ಬಿಜೆಪಿ ವಿರುದ್ಧ ವಿದೇಶಿ ನಾಯಕನ ಟೀಕೆ: 'ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವ ಅಗತ್ಯವಿಲ್ಲ': ಇಟಲಿ ಪ್ರಧಾನಿ ಮೆಲೋನಿ ಆಪ್ತೆ ತಿರುಗೇಟು

ಸ್ನೇಹಪರ ರಾಷ್ಟ್ರವಾದ ಭಾರತದ ಆಂತರಿಕ ರಾಜಕೀಯ ವಿಚಾರಗಳಲ್ಲಿ ವಿದೇಶಿ ನಾಯಕರು ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ. ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
Giorgia Meloni ally hits back at Italian leader's BJP remarks
ರಾಹುಲ್ ಗಾಂಧಿ, ಜಿಯಾಕೊಮೊ ಫಿಲಿಬೆಕ್ ಮತ್ತು ಡೆಬೊರಾ ಬೆರ್ಗಾಮಿನಿ
Updated on: 

ನವದೆಹಲಿ: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡಿದ್ದ ಯುರೋಪ್ ರಾಜಕೀಯ ನಾಯಕನಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಪ್ತೆ ಹಾಗೂ ಸಂಸದೆ ಡೆಬೊರಾ ಬೆರ್ಗಾಮಿನಿ ತಿರುಗೇಟು ನೀಡಿದ್ದಾರೆ.

ಸ್ನೇಹಪರ ರಾಷ್ಟ್ರವಾದ ಭಾರತದ ಆಂತರಿಕ ರಾಜಕೀಯ ವಿಚಾರಗಳಲ್ಲಿ ವಿದೇಶಿ ನಾಯಕರು ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ. ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದ ಯುರೋಪಿಯನ್ ಸೋಷಿಯಲಿಸ್ಟ್ ಪಾರ್ಟಿ (ಪಿಇಎಸ್) ಪ್ರಧಾನ ಕಾರ್ಯದರ್ಶಿ ಜಿಯಾಕೊಮೊ ಫಿಲಿಬೆಕ್ ವಿರುದ್ಧ ಬೆರ್ಗಾಮಿನಿ ಈ ಹೇಳಿಕೆ ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ 'ಭಾರತ್ ಶೃಂಗಸಭೆ 2026'ರಲ್ಲಿ ಭಾಗವಹಿಸಿದ್ದ ಫಿಲಿಬೆಕ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. 'ಮತಗಳ್ಳರೇ, ನಿಮ್ಮ ಸ್ಥಾನಗಳಿಂದ ಕೆಳಗಿಳಿಯಿರಿ' ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದರು. ಅಲ್ಲದೆ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಪರ ನಿಲ್ಲಬೇಕು ಎಂದು ಕರೆ ನೀಡಿದ್ದರು.

ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಬೆರ್ಗಾಮಿನಿ, ಭಾರತದ ಆಂತರಿಕ ರಾಜಕೀಯ ವಿಚಾರಗಳಲ್ಲಿ ವಿದೇಶಿ ಪ್ರತಿನಿಧಿಗಳು ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.

Giorgia Meloni ally hits back at Italian leader's BJP remarks
'ವಿದೇಶಿಗರು ಭಾರತದ ಪ್ರಜಾಪ್ರಭುತ್ವವನ್ನು ಹೀಯಾಳಿಸುವಾಗ ರಾಹುಲ್ ಗಾಂಧಿ ನಗ್ತಾರೆ'; ವಿದೇಶಿ ಶಕ್ತಿಗಳ ತಾಳಕ್ಕೆ ಅವರು ಕುಣಿಯೋದು': ಬಿಜೆಪಿ

ಭಾರತ-ಇಟಲಿ ನಡುವಿನ ವಿಶೇಷ ಸಂಬಂಧದ ಉಲ್ಲೇಖ

ಇಟಲಿಯ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿರುವ ಫೋರ್ಝಾ ಇಟಾಲಿಯಾ ಪಕ್ಷದ ರಾಷ್ಟ್ರೀಯ ಉಪ ಕಾರ್ಯದರ್ಶಿಯಾಗಿರುವ ಬೆರ್ಗಾಮಿನಿ, ಭಾರತ ಮತ್ತು ಇಟಲಿ ನಡುವೆ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಇದೆ ಎಂದು ಹೇಳಿದ್ದಾರೆ. ಎರಡೂ ದೇಶಗಳು ಹಲವು ಕ್ಷೇತ್ರಗಳಲ್ಲಿ ಉತ್ತಮ ಸಹಕಾರ ಹೊಂದಿವೆ. ಇಂತಹ ಸ್ನೇಹಪರ ರಾಷ್ಟ್ರದ ಆಂತರಿಕ ರಾಜಕೀಯ ಚರ್ಚೆಗಳಲ್ಲಿ ವಿದೇಶಿ ನಾಯಕರು ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ತಮ್ಮ ಅಭಿಪ್ರಾಯ ಅಥವಾ ಆರೋಪಗಳನ್ನು ವ್ಯಕ್ತಪಡಿಸಬಹುದು. ಆದರೆ, ಅದಕ್ಕೆ ಸೂಕ್ತ ಪುರಾವೆಗಳನ್ನು ಒದಗಿಸಬೇಕು ಎಂದೂ ಅವರು ಹೇಳಿದ್ದಾರೆ.

"ಸುಮಾರು 970 ಮಿಲಿಯನ್ ಜನರು ಮತ ಚಲಾಯಿಸಲು ಅವಕಾಶ ಕಲ್ಪಿಸಿರುವ ದೇಶಕ್ಕೆ ಯುರೋಪಿಯನ್ನರಾದ ನಾವು ಪ್ರಜಾಪ್ರಭುತ್ವದ ಪಾಠ ಹೇಳುವುದು ಸೂಕ್ತವಲ್ಲ. ಭಾರತಕ್ಕೆ ತನ್ನದೇ ಆದ ರಾಜಕೀಯ ಸಂಸ್ಥೆಗಳು ಮತ್ತು ನ್ಯಾಯಾಂಗ ವ್ಯವಸ್ಥೆ ಇದೆ. ಯಾವುದೇ ವಿವಾದಗಳಿದ್ದರೂ ಪ್ರಜಾಪ್ರಭುತ್ವದ ನಿಯಮಗಳ ಪ್ರಕಾರವೇ ಅವುಗಳನ್ನು ಬಗೆಹರಿಸಿಕೊಳ್ಳಬೇಕು" ಎಂದು ಬೆರ್ಗಾಮಿನಿ ಹೇಳಿದ್ದಾರೆ.

ರಾಹುಲ್ ಗಾಂಧಿಗೆ ಫಿಲಿಬೆಕ್ ಬೆಂಬಲ

ಹೈದರಾಬಾದ್‌ನಲ್ಲಿ ನಡೆದ ಭಾರತ್ ಶೃಂಗಸಭೆಯಲ್ಲಿ ಮಾತನಾಡಿದ್ದ ಜಿಯಾಕೊಮೊ ಫಿಲಿಬೆಕ್, ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದ್ದರು. "ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅದನ್ನು ರಕ್ಷಿಸಬೇಕಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲುವುದೇ ಪ್ರಜಾಪ್ರಭುತ್ವವನ್ನು ರಕ್ಷಿಸುವ ಉತ್ತಮ ಮಾರ್ಗ" ಎಂದು ಅವರು ತಿಳಿಸಿದ್ದರು.

ಸಾಮಾಜಿಕ ನ್ಯಾಯ, ಹವಾಮಾನ ನ್ಯಾಯ, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಪಿಇಎಸ್, ಕಾಂಗ್ರೆಸ್ ಸೇರಿದಂತೆ ವಿಶ್ವದ ಹಲವು ರಾಜಕೀಯ ಸಂಘಟನೆಗಳು ಪ್ರಗತಿಪರ ಮೈತ್ರಿಕೂಟದ ಭಾಗವಾಗಿವೆ ಎಂದೂ ಹೇಳಿದ್ದರು.

ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ಫಿಲಿಬೆಕ್ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ಭಾರತದ ಆಂತರಿಕ ರಾಜಕೀಯ ವಿಚಾರಗಳಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪಕ್ಕೆ ಕಾಂಗ್ರೆಸ್ ಅವಕಾಶ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ವಿದೇಶಿ ನೆರವಿನೊಂದಿಗೆ ಸರ್ಕಾರ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ ಮತ್ತು ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಬಯಸುವ ವಿದೇಶಿ ಶಕ್ತಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಟೀಕಿಸಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಈ ವಿವಾದದ ಕುರಿತು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Giorgia Meloni ally hits back at Italian leader's BJP remarks
ಮರಣದಂಡನೆ ಶಿಕ್ಷೆ ತಡೆಗೆ ನಿರ್ಣಯ: ವಿಶ್ವಸಂಸ್ಥೆಯಲ್ಲಿ ಅಚ್ಚರಿ ಮೂಡಿಸಿದ ಭಾರತದ ನಡೆ; ಚೀನಾ, ಅಮೆರಿಕ ಇರಾನ್ ನಿಂದಲೂ ಬೆಂಬಲ!

"ವಿದೇಶಿಯೊಬ್ಬರು ಭಾರತವನ್ನು ಅವಮಾನಿಸಿದಾಗ ಅದನ್ನು ಕೇಳಿ ಯಾರಾದರೂ ನಗುವುದನ್ನು ನೀವು ನೋಡಿದ್ದೀರಾ? ಭಾರತವನ್ನು ಅವಮಾನಿಸಲು ವಿದೇಶಕ್ಕೆ ಹೋಗುವ ಭಾರತೀಯರ ಬಗ್ಗೆ ನಾನು ಕೇಳುತ್ತಿಲ್ಲ" ಎಂದು ಅವರು ಪೋಸ್ಟ್ ಮಾಡಿದ್ದಾರೆ.

ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಕೂಡ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. 2014ರಿಂದ ಭಾರತದಲ್ಲಿ ಪ್ರಜಾಪ್ರಭುತ್ವ ನಾಶವಾಗಿದೆ ಎಂಬ ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಆಡಳಿತದ ಅವಧಿಯ ತುರ್ತು ಪರಿಸ್ಥಿತಿ ಮತ್ತು ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ ಘಟನೆಗಳನ್ನು ಉಲ್ಲೇಖಿಸಿದ್ದಾರೆ.

70 ದೇಶಗಳ 1,000 ಪ್ರತಿನಿಧಿಗಳು ಭಾಗಿ

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಭಾರತ್ ಶೃಂಗಸಭೆ 2026ರಲ್ಲಿ ಸುಮಾರು 70 ದೇಶಗಳ 1,000ಕ್ಕೂ ಹೆಚ್ಚು ಪ್ರತಿನಿಧಿಗಳು, ನೀತಿ ನಿರೂಪಕರು ಮತ್ತು ಚಿಂತಕರು ಭಾಗವಹಿಸಿದ್ದಾರೆ. ಜಾಗತಿಕ ರಾಜಕೀಯ, ಪ್ರಜಾಪ್ರಭುತ್ವ, ಹವಾಮಾನ ಬದಲಾವಣೆ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಪ್ರಗತಿಪರ ರಾಜಕೀಯ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X