ.

ಬ್ರಿಕ್ ರಾಷ್ಟಗಳಲ್ಲಿ ವಂಚನೆ ಸರಾಸರಿ
ದೇಶ             ಕಿರಿಯ ಉದ್ಯೋಗಿ      ಮಾರಾಟಗಾರ/ಪೂರೈಕೆದಾರ
ಬ್ರೆಜಿಲ್            ಶೇ.25         ಶೇ.31
ರಷ್ಯಾ          ಶೇ.42                     ಶೇ.23
ಭಾರತ          ಶೇ.69                     ಶೇ.40
ಚೀನಾ          ಶೇ.28                     ಶೇ.38
ಜಾಗತಿಕ ಸರಾಸರಿ  ಶೇ.42                     ಶೇ.32

ಹೂಡಿಕೆಗೆ ಹಿಂದೇಟು
ಭಾರತೀಯ ಕಂಪನಿಗಳ ವ್ಯವಹಾರದಲ್ಲಿ ವಂಚನೆ ಮತ್ತು ಭ್ರಷ್ಟಾಚಾರ ಮುಂದುವರಿಯುತ್ತಲೇ ಇದೆ. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುತ್ತಿವೆ.
-ರೇಷ್ಮಿ ಖುರಾನಾ,
ಕ್ರೋಲ್ ಸಂಸ್ಥೆ ಮುಖ್ಯಸ್ಥೆ

- ರುದ್ರಗೌಡ ಮುರಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com