ವಿಶೇಷ

Delimitation Bill: ಸಂಸತ್ತಿನಲ್ಲಿ ಶುರುವಾಯ್ತು ಮತಗಳ ಗಣಿತ! ಕಳೆದ ಬಾರಿ ಬಿದ್ದುಹೋಗಿದ್ದ ಮಸೂದೆ ಈ ಬಾರಿ ಪಾಸ್ ಆಗುತ್ತಾ? ಇಲ್ಲಿದೆ ಸದನದ ಇಂಚಿಂಚು ಲೆಕ್ಕಾಚಾರ

Delimitation Bill: ಸಂಸತ್ತಿನಲ್ಲಿ ಶುರುವಾಯ್ತು ಮತಗಳ ಗಣಿತ! ಕಳೆದ ಬಾರಿ ಬಿದ್ದುಹೋಗಿದ್ದ ಮಸೂದೆ ಈ ಬಾರಿ ಪಾಸ್ ಆಗುತ್ತಾ? ಇಲ್ಲಿದೆ ಸದನದ ಇಂಚಿಂಚು ಲೆಕ್ಕಾಚಾರ
ಲೋಕಸಭಾ ಕಲಾಪ
Published On :

ನವದೆಹಲಿ: ಮಹಿಳಾ ಮೀಸಲಾತಿ ಜಾರಿ ಹಾಗೂ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗಾಗಿ (ಡಿಲಿಮಿಟೇಶನ್) ಮೋದಿ ಸರ್ಕಾರ ಮತ್ತೊಮ್ಮೆ ಸಂಸತ್ತಿನ ವಿಶೇಷ ಅಧಿವೇಶನದ ಮೂಲಕ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಏಳು ತಿಂಗಳ ಹಿಂದೆ ಅಂದರೆ, ಕಳೆದ ಏಪ್ರಿಲ್‌ನಲ್ಲಿ ಸಂಸತ್ತಿನಲ್ಲಿ ಸೋಲು ಕಂಡಿದ್ದ ಸಂವಿಧಾನ ತಿದ್ದುಪಡಿ ಮಸೂದೆಗೆ ಇದೀಗ ಹೊಸ ರೂಪ ನೀಡಲಾಗುತ್ತಿದ್ದು, ದಕ್ಷಿಣ ಭಾರತದ ರಾಜ್ಯಗಳ ಆತಂಕವನ್ನು ದೂರ ಮಾಡಲು ಎಲ್ಲಾ ರಾಜ್ಯಗಳ ಸೀಟುಗಳನ್ನು ಶೇ. 50ರಷ್ಟು ಹೆಚ್ಚಿಸುವ ಸೂತ್ರವನ್ನು ಕೇಂದ್ರ ಬರವಸೆ ಏನೋ ನೀಡಿದೆ. ಆದರೆ, ಈ ಬಾರಿ ಎನ್‌ಡಿಎ ಮೈತ್ರಿಕೂಟಕ್ಕೆ ಮಸೂದೆ ಪಾಸ್ ಮಾಡಲು ಬೇಕಿರುವ ಎರಡನೇ ಮೂರರಷ್ಟು ಬಹುಮತದ ಲೆಕ್ಕಾಚಾರವೇ ಅತ್ಯಂತ ಕುತೂಹಲಕಾರಿಯಾಗಿದೆ. ಅದರಲ್ಲೂ, ಟಿಎಂಸಿಯ 20 ಬಂಡಾಯ ಸಂಸದರು, ಡಿಎಂಕೆಯ 22 ಸಂಸದರು ಹಾಗೂ ಎನ್‌ಸಿಪಿ (ಶರದ್ ಪವಾರ್ ಬಣ)ಯ 8 ಸಂಸದರ ನಿಲುವು ಈ ಐತಿಹಾಸಿಕ ಮಸೂದೆಯ ಭವಿಷ್ಯವನ್ನು ನಿರ್ಧರಿಸಲಿದೆ. ಅದರಲ್ಲೂ, ಮಸೂದೆಯ ಪರವಾಗಿ ಮತ ಚಲಾಯಿಸದಿದ್ದರೂ, ಕೇವಲ ಮತದಾನದ ಸಮಯದಲ್ಲಿ ಸಭಾತ್ಯಾಗ ಮಾಡುವ ಮೂಲಕ ಈ ಪಕ್ಷಗಳು ಆಡಳಿತಾರೂಢ ಎನ್‌ಡಿಎ ಸರ್ಕಾರಕ್ಕೆ ಮಸೂದೆ ಪಾಸ್ ಮಾಡಲು ಪರೋಕ್ಷವಾಗಿ ಹೇಗೆ ದಾರಿ ಮಾಡಿಕೊಡಬಲ್ಲವು ಎಂಬ ಕುತೂಹಲಕಾರಿ ಸಂಸದೀಯ ಗಣಿತದ ವಿವರ ಇಲ್ಲಿದೆ:

ಮಸೂದೆಯ ಪ್ರಸ್ತಾವನೆಗಳೇನು?

  • ಗರಿಷ್ಠ ಸ್ಥಾನಗಳ ಮಿತಿ: ಸಂವಿಧಾನದ 131ನೇ ತಿದ್ದುಪಡಿ ಮಸೂದೆ, 2026 ಪ್ರಕಾರ, ಲೋಕಸಭೆಯ ಒಟ್ಟು ಗರಿಷ್ಠ ಸದಸ್ಯ ಬಲವನ್ನು ಪ್ರಸ್ತುತ ಇರುವ 543 ರಿಂದ 850ಕ್ಕೆ ನಿಗದಿಪಡಿಸಲು ಪ್ರಸ್ತಾಪಿಸಲಾಗಿದೆ (ರಾಜ್ಯಗಳಿಗೆ ಗರಿಷ್ಠ 815 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಗರಿಷ್ಠ 35 ಸ್ಥಾನಗಳು). ಇನ್ನು, ಈ ಡಿಲಿಮಿಟೇಶನ್ ಮಸೂದೆಯು ಇತ್ತೀಚಿನ ಜನಗಣತಿಯನ್ನು (ಪ್ರಾಯೋಗಿಕವಾಗಿ 2011ರ ಜನಗಣತಿ) ಆಧರಿಸಿರಲಿದೆ.

  • ಮಹಿಳಾ ಮೀಸಲಾತಿ ಜಾರಿ: 'ನಾರಿ ಶಕ್ತಿ ವಂದನ್ ಅಧಿನಿಯಮ'ದ ಅಡಿಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು 2029ರ ಚುನಾವಣೆಯ ವೇಳೆಗೆ ತ್ವರಿತವಾಗಿ ಜಾರಿಗೆ ತರುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ.

ದಕ್ಷಿಣದ ರಾಜ್ಯಗಳ ಆತಂಕವೇನು?

ಜನಸಂಖ್ಯಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿರುವ ದಕ್ಷಿಣ ಭಾರತದ ರಾಜ್ಯಗಳಿಗೆ, ಇತ್ತೀಚಿನ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ನಡೆಸಿದರೆ ಲೋಕಸಭೆಯಲ್ಲಿ ತಮ್ಮ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬ ಆತಂಕವಿತ್ತು. ಆದರೆ, ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದು, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಏಕರೂಪವಾಗಿ ಶೇ. 50ರಷ್ಟು ಹೆಚ್ಚಿಸುವ (ಅಂದರೆ ಪ್ರಸ್ತುತ 543 ಸ್ಥಾನಗಳಿಂದ 816 ಸ್ಥಾನಗಳಿಗೆ ಏರಿಸುವ) ಮಾದರಿಯನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಕಾನೂನುಬದ್ಧ ರಕ್ಷಣೆ ನೀಡಲು ಅಧಿಕೃತ ತಿದ್ದುಪಡಿ ತರುವುದಾಗಿಯೂ ಅವರು ತಿಳಿಸಿದ್ದಾರೆ. ಅದರಂತೆ, ದಕ್ಷಿಣದ ರಾಜ್ಯಗಳ ಸ್ಥಾನಗಳ ಲೆಕ್ಕಾಚಾರ (ಶೇ. 50ರ ಮಾದರಿಯಂತೆ):

  • ಕರ್ನಾಟಕ: 28 ರಿಂದ 42 ಸ್ಥಾನಗಳಿಗೆ ಏರಿಕೆ (ಪ್ರಾತಿನಿಧ್ಯ ಶೇ. 5.14ರಷ್ಟು ಇರಲಿದೆ).

  • ತಮಿಳುನಾಡು: 39 ರಿಂದ 59 ಸ್ಥಾನಗಳಿಗೆ ಏರಿಕೆ.

  • ಆಂಧ್ರಪ್ರದೇಶ: 25 ರಿಂದ 38 ಸ್ಥಾನಗಳಿಗೆ ಏರಿಕೆ.

  • ಕೇರಳ: 20 ರಿಂದ 30 ಸ್ಥಾನಗಳಿಗೆ ಏರಿಕೆ.

  • ತೆಲಂಗಾಣ: 17 ರಿಂದ 26 ಸ್ಥಾನಗಳಿಗೆ ಏರಿಕೆ.

  • (ಒಟ್ಟಾರೆ ದಕ್ಷಿಣದ 5 ರಾಜ್ಯಗಳ ಸ್ಥಾನಗಳು 129ರಿಂದ 195ಕ್ಕೆ ಏರಿಕೆಯಾಗಲಿದ್ದು, ಲೋಕಸಭೆಯಲ್ಲಿ ಅವುಗಳ ಒಟ್ಟು ಪಾಲು ಸುಮಾರು ಶೇ. 24ರಷ್ಟೇ ಮುಂದುವರಿಯಲಿದೆ).

ಸಂಸತ್ತಿನ 'ನಂಬರ್ ಗೇಮ್' ಹೇಗಿದೆ?

ಉದ್ದೇಶಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ (Delimitation Bill) ಸಂಸತ್ತಿನ ಎರಡೂ ಸದನಗಳಲ್ಲಿ ವಿಶೇಷ ಬಹುಮತದ ಅಗತ್ಯವಿರುತ್ತದೆ: ಅಂದರೆ ಸದನದ ಒಟ್ಟು ಸದಸ್ಯತ್ವದ ಸರಳ ಬಹುಮತದ ಜೊತೆಗೆ, ಸದನದಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರಲ್ಲಿ ಕನಿಷ್ಠ ಮೂರನೇ ಎರಡರಷ್ಟು (2/3) ಸದಸ್ಯರ ಬೆಂಬಲ ಬೇಕಾಗುತ್ತದೆ. ಅದರಂತೆ, 540 (ಒಟ್ಟು 543 ಆದರೆ 3 ಸ್ಥಾನಗಳು ಖಾಲಿ ಇವೆ) ಸದಸ್ಯ ಬಲದ ಲೋಕಸಭೆಯಲ್ಲಿ ಎಲ್ಲಾ ಸದಸ್ಯರು ಹಾಜರಿದ್ದು ಮತ ಚಲಾಯಿಸಿದರೆ, ಮಸೂದೆ ಪಾಸ್ ಆಗಲು ಸುಮಾರು 360 ಮತಗಳ ಅಗತ್ಯವಿದೆ. ಪ್ರಸ್ತುತ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಬಳಿ ಸುಮಾರು 320 ರಿಂದ 324 ಸಂಸದರ ಬಲವಿದ್ದು, ಬಹುಮತದ ಗುರಿ ತಲುಪಲು ಇನ್ನೂ ಸುಮಾರು 40 ಮತಗಳ ಕೊರತೆ ಇದೆ. ಜೊತೆಗೆ, 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಆಗಲು ಸುಮಾರು 163 ಮತಗಳ ಅಗತ್ಯವಿದೆ. ಇಲ್ಲಿ ಎನ್‌ಡಿಎ ಮೈತ್ರಿಕೂಟವು 155 ಸದಸ್ಯರನ್ನು ಹೊಂದಿದ್ದು, ಇನ್ನೂ ಸುಮಾರು 21 ಮತಗಳ ಕೊರತೆಯನ್ನು ಎದುರಿಸುತ್ತಿದೆ. ಹೀಗೆ, ಕಳೆದ ಏಪ್ರಿಲ್ 17, 2026ರಂದು ಮಂಡಿಸಲಾಗಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಯ ಪರವಾಗಿ 298 ಮತ್ತು ವಿರುದ್ಧವಾಗಿ 230 ಮತಗಳು ಚಲಾವಣೆಯಾಗಿದ್ದವು. ಅಗತ್ಯವಿದ್ದ 352 ಮತಗಳು ಸಿಗದ ಕಾರಣ (54 ಮತಗಳ ಕೊರತೆಯಿಂದ) ಮಸೂದೆಗೆ ಸೋಲಾಗಿತ್ತು.

ಹೌದು, ಸದ್ಯ ಎನ್‌ಡಿಎ ಬಳಿ (ಟಿಎಂಸಿ ಬಂಡಾಯ ಸಂಸದರು, ವೈಎಸ್‌ಆರ್‌ಸಿಪಿ, ಅಕಾಲಿದಳ ಮತ್ತು ಇತರರ ಬೆಂಬಲ ಸೇರಿದಂತೆ) ಸುಮಾರು 325 ಮತಗಳಿವೆ. ಮತ್ತೊಂದೆಡೆ, ಈ ಹಿಂದೆ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದ ವಿಡ ಮುನ್ನೇತ್ರ ಕಳಗಂ (ಡಿಎಂಕೆ) (22 ಲೋಕಸಭಾ ಮತ್ತು 8 ರಾಜ್ಯಸಭಾ ಸಂಸದರು), ಲೋಕಸಭೆಯಲ್ಲಿ ತಮಿಳುನಾಡಿನ ಪ್ರಸ್ತುತ ಸ್ಥಾನಗಳ ಪಾಲಾದ ಸುಮಾರು ಶೇ. 7.2 ರಷ್ಟು ಪ್ರಾತಿನಿಧ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ರಕ್ಷಣೆ ನೀಡಿದರೆ ತನ್ನ ವಿರೋಧವನ್ನು ಮರುಪರಿಶೀಲಿಸಲು ಸಿದ್ಧವಿದೆ ಎಂದು ತಿಳಿಸಿದೆ. ಜೊತೆಗೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ – ಶರದ್‌ಚಂದ್ರ ಪವಾರ್ (NCP-SP) ಪಕ್ಷಕೂಡ ಮಸೂದೆಯಲ್ಲಿನ ಅಂಶಗಳನ್ನು ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಅಕಸ್ಮಾತ್, ಇಬ್ಬರು ಬೆಂಬಲ ವ್ಯಕ್ತಪಡಿಸಿದರೆ ಆಗ ಎನ್‌ಡಿಎ ಬಲ 355 ಕ್ಕೆ ಹೆಚ್ಚಲಿದೆ. ಆದರೆ, ಆಗಲೂ ಮೋದಿ ಸರ್ಕಾರಕ್ಕೆ ಇನ್ನು 5 ಸ್ಥಾನಗಳ ಕೊರತೆ ಎದುರಾಗಲಿದೆ. ಆದರೆ, ಡಿಎಂಕೆ ಮತ್ತು ಎನ್‌ಸಿಪಿ (ಶರದ್‌ಚಂದ್ರ ಪವಾರ್) ಪಕ್ಷಗಳು ಸಭಾತ್ಯಾಗ ಅರ್ಥಾತ್ ಸದನದಿಂದ ಹೊರನಡೆದರೆ, ಆಗ ಮಸೂದೆ ಪಾಸ್ ಮಾಡಲು ಬೇಕಾಗುವ ನಂಬರ್ ಕೂಡ ತಾನಾಗಿಯೇ ಬದಲಾಗಲಿದೆ.

ಹೌದು, ಡಿಎಂಕೆ (22 ಸಂಸದರು) ಮತ್ತು ಎನ್‌ಸಿಪಿ - ಎಸ್ಪಿ (8 ಸಂಸದರು) ಸಭಾತ್ಯಾಗ ಮಾಡಿದರೆ: "ಹಾಜರಿದ್ದು ಮತ ಚಲಾಯಿಸುವವರ" ಸಂಖ್ಯೆ 30 ರಷ್ಟು ಕಡಿಮೆಯಾಗಿ 510 ಕ್ಕೆ ಇಳಿಯುತ್ತದೆ. ಆಗ, ಮೂರನೇ ಎರಡರಷ್ಟು ಮತಗಳ ಅಗತ್ಯವು 360 ರಿಂದ 340 ಮತಗಳಿಗೆ ಇಳಿಯುತ್ತದೆ. ಈ ಸಂದರ್ಭ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಬಲ ಸುಮಾರು 325 ಸಂಸದರಷ್ಟಿದ್ದು, ಮಸೂದೆ ಅಂಗೀಕಾರಕ್ಕೆ ಬೇಕಾದ ಕೊರತೆಯು 35–41 ಮತಗಳಿಂದ 15–21 ಮತಗಳಿಗೆ ಇಳಿಕೆಯಾಗುತ್ತದೆ.

ಇವರೇ ಮ್ಯಾಟರ್!

ಮತದಾನದ ವೇಳೆ ಅತ್ತ ಎನ್‌ಡಿಎ ಇತ್ತ ಇಂಡಿಯಾ ಕೂಟ ಸೇರದ 11 ಸದಸ್ಯರಲ್ಲಿ ಆಪ್ (3), ಅಮೃತ್‌ಪಾಲ್ ಸಿಂಗ್ ಅವರ ಅಕಾಲಿದಳ (2), ಎಐಎಂಐಎಂ (1), ಚಂದ್ರಶೇಖರ್ ಆಜಾದ್ ಪಕ್ಷ (1), ಯುಪಿಪಿಎಲ್ (1), ಜೋರಮ್ ಪೀಪಲ್ಸ್ ಮೂವ್‌ಮೆಂಟ್ (1), ಎಂಜಿನಿಯರ್ ರಶೀದ್ ಪಕ್ಷ (1), JKAIP (1) ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದು, ಇವರು ಮಸೂದೆಗೆ ಬೆಂಬಲ ನೀಡಿದರೆ ಆಗ ಚಿತ್ರಣವೇ ಬದಲಾಗಲಿದೆ. ಅಥವಾ ವಿಪಕ್ಷದ ಅಂದರೆ ಇಂಡಿಯಾ ಕೂಟದ ಕಾಂಗ್ರೆಸ್, ಸಮಾಜವಾದಿ ಪಕ್ಷಗಳ ಸಂಸದರೇನಾದ್ರೂ ಗೈರು ಹಜಾರದರೆ ಆಗ ಸಂಸತ್ತಿನ ನಂಬರ್ ಗೇಮ್ ಮತ್ತಷ್ಟು ಬದಲಾಗಲಿದೆ!

ರಾಜ್ಯಸಭೆಯಲ್ಲೂ ಲಾಭ!

242 ಸದಸ್ಯ ಬಲದ ರಾಜ್ಯಸಭೆಯಲ್ಲಿ ಡಿಎಂಕೆ (8) ಮತ್ತು ಎನ್‌ಸಿಪಿ (1) ಒಟ್ಟು 9 ಸದಸ್ಯರನ್ನು ಹೊಂದಿವೆ. ಇವರು ಹೊರನಡೆದರೆ ರಾಜ್ಯಸಭೆಯಲ್ಲಿಯೂ 2/3 ಬಹುಮತದ ಮಿತಿ 162 ರಿಂದ 156ಕ್ಕೆ ಇಳಿಯಲಿದ್ದು, 155 ಸದಸ್ಯರ ಬಲ ಹೊಂದಿರುವ ಎನ್‌ಡಿಎಗೆ ಮಸೂದೆ ಪಾಸ್ ಮಾಡುವುದು ಅತ್ಯಂತ ಸುಲಭವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.