ನಷ್ಟ ಸರಿದೂಗಿಸಿಕೊಂಡ ರೂಪಾಯಿ: ಡಾಲರ್ ಎದುರು 56 ಪೈಸೆ ಏರಿಕೆ; 8 ತಿಂಗಳ ಗರಿಷ್ಠ 92.29ಕ್ಕೆ ತಲುಪಿದ ಕರೆನ್ಸಿ

ಮುಂಬೈ: 2026- 2027ರ ಹಣಕಾಸು ವರ್ಷದಲ್ಲಿ (FY27) ಈವರೆಗೆ ದಾಖಲಿಸಿದ್ದ ಎಲ್ಲ ನಷ್ಟಗಳನ್ನು ಸರಿದೂಗಿಸಿಕೊಂಡು ಭಾರತದ ಕರೆನ್ಸಿ ರೂಪಾಯಿ ಇಂದು ಬುಧವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು 92.29ಕ್ಕೆ ಏರಿಕೆ ಕಂಡಿದ್ದು, 8 ತಿಂಗಳ ಗರಿಷ್ಠ ಮಟ್ಟ ತಲುಪಿದೆ. ಭಾರೀ ವಿದೇಶಿ ಹೂಡಿಕೆ ಹರಿವು ಮತ್ತು ಕಚ್ಚಾ ತೈಲ ಬೆಲೆ ಕುಸಿತ ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಕಾರಣವಾಗಿದೆ.
ಡಾಲರ್ ಬಲಗೊಂಡು ಅಮೆರಿಕದ ಬಾಂಡ್ ಇಳುವರಿ ತಗ್ಗಿದ್ದರೂ, ವಿದೇಶಿ ಹೂಡಿಕೆದಾರರು ಇತರ ಆಸ್ತಿಗಳಿಗಿಂತ ಭಾರತೀಯ ಷೇರುಗಳಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಅಲ್ಲದೆ, ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗಿಂತ ಕೆಳಗೆ ಕುಸಿದಿರುವುದು ಸ್ಥಳೀಯ ಕರೆನ್ಸಿಗೆ ಬಲ ನೀಡಿದೆ ಎಂದು ತಿಳಿಸಿದ್ದಾರೆ.
ಅಂತರ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 92.65ರಲ್ಲಿ ವಹಿವಾಟು ಆರಂಭಿಸಿ, ಡಾಲರ್ ಎದುರು 92.29ರ ಎಂಟು ತಿಂಗಳ ಗರಿಷ್ಠ ಮಟ್ಟ ತಲುಪಿತು. ಹಿಂದಿನ ದಿನದ ವಹಿವಾಟಿನ ಅಂತ್ಯಕ್ಕೆ ಹೋಲಿಸಿದರೆ 56 ಪೈಸೆ ಏರಿಕೆ ಕಂಡಿದೆ. ಇಂದಿನ ವಹಿವಾಟಿನಲ್ಲಿ ರೂಪಾಯಿ ತಲುಪಿದ ಗರಿಷ್ಠ ಮಟ್ಟವನ್ನು ಈ ವರ್ಷದ ಮಾರ್ಚ್ 16ರಂದು ಡಾಲರ್ ಎದುರು ದಾಖಲಿಸಿದ್ದ 92.28ರ ಮುಕ್ತಾಯದ ಮಟ್ಟಕ್ಕೆ ಹೋಲಿಸಲಾಗಿದೆ.
ಮೊನ್ನೆ ಸೋಮವಾರ ರೂಪಾಯಿ ಬೆಲೆ ತನ್ನ ಏಳು ತಿಂಗಳ ಗರಿಷ್ಠ ಮಟ್ಟದಿಂದ ಕುಸಿದು, ಡಾಲರ್ ಎದುರು 23 ಪೈಸೆ ನಷ್ಟದೊಂದಿಗೆ 92.85ರಲ್ಲಿ ವಹಿವಾಟು ಮುಗಿಸಿತ್ತು. ಕಳೆದ ಏಳು ವಾರಗಳಲ್ಲಿ, ಅಕ್ಟೋಬರ್ 8ರಂದು ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ 96.88ಕ್ಕೆ ಕುಸಿದಿದ್ದ ರೂಪಾಯಿ, ಅಲ್ಲಿಂದ ಸುಮಾರು ಶೇ.5ರಷ್ಟು ಚೇತರಿಸಿಕೊಂಡಿದೆ.
ಇನ್ನು, ಆರು ಪ್ರಮುಖ ಕರೆನ್ಸಿಗಳ ಎದುರು ಡಾಲರ್ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇ.0.20 ಏರಿಕೆಯೊಂದಿಗೆ 103.96ರ ಮಟ್ಟದಲ್ಲಿತ್ತು. ಸುರಕ್ಷಿತ ಹೂಡಿಕೆಗಳತ್ತ ಹೂಡಿಕೆದಾರರು ಮುಖ ಮಾಡಿದ್ದರಿಂದ ಅಮೆರಿಕದ ಖಜಾನೆ ಬಾಂಡ್‌ಗಳ ಇಳುವರಿ ಕುಸಿದಿತ್ತು.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಫ್ಯೂಚರ್ಸ್ ವಹಿವಾಟಿನಲ್ಲಿ ಶೇ.1.58ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 89.96 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿತ್ತು.
ದೇಶೀಯ ಷೇರು ಮಾರುಕಟ್ಟೆಯಲ್ಲಿ ಮಧ್ಯಾಹ್ನದ ವಹಿವಾಟಿನ ವೇಳೆ ಸೆನ್ಸೆಕ್ಸ್ 1,215.02 ಅಂಕಗಳ ಏರಿಕೆಯೊಂದಿಗೆ ಶೇ.1.47 ಹೆಚ್ಚಳವಾಗಿ 83,651.01ರಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 368.15 ಅಂಕ ಏರಿಕೆಯೊಂದಿಗೆ ಶೇ.1.45 ಹೆಚ್ಚಳವಾಗಿ 25,717.60ರಲ್ಲಿ ವಹಿವಾಟು ನಡೆಸುತ್ತಿತ್ತು. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 2,062.22 ಅಂಕ ಏರಿಕೆ ಕಂಡು ದಿನದ ಗರಿಷ್ಠ 84,498.21 ಮಟ್ಟ ತಲುಪಿತ್ತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 602 ಅಂಕ ಏರಿಕೆಯೊಂದಿಗೆ 25,951.65ಕ್ಕೆ ತಲುಪಿತ್ತು.
ಹಿಂದಿನ ವಹಿವಾಟಿನಲ್ಲಿ ಪ್ರಮುಖ ಸೂಚ್ಯಂಕಗಳು ಸುಮಾರು ಶೇ.2ರಷ್ಟು ಕುಸಿತ ಕಂಡಿದ್ದರೂ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಸೋಮವಾರ ನಿವ್ವಳ 5,672.99 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿಅಂಶಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



