

ಪಾಲುದಾರಿಕೆಯಲ್ಲಿ ವಿಶ್ವದ ಅತಿದೊಡ್ಡ ರಿಟೇಲ್ ಮಳಿಗೆ ಆರಂಭಿಸಿದ್ದ ಹೆಗ್ಗಳಿಕೆ ಭಾರ್ತಿ ಎಂಟರ್‌ಪ್ರೈಸಸ್ ಮತ್ತು ಅಮೆರಿಕದ ವಾಲ್‌ಮಾರ್ಟ್‌ಗೆ ಸಲ್ಲುತ್ತದೆ. ಆದರೆ, ಆರಂಭವಾದಷ್ಟೇ ವೇಗದಲ್ಲಿ ಎರಡೂ ಕಂಪನಿಗಳು ತಮ್ಮ ನಿರ್ಧಾರದಿಂದ ಹೊರಬಂದು ಪ್ರತ್ಯೇಕವಾಗಿ ಮಳಿಗೆಗಳನ್ನು ಆರಂಭಿಸುವ ನಿರ್ಣಯಕ್ಕೆ ಬಂದಿವೆ.
1976ರಲ್ಲಿ ಸುನಿಲ್ ಭಾರತಿ ಮಿತ್ತಲ್‌ರಿಂದ ಆರಂಭವಾದ ಭಾರ್ತಿ ಎಂಟರ್‌ಪ್ರೈಸಸ್ ಮೊಬೈಲ್ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿದೆ. 2007ರಲ್ಲಿ ದೇಶದ ವಾಣಿಜ್ಯ ಕ್ಷೇತ್ರವೇ ಅಚ್ಚರಿಪಡುವಂಥ ನಿರ್ಧಾರ ಹೊರಬಿದ್ದಿತ್ತು. ಅಮೆರಿಕದ ಚಿಲ್ಲರೆ ಮಾರಾಟ ಕ್ಷೇತ್ರದ ದೈತ್ಯ ವಾಲ್‌ಮಾರ್ಟ್ ಮತ್ತು ಭಾರ್ತಿ ಎಂಟರ್‌ಪ್ರೈಸಸ್ ಜಂಟಿಯಾಗಿ ಶೇ.50-50 ಪಾಲುದಾರಿಕೆಯಲ್ಲಿ ಹೋಲ್‌ಸೇಲ್ ಕ್ಯಾಶ್ ಆ್ಯಂಡ್ ಕ್ಯಾರಿ ಉದ್ದಿಮೆ ಆರಂಭಿಸುವ ಘೋಷಣೆ ಮಾಡಿಕೊಂಡವು. ಈ ಅವಧಿಯಲ್ಲಿ ಅಂಗಡಿ, ಹೋಟೆಲ್‌ಗಳಿಗೆ ಮಾರಾಟ ಮಾಡುವ ಈ ರೀತಿಯ ಸಗಟು ವ್ಯವಹಾರದಲ್ಲಿ ವಿದೇಶಿ ಹೂಡಿಕೆಯ ಬಗ್ಗೆ ಯಾವುದೇ ನಿಯಮಗಳ ಇತಿಮಿತಿ ಇರಲಿಲ್ಲ. ವಿದೇಶಿ ಹೂಡಿಕೆಗೆ ಅಡ್ಡಿ ಇದ್ದದ್ದು ಚಿಲ್ಲರೆ ಕ್ಷೇತ್ರದಲ್ಲಿ ಮಾತ್ರ.
ಶುರುವಾಯ್ತು 'ಬೆಸ್ಟ್ ಪ್ರೈಸ್' ಮಳಿಗೆ
ಭಾರ್ತಿ- ವಾಲ್‌ಮಾರ್ಟ್ ಜೊತೆಗೂಡಿ ಆರಂಭಿಸಿದ್ದೇ 'ಬೆಸ್ಟ್ ಪ್ರೈಸ್' ಮಳಿಗೆ. 2009ರಲ್ಲಿ ಅಮೃತಸರದಲ್ಲಿ ದೇಶದ ಮೊದಲ ಮಳಿಗೆ ಶುರು. ನಂತರ ವಿವಿಧ ಭಾಗಗಳಲ್ಲಿ ಈ ರೀತಿಯ 20 ಮಳಿಗೆಗಳು ಕಣ್ತೆರೆದವು.
ಹಿಂಬಾಗಿಲ ಪ್ರವೇಶ
ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ಅನುಮತಿ ಸಿಕ್ಕಿದ್ದೇ 2012ರ ಸೆಪ್ಟೆಂಬರ್‌ನಲ್ಲಿ. ಆದರೆ ಬಹಳ ಬುದ್ಧಿವಂತಿಕೆ ಪ್ರದರ್ಶನ ಮಾಡಿದ್ದ ವಾಲ್‌ಮಾರ್ಟ್ ಮಾಡಿದ್ದೇನು ಗೊತ್ತೆ? ಬಾರ್ತಿ ಎಂಟರ್‌ಪ್ರೈಸಸ್‌ನ ಅಧೀನ ಕಂಪನಿಯಾಗಿದ್ದ ಸೆಡಾರ್ಸ್ ಸಪೋರ್ಟ್ ಸರ್ವರ್‌ನ ಷೇರುಗಳನ್ನು ರು. 6,400 ಕೋಟಿ ಮೌಲ್ಯ (100 ಮಿಲಿಯನ್ ಡಾಲರ್) ಷೇರುಗಳನ್ನು ಖರೀದಿಸಿತು. ಮಾತ್ರವಲ್ಲದೆ, ಹೊಸತಾಗಿ 'ಈಜಿ ಡೇ' ಎಂಬ ಮಳಿಗೆಗಳ ಸರಣಿ ಶುರುಮಾಡಿತು. ಇದೇ ಕಂಪನಿಯೇ ಎರಡೂ ಕಂಪನಿಗಳ ರಿಟೇಲ್ ಮಳಿಗೆಗಳನ್ನು ನಿರ್ವಹಣೆ ಮಾಡಲು ಆರಂಭ ಮಾಡಿತು. ದೇಶಾದ್ಯಂತ ಒಟ್ಟು 212 'ಈಜಿ ಡೇ' ಮಳಿಗೆಗಳಿವೆ. ಕಂಪಲ್ಸರಿ ಕನ್ವರ್ಟಿಬಲ್ ಡಿಬೆಂಚರ್ ಎನ್ನುವುದು ಸದ್ಯದ ಕಾಲಘಟ್ಟದಲ್ಲಿ ಕೇವಲ ಒಂದು ಸಾಲಪತ್ರವಾದರೂ ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಷೇರುಗಳಾಗಿ ಪರಿವರ್ತನೆಗೊಳ್ಳುವ ಹಕ್ಕು ಇರುವ ವ್ಯವಸ್ಥೆ. ಭಾರತದಲ್ಲಿ ಕಾನೂನು ಪ್ರಕಾರ ಚಿಲ್ಲರೆ ಮಳಿಗೆಗಳಲ್ಲಿ ವಿದೇಶಿ ಹೂಡಿಕೆ ಸಾಧ್ಯವಿಲ್ಲದ ಕಾಲದಲ್ಲಿ ಹಿಂಬಾಗಿಲಿನ ಮೂಲಕ ವಾಲ್‌ಮಾರ್ಟ್ ಪ್ರವೇಶ ಪಡೆದುಕೊಂಡದ್ದು ಚರ್ಚೆಗೆ ಗ್ರಾಸವಾಗಿದೆ.
ವಾಲ್‌ಮಾರ್ಟ್‌ಗೆ ನಿರಾಸಕ್ತಿ
ಕೇಂದ್ರ ಸರ್ಕಾರ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಹಾಕಿದ್ದ ಷರತ್ತುಗಳು ವಾಲ್‌ಮಾರ್ಟ್‌ಗೆ ನಿರಾಸೆ ತಂದಿತ್ತು. ಭಾರತೀಯ ಮೂಲದ ಸಣ್ಣ ಮತ್ತು ಮಧ್ಯಮ ಕಂಪನಿಗಳಿಂದಲೇ (ಎಸ್‌ಎಮ್‌ಇ) ಶೇ.30ರಷ್ಟು ವಸ್ತುಗಳನ್ನು ಖರೀದಿ ಮಾಡಬೇಕೆನ್ನುವುದು ಕೇಂದ್ರ ಸರ್ಕಾರ ಹಾಕಿದ ನಿಯಮ. ಅದನ್ನು ಪಾಲಿಸುವುದು ಅಸಾಧ್ಯ ಎನ್ನುವುದು ವಾಲ್‌ಮಾರ್ಟ್ ವಾದಿಸಿತ್ತು.
ಬಂದೆರಗಿತು ಲಾಬಿ ಆರೋಪ
ನಿಯಮದ ಹಿನ್ನಡೆಯ ನಡುವೆ 2012ರ ನವೆಂಬರ್‌ನಲ್ಲಿ ವಾಲ್‌ಮಾರ್ಟ್‌ಗೆ ಎದುರಾಗಿದ್ದು ಭೀಕರ ಆರೋಪ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಲಾಬಿ ಮಾಡಲು ಹೇರಳವಾಗಿ ದುಡ್ಡು ಖರ್ಚು ಮಾಡಿದೆ ಎಂಬ ವಿಚಾರ ಅಮೆರಿಕದಲ್ಲಿ ಬಹಿರಂಗವಾಯಿತು. ಅದು ವಿವಾದಕ್ಕೆ ತಿರುಗಿ ದೇಶದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಭಾರತದಲ್ಲಿ ವಾಲ್‌ಮಾರ್ಟ್ ಸಂಸ್ಥೆಯ ನೇತೃತ್ವ ವಹಿಸಿದ್ದ ರಾಜೇಶ್ ಜೈನ್ ಸಹಿತ ಹಲವರನ್ನು ಸಂಸ್ಥೆ ಸಸ್ಪೆಂಡ್ ಮಾಡಿತು.
ರು. 125 ಕೋಟಿ ವೆಚ್ಚ
ಅಂದಹಾಗೆ, ಅಮೆರಿಕದ ಚಿಲ್ಲರೆ ಮಾರುಕಟ್ಟೆ ದೈತ್ಯ ದೇಶದಲ್ಲಿ ಲಾಬಿ ಮಾಡಲು ವೆಚ್ಚ ಮಾಡಿದ ಮೊತ್ತ ಎಷ್ಟು ಗೊತ್ತೇ? ಬರೋಬ್ಬರಿ ರು. 125 ಕೋಟಿ (25 ಮಿಲಿಯನ್ ಡಾಲರ್). ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳಿಗಾಗಿ ಈ ಮೊತ್ತ ಖರ್ಚು ಮಾಡಿದ್ದಾಗಿ ಅದು ಒಪ್ಪಿಕೊಂಡಿತು. ದೇಶದಲ್ಲೂ ಇದು ಚರ್ಚೆಯಾಯಿತು. ಇದಕ್ಕಾಗಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ಮುಕುಲ್ ಮುದ್ಗಲ್‌ರನ್ನು ತನಿಖೆಗೆ ನೇಮಿಸಿತ್ತು. ಅವರು ಮೇ 19ರಂದು ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಈ ವರದಿ 'ಅಪೂರ್ಣ'. ಹೀಗಾಗಿ ಚಿಲ್ಲರೆ ದೈತ್ಯನ ವಿರುದ್ಧ ಹೊಸತಾಗಿ ತನಿಖೆ ನಡೆಯಬೇಕೆನ್ನುವುದು ಕೇಂದ್ರ ಸರ್ಕಾರದ ಅಭಿಪ್ರಾಯವಾಗಿತ್ತು.
ಮುಂದೇನು?
ವಾಲ್‌ಮಾರ್ಟ್ ಇನ್ನು ಮುಂದೆ ಹೋಲ್‌ಸೇಲ್ ಕ್ಯಾಶ್ ಆ್ಯಂಡ್ ಕ್ಯಾರಿ ಮಾದರಿ ಮಳಿಗೆಗಳಲ್ಲಿ ಒಬ್ಬಂಟಿಯಾಗಿ ಮುಂದುವರಿಯುತ್ತದೆ. ವಾಲ್‌ಮಾರ್ಟ್ ಅದರಲ್ಲಿರುವ ಭಾರ್ತಿ ಎಂಟರ್‌ಪ್ರೈಸಸ್‌ನ ಶೇ.50ರಷ್ಟು ಷೇರುಗಳನ್ನು ಖರೀದಿಸಲಿದೆ. ಈ ವಿಭಾಗದಲ್ಲಿ ಬೆಳೆಯಲು ಅದು ಆಸಕ್ತಿ ಹೊಂದಿದೆ. ಇದರೊಂದಿಗೆ ಅಮೆರಿಕದ ಚಿಲ್ಲರೆ ದೈತ್ಯನ ಮಳಿಗೆಗಳ ಕನಸು ಸದ್ಯಕ್ಕಂತೂ ಸ್ಥಗಿತಗೊಂಡಂತಾಗುತ್ತದೆ. ಮುಂದೆ ಕಾನೂನಿನ ಬದಲಾವಣೆ ನೋಡಿಕೊಂಡು ಅದು ಚಿಲ್ಲರೆ ಕ್ಷೇತ್ರಕ್ಕೆ ಬೇರೆಯೇ ರೀತಿಯಲ್ಲಿ ವಾಪಸು ಕಾಲಿಡಬಹುದು. ಅಂದಹಾಗೆ, ಭಾರ್ತಿ ಎಂಟರ್‌ಪ್ರೈಸಸ್‌ನ ಈಜಿ ಡೇ ಮುಂದುವರಿಯಲಿದೆ. ಅದಕ್ಕಾಗಿ ಈ ಹಿಂದೆ ವಾಲ್‌ಮಾರ್ಟ್‌ಗೆ ರು. 6,400 ಕೋಟಿ ಮೊತ್ತಕ್ಕೆ ಮಾರಾಟ ಮಾಡಿದ್ದ ಸೆಡಾರ್ಸ್ ಸಪೋರ್ಟ್ ಸರ್ವರ್ ಅನ್ನು ಮರು ಖರೀದಿ ಮಾಡಲಿದೆ.
ಹೋಲ್‌ಸೇಲ್ ಮಳಿಗೆ
ಇಲ್ಲಿ ಶೇ.100ರಷ್ಟು ವಿದೇಶಿ ಹೂಡಿಕೆ ಸಾಧ್ಯ ಜತೆಗೆ ಸಗಟು ಮಾರಾಟ ಮಾತ್ರ ಸಾಧ್ಯ. ಚಿಲ್ಲರೆ ಮಾರಾಟ ಮಾಡುವಂತಿಲ್ಲ. ಆದರೆ, ಬೇರಾವುದೇ ವಿಶೇಷ ನಿಯಮಗಳಿಲ್ಲ. ಇವುಗಳಿಗೆ ಉದಾಹರಣೆ ಬೆಂಗಳೂರಿನಲ್ಲಿರುವ ಮೆಟ್ರೋ ಕ್ಯಾಶ್ ಆ್ಯಂಡ್ ಕ್ಯಾರಿ, ಬೆಸ್ಟ್‌ಪ್ರೈಸ್ ಇತ್ಯಾದಿ.
ಚಿಲ್ಲರೆ ಸಿಂಗಲ್ ಬ್ರಾಂಡ್
ಒಂದೇ ಬ್ರಾಂಡಿನ ಸರಕುಗಳನ್ನು ಗ್ರಾಹಕರಿಗೆ ಚಿಲ್ಲರೆಯಾಗಿ ಮಾರಬಹುದಾದ ಈ ಚೌಕಟ್ಟಿನಲ್ಲೂ ಶೇ.100ರಷ್ಟು ವಿದೇಶಿ ಹೂಡಿಕೆ ಸಾಧ್ಯ. ಇಲ್ಲಿ ಇತರ ಬ್ರಾಂಡ್‌ಗಳನ್ನು ಮಾರುವಂತಿಲ್ಲ.
ಚಿಲ್ಲರೆ ಮಲ್ಟಿ ಬ್ರಾಂಡ್
ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದ ಈ ಕ್ಷೇತ್ರದಲ್ಲಿ ಸದ್ಯ ಶೇ.51ರಷ್ಟು ಮಾತ್ರ ವಿದೇಶಿ ಹೂಡಿಕೆಗೆ ಅನುವು ಮಾಡಿಕೊಡಲಾಗಿದೆ. ಚಿಲ್ಲರೆ ವ್ಯಾಪಾರಿಗಳ, ಉದ್ಯಮಿ, ರೈತರ ಹಿತರಕ್ಷಣೆಗಳಿಗಾಗಿ ಕೆಲವು ಕಠಿಣ ನಿಯಮಾವಳಿಯನ್ನು ಹಾಕಲಾಗಿದೆ. ಅವುಗಳ ಪಾಲನೆ ಅಸಾಧ್ಯ ಎಂಬ ಕಾರಣಕ್ಕಾಗಿ ನಿರ್ಧಾರ ಪ್ರಕಟವಾಗಿ ಒಂದು ವರ್ಷ ಕಳೆದರೂ ಚಿಲ್ಲರೆ ಮಲ್ಟಿಬ್ರಾಂಡ್ ಕ್ಷೇತ್ರದಲ್ಲಿ ಯಾವುದೇ ಒಂದು ಕಂಪನಿ ಹೂಡಿಕೆ ಮಾಡಿಲ್ಲ.
ಹಿಂಬಾಗಿಲ ಪ್ರವೇಶಕ್ಕೆ ತನಿಖೆ
ಭಾರ್ತಿ ಎಂಟರ್‌ಪ್ರೈಸಸ್‌ನ ಅಧೀನ ಕಂಪನಿಯನ್ನು ಖರೀದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ಆರಂಭಿಸಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಈ ಬಗ್ಗೆ ತನಿಖೆ ಶುರುವಾಗಿದೆ.
ವಿಚ್ಛೇದನ ಯಾಕೆ?
ಎರಡು ಕಂಪನಿಗಳ ನಿರ್ಧಾರಕ್ಕೆ ಸ್ಪಷ್ಟ ಕಾರಣ ಇನ್ನೂ ಸಿಕ್ಕಿಲ್ಲ. ವಾಣಿಜ್ಯ ವಲಯಗಳಲ್ಲಿ ಈ ಕೆಳಗಿನ ವಿಚಾರಗಳು ಚರ್ಚೆಯಾಗುತ್ತಿವೆ.
ದೇಶದಲ್ಲಿ ಲಾಬಿ ಮಾಡಲು ವಾಲ್‌ಮಾರ್ಟ್ ಮುಂದಾಗಿದ್ದು ಮತ್ತು ರು. 6,400 ಕೋಟಿ ಮೊತ್ತದಲ್ಲಿ ಭಾರ್ತಿ ಎಂಟರ್‌ಪ್ರೈಸಸ್‌ನ ಅಧೀನ ಕಂಪನಿಯ ಷೇರುಗಳ ಖರೀದಿಗೆ ತನಿಖೆಗೆ ಆದೇಶವಾದದ್ದು. ಇದರಿಂದಾಗಿ ಕಂಪನಿಗಳ ನಡುವಿನ ಸಂಬಂಧಕ್ಕೆ ಕೊಡಲಿಯೇಟು ಬಿತ್ತು ಎಂಬ ವಾದ ಇದೆ.
ಶೇ.51ರಷ್ಟು ಬಂಡವಾಳ ಹೂಡಿಕೆಗೆ ಅನುಮತಿ ಸಿಕ್ಕಿದರೂ ಜತೆಗೆ ವಿಧಿಸಲಾಗಿರುವ ಕಠಿಣ ನಿಯಮಗಳನ್ನು ಅನುಸರಿಸಲಾಗದು. ಅದನ್ನು ಪಾಲಿಸಿಕೊಂಡು ಬರುವುದು ಕಷ್ಟ ಎಂದು ವಿದೇಶಿ ಬಂಡವಾಳ ಹೂಡಿಕೆದಾರರ ಅಭಿಮತ.
- ಜಯದೇವ ಪ್ರಸಾದ ಮೊಳೆಯಾರ