ದಿ ಎಂಡ್!

ದೇಶದಲ್ಲಿ ಸಬ್ಸಿಡಿ ಅಂದರೆ ಸಹಾಯಧನ ದರದ ದಿನಗಳು 'ದಿನಗಳನ್ನು ಎಣಿಸುತ್ತಿವೆಯೋ' ಎಂಬ ಪ್ರಶ್ನೆಯನ್ನು...
ದಿ ಎಂಡ್!
Updated on: 

ದೇಶದಲ್ಲಿ ಸಬ್ಸಿಡಿ ಅಂದರೆ ಸಹಾಯಧನ ದರದ ದಿನಗಳು 'ದಿನಗಳನ್ನು ಎಣಿಸುತ್ತಿವೆಯೋ' ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಇತರ ಮತಗಳನ್ನು ತಂದುಕೊಡುವ ಯೋಜನೆಗಳಿಗೆ ಇದು ಅನ್ವಯವಾಗದಿದ್ದರೂ, ತೈಲೋಲ್ಪನ್ನಗಳ ದರ ವಿಚಾರದಲ್ಲಿ ಈ ಮಾತನ್ನು ಹೇಳಲೇಬೇಕಾಗುತ್ತದೆ.
ಈ ವಾದಕ್ಕೆ ಪೂರಕವಾದದ್ದು ಕಿರೀಟ್ ಪಾರಖ್ ಸಮಿತಿಯ ಶಿಫಾರಸುಗಳು. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸಿನ ವರದಿಯ ಪ್ರಕಾರ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ದರ ತಕ್ಷಣ ಹೆಚ್ಚಿಸಬೇಕು.
ಸದ್ಯ ಡೀಸೆಲ್ ಮೇಲಿನ ಸರ್ಕಾರಿ ನಿಯಂತ್ರಣವನ್ನು ವರ್ಷದ ಒಳಗಾಗಿ ಮುಕ್ತಗೊಳಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಳಿಕೆಯಾಗುತ್ತದೆಯೋ ಅದೇ ರೀತಿ ನಮ್ಮ ದೇಶದಲ್ಲೂ ದರ ಪರಿಷ್ಕರಣೆಯಾಗಬೇಕು ಎನ್ನುವುದು ಸಮಿತಿ ಮಾಡಿದ ಉಲ್ಲೇಖಗಳು.

50 ಪೈಸೆ ಅಲ್ಲ 1
ಇದುವರೆಗೆ ಸರ್ಕಾರಿ ಸ್ವಾಮ್ಯದ ತೈಲಕಂಪನಿಗಳು ಪೆಟೋಲ್ ಬೆಲೆಯನ್ನು 2-5ರ ನಡುವೆ ಪರಿಷ್ಕರಣೆ ಮಾಡುತ್ತಿದ್ದರೆ, ಡೀಸೆಲ್ ದರವನ್ನು 50 ಪೈಸೆಯಷ್ಟು ಹೆಚ್ಚಿಸುತ್ತಿದ್ದವು. ಆದರೆ ಇನ್ನು ಮುಂದೆ ಹಾಗೆ ಇರುವುದಿಲ್ಲ. ಪ್ರತಿ ತಿಂಗಳೂ 1 ದರ ಹೆಚ್ಚಳವಾಗುವ ಸಾಧ್ಯತೆ ಅಧಿಕ.

ಕಾರಣ?
ವೆರಿ ಸಿಂಪಲ್. ಪ್ರತಿ ಲೀಟರ್ ಮೇಲೆ ತೈಲ ಕಂಪನಿಗಳಿಗೆ 11 ನಷ್ಟವಾಗುತ್ತದೆ. ಹೀಗಾಗಿ, ಇಂಥ ನಿರ್ಧಾರ ಕೈಗೊಳ್ಳದೆ ವಿಧಿ ಇಲ್ಲ ಎಂಬುದು ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ವಾದ.

15 ದಿನಕ್ಕೊಮ್ಮೆ
ಹಾಲಿ ಯುಪಿಎ ಸರ್ಕಾರದ ಅವಧಿ ಮುಕ್ತಾಯಕ್ಕೆ ಆರು ತಿಂಗಳು ಅಷ್ಟೇ ಬಾಕಿ. ಈ ಅವಧಿಯಲ್ಲಿ ಪಾರಖ್ ಸಮಿತಿ ವರದಿ ಶಿಫಾರಸುಗಳನ್ನು ಒಪ್ಪಿಕೊಂಡು ಅನುಷ್ಠಾನಗೊಳಿಸದು. ಹೇಳಿಕೇಳಿ ಇನ್ನು ಮುಂದಿನ ದಿನಗಳು ಚುನಾವಣೆಯ ದಿನಗಳು. ಸಮಿತಿ ಶಿಫಾರಸುಗಳನ್ನು ಜಾರಿ ಮಾಡಿ ಕಾಂಗ್ರೆಸ್ ನೇತೃತ್ವದ ಸರ್ಕಾರ 'ತಪ್ಪು' ಖಂಡಿತ ಮಾಡಲಾರದು. ಆದರೆ, ಪ್ರತಿ ತಿಂಗಳಿಗೆ ಪ್ರತಿ ಲೀಟರ್ ಡೀಸೆಲ್‌ಗೆ 1 ಹೆಚ್ಚಳ ಮಾಡುವುದರ ಬದಲು, ಪ್ರತಿ 15 ದಿನಕ್ಕೆ ಒಮ್ಮೆ ದರ ಪರಿಷ್ಕರಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. ಅದನ್ನೂ ಅಳೆದು ಸುರಿದು ನೋಡಲಾಗುತ್ತಿದೆ.

5-10 ಹೆಚ್ಚಿಸಿ
ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿಯೂ ಏರಿಕೆಯಾಗಲಿದೆ. ಪ್ರತಿ ತಿಂಗಳೂ 5-10ರ ವರೆಗೆ ಬೆಲೆಯಲ್ಲಿ ಹೆಚ್ಚಳ ಆಗಲಿದೆ.

ಹೆಚ್ಚು ದಿನ ಇರದು ಸಬ್ಸಿಡಿ
ಒಂದನ್ನಂತೂ ಸ್ಪಷ್ಟವಾಗಿ ಹೇಳಬೇಕಾಗುತ್ತದೆ. ತೈಲೋತ್ಪನ್ನಗಳಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ನಿಧಾನವಾಗಿ ಹಿಂಪಡೆಯುವ ಇರಾದೆ ಸರ್ಕಾರದ್ದು. ಹೀಗಾಗಿ, ಕನಿಷ್ಠವೆಂದರೆ ಹದಿನೈದು ವರ್ಷಗಳಲ್ಲಿ ತೈಲೋತ್ಪನ್ನಗಳಿಗೆ ಸಬ್ಸಿಡಿ ನೀಡುವ ವಿಚಾರ ಕಥೆಯಾದರೂ ಅಚ್ಚರಿ ಏನಿಲ್ಲ.

ಯಾರು ಕಿರೀಟ್ ಪಾರಖ್?
ಸದ್ಯ ಅವರು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (ಇಎಸಿ) ಸದಸ್ಯ. ವಿ.ಪಿ.ಸಿಂಗ್, ರಾಜೀವ್ ಗಾಂಧಿ, ಚಂದ್ರಶೇಖರ್, ಪಿ.ವಿ.ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲೂ ಅವರು ಸಲಹಾ ಮಂಡಳಿ ಸದಸ್ಯರಾಗಿದ್ದರು. 1997ರಿಂದ 1998ರ ವರೆಗೆ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಹಿರಿಯ ಹಣಕಾಸು ಸಲಹೆಗಾರರಾಗಿದ್ದರು. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ,   ಅಮೆರಿಕದ ಮೆಸಾಚ್ಯುಸೆಟ್ಸ್ ತಾಂತ್ರಿಕ ಸಂಸ್ಥೆಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 15 ಪುಸ್ತಕಗಳನ್ನು ಬರೆದಿದ್ದಾರೆ.

ಪಾರಖ್ ಸಮಿತಿ ಹೇಳಿದ್ದೇನು?

  • ಪ್ರತಿ ಮನೆಗೆ 9 ರಿಯಾಯಿತಿ ಅಡುಗೆ ಅನಿಲ ಸಿಲಿಂಡರ್ ಬದಲು 6 ಸಾಕು.
  • ಡೀಸೆಲ್ ಸಬ್ಸಿಡಿ ಮಿತಿಯನ್ನು 6ಕ್ಕೆ ಮಿತಿಗೊಳಿಸಿ.
  • ಇನ್ನೊಂದು ವರ್ಷದಲ್ಲಿ ಡೀಸೆಲ್ ಸಬ್ಸಿಡಿ ಮುಕ್ತಾಯಗೊಳಿಸಿ. ಈ ಮೂಲಕ ಬೊಕ್ಕಸಕ್ಕೆ 72,000 ಕೋಟಿ ಉಳಿಕೆ ಸಾಧ್ಯ.
  • ತನ್ನ ಮೇಲಾಗುತ್ತಿರುವ ಡೀಸೆಲ್ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.
- ಮಿತ್ತಾಳ ನಾರಾಯಣ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com