ಕ್ಷೇತ್ರ ಮರುವಿಂಗಡಣೆ ಹೆಸರಲ್ಲಿ ರಾಜಕೀಯ ಬಲೆ: ತಮಿಳುನಾಡಲ್ಲಿ BJPಗೆ DMK ಪೋಷಣೆ; ಇತಿಹಾಸ ಮರುಕಳಿಸಲಿದೆ- TVK; ಕಾಂಗ್ರೆಸ್ ನಿಗಿನಿಗಿ ಕೆಂಡ!

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ), ಡಿಎಂಕೆ ಪಕ್ಷ ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆಯಿದೆ ಎಂದು ಗಂಭೀರ ಆರೋಪ ಮಾಡಿದೆ.
ಸಂಸತ್ತಿನಲ್ಲಿ ಮತ್ತೆ ಚರ್ಚೆಗೆ ಬರುವ ನಿರೀಕ್ಷೆಯಿರುವ ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಡಿಎಂಕೆ ನಿಲುವು ಬದಲಾಗಬಹುದು ಎಂಬುದು ಟಿವಿಕೆಯ ವಾದ. ಆದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಆರೋಪವನ್ನು ಡಿಎಂಕೆ ತಳ್ಳಿಹಾಕಿದೆ. ಹೀಗಾಗಿ ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಶುರುವಾಗಿದೆ.
ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಮತ್ತು ಡಿಎಂಕೆ ನಡುವೆ ರಾಜಕೀಯ ಪೈಪೋಟಿ ಮುಂದುವರೆದಿದೆ. ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಡಿಎಂಕೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಟಿವಿಕೆಯ ಐಟಿ ವಿಭಾಗ ಆರೋಪಿಸಿದೆ. ಡಿಎಂಕೆ ಮುಖವಾಣಿ ‘ಮುರಸೊಲಿ’ಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರ ಕುರಿತ ವರದಿ ಪ್ರಕಟವಾದ ಬಳಿಕ ಈ ಚರ್ಚೆ ಮತ್ತಷ್ಟು ತೀವ್ರವಾಗಿದೆ. ಇದನ್ನು ಉಲ್ಲೇಖಿಸಿರುವ ಟಿವಿಕೆ, ಡಿಎಂಕೆ ತನ್ನ ಹಿಂದಿನ ಸೈದ್ಧಾಂತಿಕ ನಿಲುವಿನಿಂದ ಹಿಂದೆ ಸರಿಯುತ್ತಿದೆ ಎಂದು ಟೀಕಿಸಿದೆ.
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಿದ್ದನ್ನೂ ಟಿವಿಕೆ ಪ್ರಶ್ನಿಸಿದೆ. ಹಿಂದೆ ರಾಜ್ಯಪಾಲರ ಪಾತ್ರವನ್ನು ವಿರೋಧಿಸುತ್ತಿದ್ದ ಡಿಎಂಕೆ ಈಗ ಅವರನ್ನೇ ಭೇಟಿ ಮಾಡುತ್ತಿರುವುದು ರಾಜಕೀಯ ಬದಲಾವಣೆಯ ಸೂಚನೆ ಎಂದು ಟಿವಿಕೆ ಆರೋಪಿಸಿದೆ.
ಆದರೆ ಈ ಭೇಟಿಯನ್ನು ಡಿಎಂಕೆ ಸಮರ್ಥಿಸಿಕೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ದೂರು ನೀಡಲು ಅಥವಾ ತಮ್ಮ ಸಮಸ್ಯೆಗಳನ್ನು ತಿಳಿಸಲು ರಾಜ್ಯಪಾಲರನ್ನು ಸಂಪರ್ಕಿಸುವುದು ವಿರೋಧ ಪಕ್ಷಗಳ ಹಕ್ಕು ಎಂದು ಡಿಎಂಕೆ ವಕ್ತಾರ ಸೈಯದ್ ಹಫೀಜುಲ್ಲಾ ಹೇಳಿದ್ದಾರೆ. ರಾಜ್ಯಪಾಲರ ಸಾಂವಿಧಾನಿಕ ಪಾತ್ರದ ಬಗ್ಗೆ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಎಂದರೆ ಜನಸಂಖ್ಯೆ ಮತ್ತು ಇತರ ನಿಗದಿತ ಮಾನದಂಡಗಳ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಗಡಿ ಹಾಗೂ ರಾಜ್ಯಗಳಿಗೆ ಹಂಚಿಕೆಯಾಗುವ ಸ್ಥಾನಗಳ ಸಂಖ್ಯೆಯನ್ನು ಮರುನಿಗದಿಪಡಿಸುವ ಪ್ರಕ್ರಿಯೆ. ಜನಸಂಖ್ಯೆ ವೇಗವಾಗಿ ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಸ್ಥಾನಗಳು ಸಿಗಬಹುದು, ಜನಸಂಖ್ಯೆ ನಿಯಂತ್ರಣಕ್ಕೆ ಆದ್ಯತೆ ನೀಡಿದ ದಕ್ಷಿಣ ರಾಜ್ಯಗಳ ಸಂಸತ್ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂಬ ಆತಂಕ ಈ ಹಿಂದೆ ವ್ಯಕ್ತವಾಗಿತ್ತು.
ಕಳೆದ ಏಪ್ರಿಲ್‌ನಲ್ಲಿ ಮೂರನೇ ಎರಡರಷ್ಟು ಬಹುಮತದ ಕೊರತೆಯಿಂದಾಗಿ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆಗೆ ಸೋಲಾಯಿತು. ಸೋಮವಾರ ಲೋಕಸಭೆ ಮತ್ತು ಬುಧವಾರ ರಾಜ್ಯಸಭೆ ಮತ್ತೆ ಸೇರಿದಾಗ, ಅದು ಚರ್ಚಗೆ ಬರಲಿದೆ. ತಮಿಳುನಾಡಿನಲ್ಲಿ ಪ್ರಸ್ತುತ 543 ಸದಸ್ಯರ ಲೋಕಸಭೆಯಲ್ಲಿ 39 ಸ್ಥಾನಗಳಿವೆ. ಇದು ಒಟ್ಟು ಸ್ಥಾನಗಳ ಶೇಕಡಾ 7.18ರಷ್ಟಿದೆ. ಈ ಪಾಲು ಕಡಿಮೆಯಾಗಬಾರದು ಎಂಬುದು ಡಿಎಂಕೆಯ ಪ್ರಮುಖ ಬೇಡಿಕೆ.
2026ರ ಏಪ್ರಿಲ್‌ನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳ ಕುರಿತು ಲೋಕಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆಯ ಸ್ಥಾನಗಳನ್ನು ಶೇಕಡಾ 50ರಷ್ಟು ಹೆಚ್ಚಿಸುವ ಪ್ರಸ್ತಾವನೆಯಡಿ ತಮಿಳುನಾಡಿನ ಸ್ಥಾನಗಳು 39ರಿಂದ 59ಕ್ಕೆ ಏರಲಿವೆ ಎಂದು ಹೇಳಿದ್ದರು. ರಾಜ್ಯದ ಒಟ್ಟು ಸ್ಥಾನಗಳ ಪಾಲು ಶೇಕಡಾ 7.18ರಿಂದ 7.23ಕ್ಕೆ ಹೆಚ್ಚಾಗಲಿದೆ ಎಂದೂ ತಿಳಿಸಿದ್ದರು. ಆದರೆ ಕೇವಲ ಮೌಖಿಕ ಭರವಸೆ ಸಾಕಾಗುವುದಿಲ್ಲ, ತಮಿಳುನಾಡಿನ ಈಗಿನ ಪ್ರಾತಿನಿಧ್ಯದ ಪಾಲಿಗೆ ಕಾನೂನಿನ ರಕ್ಷಣೆ ಸಿಗಬೇಕು ಎಂಬುದು ಡಿಎಂಕೆಯ ವಾದ.
ಉದಯನಿಧಿ ಸ್ಟಾಲಿನ್ ಅವರ ರಾಜ್ಯಪಾಲರ ಜೊತೆಗಿನ ಭೇಟಿ, ಮುರಸೋಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರ ಸಂದರ್ಶನ ಇವೆಲ್ಲವೂ ಡಿಎಂಕೆ ಮತ್ತಿ ಬಿಜೆಪಿ ಮೈತ್ರಿಯತ್ತ ಹೆಜ್ಜೆ ಇಡುತ್ತಿವೆ ಎಂಬುದಕ್ಕೆ ಸಾಕ್ಷಿ" ಎಂದು ಸಿಎಂ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪ್ರತಿಪಾದಿಸಿದೆ. ಈ ಕುರಿತು ಟಿವಿಕೆಯ ಐಟಿ ವಿಭಾಗವು ಕಟುವಾದ ಭಾಷೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಪ್ರಸಿದ್ಧ ಪ್ರಶ್ನೆಯಾದ, "ಆಡಿಗೆ ಗಡ್ಡವೇಕೆ, ದೇಶಕ್ಕೆ ರಾಜ್ಯಪಾಲರೇಕೆ?" ಎಂಬುದನ್ನು ಉಲ್ಲೇಖಿಸಿದೆ. ಈ ಮೂಲಕ ಡಿಎಂಕೆ ತನ್ನ ಸೈದ್ಧಾಂತಿಕ ನಿಲುವನ್ನು ಕೈಬಿಟ್ಟಿದೆ ಎಂದು ಟಿವಿಕೆ ಆರೋಪಿಸಿದೆ.
ಕುತೂಹಲಕಾರಿ ಸಂಗತಿಯೆಂದರೆ, ಕ್ಷೇತ್ರ ಮರುವಿಂಗಡಣೆ ಮಸೂದೆಯ ವಿಷಯದಲ್ಲಿ ಬಿಜೆಪಿ ಬೆಂಬಲಿಸಲು ಡಿಎಂಕೆ ಮುಂದಾದರೆ, ಅದನ್ನು ವಿಧಾನಸಭಾ ಚುನಾವಣೆಗಳ ನಂತರ ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಉಂಟಾದ ಬಿರುಕಿನ ಹಿನ್ನೆಲೆಯಲ್ಲಿಯೇ ನೋಡಲಾಗುತ್ತದೆ. ಸರ್ಕಾರ ರಚನೆಗೆ ನೆರವಾಗುವ ನಿಟ್ಟಿನಲ್ಲಿ ವಿಜಯ್ ಅವರ 'ಟಿವಿಕೆ' (TVK) ಪಕ್ಷವನ್ನು ಕಾಂಗ್ರೆಸ್ ಬೆಂಬಲಿಸಿದ್ದರಿಂದ, ಡಿಎಂಕೆ ಆಕ್ರೋಶಗೊಂಡಿತ್ತು. ಹೀಗಾಗಿ, ಕಾಂಗ್ರೆಸ್ ವಿರೋಧಿಸುತ್ತಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಬೆಂಬಲಿಸುವುದು, ತಮ್ಮ ಮಾಜಿ ಮಿತ್ರಪಕ್ಷಕ್ಕೆ ನೀಡುವ ಸೂಕ್ತ ಪ್ರತ್ಯುತ್ತರದಂತೆ ಕಾಣಬಹುದು.
2013ರಿಂದ ಕೇಂದ್ರದಲ್ಲಿ ಅಧಿಕಾರದಿಂದ ದೂರವಿರುವ ಡಿಎಂಕೆ, ಇದೀಗ ತಮಿಳುನಾಡಿನಲ್ಲಿ ಕಾಂಗ್ರೆಸ್ ಎಂಬ ಮಿತ್ರಪಕ್ಷವನ್ನೂ ಕಳೆದುಕೊಂಡಿರುವುದರಿಂದ, ಅದರ ರಾಜಕೀಯ ಆಯ್ಕೆಗಳು ಇನ್ನಷ್ಟು ಸೀಮಿತಗೊಂಡಂತೆ ತೋರುತ್ತಿವೆ. ಆದ್ದರಿಂದ, ಸಂಸತ್ತಿನಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆಯಾದಾಗ ಡಿಎಂಕೆ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲದ ವಿಷಯವಾಗಿದೆ. ವಿಶೇಷವಾಗಿ, ಡಿಎಂಕೆ ಈ ಮಸೂದೆಯನ್ನು ನೇರವಾಗಿ ವಿರೋಧಿಸುತ್ತದೆಯೇ ಅಥವಾ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡಿ ಮಸೂದೆ ಅಂಗೀಕಾರವಾಗಲು ಸಹಕರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




