ಸಣ್ಣ, ಮಧ್ಯಮ ಕೈಗಾರಿಕಾ ಕ್ಷೇತ್ರ ಶೇ.36ರಷ್ಟು ಅಭಿವೃದ್ಧಿ: ವಿಜಯಕುಮಾರ್

ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರ ಶೇ.36ರಷ್ಟು ಅಭಿವೃದ್ಧಿ ಹೊಂದಿದೆ ಎಂದು ಕಾರ್ಪೋರೇಷನ್ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಎನ್. ವಿಜಯಕುಮಾರ್ ಹೇಳಿದ್ದಾರೆ.
ಬಿಡದಿಯ ಜೆವಿಐಟಿ ಸಭಾಂಗಣದಲ್ಲಿ ಕಾರ್ಪೋರೇಷನ್ ಬ್ಯಾಂಕ್ ದಕ್ಷಿಣ ವಲಯ ಏರ್ಪಡಿಸಿದ್ದ 5ನೇ ಎಸ್ಎಂಇ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಂಕಿಂಗ್ ಮತ್ತು ಆರ್ಥಿಕ ವಲಯದ ಅಭಿವೃದ್ಧಿಯಲ್ಲಿ ಎಸ್ಎಂಇ ಪಾತ್ರ ಮಹತ್ವದ್ದು ಎಂದು ಅವರು ತಿಳಿಸಿದರು. ಕಾರ್ಪೋರೇಷನ್ ಬ್ಯಾಂಕ್ ಎಸ್ಎಂಇ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಪರಿಗಣಿಸಿದ್ದು, ಬೆಂಗಳೂರಿನ ಎಲ್ಲಾ ಪ್ರದೇಶಗಳಲ್ಲಿ ಎಸ್ಎಂಇ ಪ್ರದರ್ಶನ ಏರ್ಪಡಿಸಿ ಈ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡುವ ಕೆಲಸ ಮಾಡಲಿದೆ ಎಂದು ಹೇಳಿದರು. ಬಿಡದಿ ಜ್ಞಾನ ವಿಕಾಸ ಕೇಂದ್ರದ ನಿರ್ದೇಶಕ ಮತ್ತು ನಿವೃತ್ತ ವಿಂಗ್ ಕಮಾಂಡರ್ ರಾಮಮೂರ್ತಿ, ಕಾರ್ಪೋರೇಷನ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಟಿ.ಎಸ್. ಪ್ರಭು, ಜಗದೀಶ್ ಪ್ರಸಾದ್ ಮತ್ತಿತರರು ಹಾಜರಿದ್ದರು.
ಅಬಾಟ್ ಸಂಸ್ಥೆಗೆ ಉತ್ತಮ ಗರಿ
ಜಾಗತಿಕ ಫಾರ್ಮ ಮತ್ತು ಹೆಲ್ತ್ ಕೇರ್ ವಲಯಲ್ಲಿ ಮುಂಚೂಣಿಯಲ್ಲಿರುವ ಅಬಾಟ್ ಸಂಸ್ಥೆ 'ಕೆಲಸ ನಿರ್ವಹಿಸಲು ಉತ್ತಮವಾದ ಸಂಸ್ಥೆ' ಎಂಬ ಕೀರ್ತಿಗೆ ಪಾತ್ರವಾಗಿದೆ. ಅಲ್ಲದೆ, ಬ್ಯುಸಿನೆಸ್ ಟುಡೇ ಹೊರತಂದಿರುವ ದೇಶದ 25 ಪ್ರಮುಖ ಫಾರ್ಮ ಮತ್ತು ಹೆಲ್ತ್ ಕೇರ್ ಸಂಸ್ಥೆಗಳ ಕುರಿತ ಸಂಚಿಕೆಯಲ್ಲಿ ಅಬಾಟ್ ಕಂಪನಿಯೂ ಸೇರಿದೆ.
ಬ್ಯುಸಿನೆಸ್ ಟುಡೆ ಹೊರತಂದಿರುವ ಈ ಸಂಚಿಕೆಯಲ್ಲಿ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲಸಗಾರರು ತಮ್ಮ ಕಂಪನಿಗಳಲ್ಲಿ ಕೆಲಸ ಮಾಡುವ ರೀತಿ, ಹಣಕಾಸು ನಿರ್ವಹಣೆ, ಕಚೇರಿ ನಿರ್ವಹಣೆ, ಕೆಲಸದ ಮೌಲ್ಯಮಾಪನ, ಸ್ಥಿರತೆ ಮತ್ತು ಮಾನವ ಸಂಪನ್ಮೂಲ ಕ್ರೋಢೀಕರಿಸಿದ ಬಗ್ಗೆ ಪರಿಶೀಲಿಸಿ ರ್ಯಾಂಕಿಂಗ್ ನೀಡಲಾಗಿದೆ. ಬ್ಯುಸಿನೆಸ್ ಟುಡೆ ಮಾತ್ರವಲ್ಲದೆ ವಿದೇಶಿ ಪತ್ರಿಕೆ ಫಾರ್ಚುನ್ ಇಂಡಿಯಾವೂ ಅಬಾಟ್ ಸಂಸ್ಥೆಯನ್ನು ಉತ್ತಮ ಜನಪ್ರಿಯ ಸಂಸ್ಥೆ ಎಂದು ಗುರುತಿಸಿದೆ.
ಈ ಕುರಿತಂತೆ ಮಾತನಾಡಿದ ಅಬಾಟ್ ಸಂಸ್ಥೆ ವಲಯ ಉಪಾಧ್ಯಕ್ಷ ಭಾಸ್ಕರ್ ಅಯ್ಯರ್, ಸಂಸ್ಥೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ನೌಕರರಿಗೆ ಗುಣಮಟ್ಟದ ಸೇವಾ ಸೌಲಭ್ಯ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಡೆ ಇನ್ನೂ ಹೆಚ್ಚು ಗಮನ ನೀಡಲು ಅನುಕೂಲವಾಗಲಿದೆ ಎಂದು ಹೇಳಿದರು.
'ಬಾಯರ್ಸ್ ಜಾವಾ ಪಿಬೆರಿ ಕಾಫಿ' ಮಾರುಕಟ್ಟೆಗೆ
ಬಾಯರ್ಸ್ ಕಾಫಿ ಕಂಪನಿ 'ಬಾಯರ್ಸ್ ಜಾವಾ ಪಿಬೆರಿ ಕಾಫಿ' ಎಂಬ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆರಿಸಿದ ಅರೆಬಿಕಾ ಪಿಬರಿ ಕಾಫಿ(ಶೇ.80) ಮತ್ತು ಚಿಕೋರಿ (ಶೇ.20) ಮಿಶ್ರಣದೊಂದಿಗೆ ಈ ಕಾಫಿಪುಡಿ ಸಿದ್ಧಪಡಿಸಲಾಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಾಯರ್ಸ್ ಕಾಫಿ ಕಂಪನಿ ನಿರ್ದೇಶಕ ಶ್ರೀಕಾಂತ್ ರಾವ್, ಬಾಯರ್ಸ್ ಜಾವಾ ಪಿಬೆರಿ ಕಾಫಿಯನ್ನು ಕುಟುಂಬದ ಎಲ್ಲಾ ಸದಸ್ಯರನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಲಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ತೂಕದ ಪೌಚ್ಗಳಲ್ಲಿ ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಸೂರ್ಯ ಸೆಮ್ ಸುಣ್ಣಕ್ಕೆ ಐಎಸ್ಐ ಮಾರ್ಕ್
ಬಿಳಿ ಸುಣ್ಣದ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಮುಂಚೂಣಿ ಸಂಸ್ಥೆಯಾಗಿರುವ ಸೂರ್ಯ ಸೆಮ್ ಕಂಪನಿ ಇದೀಗ ದೀರ್ಘಕಾಲದ ಬಾಳಿಕೆಯ ಮತ್ತು ಪರಿಸರ ಸ್ನೇಹಿ ಬಿಳಿ ಸುಣ್ಣ ಐಎಸ್ಐ ಮಾರ್ಕ್ ಪಡೆದುಕೊಂಡಿದ್ದು, ತನ್ನ ಉತ್ಪನ್ನಗಳ ವಿಸ್ತರಣಾ ಯೋಜನೆ ಪ್ರಕಟಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಡಿಲೈಟ್ ಕೆಮಿಕಲ್ಸ್ನ ವ್ಯವಸ್ಥಾಪಕ ನಿರ್ದೇಶಕ ಕೋಟ ವೆಂಕಟಸುಬ್ಬರಾವ್, ಆರೋಗ್ಯಕ್ಕೆ ಹಾನಿಕರವಾದ ರಾಸಾಯನಿಕ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿ ಬಿಳಿ ಸುಣ್ಣವನ್ನು ಸಂಸ್ಥೆ ಗ್ರಾಹಕರಿಗೆ ಒದಗಿಸುತ್ತಿದೆ. ಇದರ ಜತೆಗೆ ಇನ್ನಿತರೆ ಗೃಹ ನಿರ್ಮಾಣಕ್ಕೆ ಪೂರಕ ಉತ್ಪನ್ನಗಳನ್ನೂ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ನೀಡುತ್ತಿದೆ ಎಂದು ಹೇಳಿದರು. ಮಹಾರಾಷ್ಟ್ರದ ವಾನಿ ಪ್ರದೇಶದಲ್ಲಿ ಕಂಪನಿ ಸುಮಾರು 4,500 ಮೆಟ್ರಿಕ್ ಟನ್ ಬಿಳಿ ಸುಣ್ಣ ಉತ್ಪಾದಿಸುವ ಘಟಕ ಆರಂಭಿಸಲಿದೆ. ಪ್ರಸ್ತುತ ಸಂಸ್ಥೆ ವಾರ್ಷಿಕ 40 ಕೋಟಿ ವಹಿವಾಟು ನಡೆಸುತ್ತಿದ್ದು, ಮುಂದಿನ ವರ್ಷ ಇದು ದುಪ್ಪಟ್ಟಾಗಲಿದೆ ಎಂದರು. ಅಲ್ಲದೆ, ಮುಂದಿನ ದಿನಗಳಲ್ಲಿ ಹಸಿರು ಬಣ್ಣದ ಡೋಲೋಮೈಟ್ ಎಂಬ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.
ಅವೆಸ್ಥಾ ಜಾಗತಿಕ ಕಂಪನಿ ಜೊತೆ ಒಪ್ಪಂದ
ಜೀವಶಾಸ್ತ್ರ ವಿಭಾಗದಲ್ಲಿ ಇಂಟಿಗ್ರೇಟೆಡ್ ವ್ಯವಸ್ಥೆ ಹೊಂದಿರುವ ಅವೆಸ್ಥಾ ಜೆನ್ ಲಿಮಿಟೆಡ್ ಪ್ರಾಣಿಗಳ ಆಹಾರದಲ್ಲಿ ಬಳಸಲು ತಮ್ಮದೇ ಆದ ಅವೆಸ್ಥಾ ಶೇ.100 ಶಾಖಾಹಾರಿ ಡಿಎಚ್ಎ ಉತ್ಪನ್ನ ತಯಾರಿಸಲು ವಿಶ್ವದ ಪ್ರಮುಖ ರಾಸಾಯನಿಕ ಕಂಪನಿ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಸಂಸ್ಥೆಯ ಅಧ್ಯಕ್ಷ ಡಾ. ವಿಲ್ಲೋ ಮೋರವಾಲ ಪಟೇಲ್, ಪ್ರಾಣಿಗಳ ಉತ್ತಮ ಆರೋಗ್ಯ ಮತ್ತು ಯೋಗಕ್ಷೇವು ಹೆಚ್ಚಿಸುವ ವಿಜ್ಞಾನ ಆಧರಿತ ಉತ್ಪನ್ನಗಳನ್ನು ಅನ್ವೇಷಿಸುವುದು ತಮ್ಮ ಬದ್ಧತೆಯಾಗಿದೆ. ಈ ನಿಟ್ಟಿನಲ್ಲಿ ಜಾಗತಿಕ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು.
ಅವೆಸ್ಥಾ ಡಿಎಚ್ಎ ಉತ್ಪನ್ನದಲ್ಲಿರುವ ಡಿಎಚ್ಎ ವಿಭಿನ್ನ ಬಗೆಯ ಮೀನಿನ ಎಣ್ಣೆ ಮತ್ತು ಸಮುದ್ರತೀರದ ಉತ್ಪನ್ನಗಳಲ್ಲಿರುತ್ತದೆ. ಮುಖ್ಯವಾಗಿ ಹಿಂದೂ ಮಹಾಸಾಗರದಲ್ಲಿ ಲಭ್ಯವಿರುವ ಮೈಕ್ರೋ ಅಲ್ಗಾಯಿಯಿಂದ ಇದನ್ನು ಸಿದ್ಧಪಡಿಸಲಾಗಿದೆ.
ಐಟಿಸಿ ಫುಡ್ಸ್ನ 'ದಾಲ್ ಬುಖಾರ' ಉತ್ಪನ್ನ ಮಾರುಕಟ್ಟೆಗೆ
ಐಟಿಸಿ ಫುಡ್ಸ್ನ ರೆಡಿ ಟು ಈಟ್ ಆಹಾರ ಉತ್ಪಾದನಾ ಅಂಗ ಸಂಸ್ಥೆ ಕಿಚನ್ಸ್ ಆಫ್ ಇಂಡಿಯಾ ದಾಲ್ ಬುಖಾರ ಎಂಬ ನೂತನ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ದಾಲ್ ಬುಖಾರವನ್ನು ರಾತ್ರಿಯಿಡೀ ಬೇಯಿಸಿ, ಅದಕ್ಕೆ ಟೊಮೆಟೋ, ಶುಂಠಿ, ಬೆಳ್ಳುಳ್ಳಿ ಮಿಶ್ರಣ ಮಾಡಿ ತಿನ್ನಲು ಸಿದ್ಧಪಡಿಸಲಾಗಿದೆ. ನೈರುತ್ಯ ಭಾರತದಲ್ಲಿ ಚಾಲ್ತಿಯಲ್ಲಿರುವ ಆಹಾರ ಪದ್ಧತಿಯಂತೆ ಇದನ್ನು ತಯಾರಿಸಲಾಗಿದೆ. ರಾಜ್ಯದ ಆಯ್ದ ಸೂಪರ್ ಮಾರ್ಕೆಟ್ಗಳು, ಮಲ್ಟಿ ಬ್ರಾಂಡ್ ಔಟ್ಲೆಟ್ಗಳು, ಹೈಪರ್ ಮಾರ್ಕೆಟ್ಗಳಲ್ಲಿ ದಾಲ್ ಬಿಖಾರ ಪ್ಯಾಕೆಟ್ಗಳು ಲಭ್ಯವಿದ್ದು, 100 ದರ ನಿಗದಿಪಡಿಸಲಾಗಿದೆ. ಅಲ್ಲದೆ ಗ್ರಾಹಕರು http://shopping.kitchensofindia.com/dal-bukhara.html ಇ-ಮಾರುಕಟ್ಟೆ ಮೂಲಕವೂ ಇದನ್ನು ಖರೀದಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಟೈಟನ್ ಸ್ಟಾರ್ ಬಿಡುಗಡೆ
ಗಡಿಯಾರ, ಚಿನ್ನಾಭರಣ ಮತ್ತು ಕನ್ನಡಕ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟೈಟನ್ ಇಂಡಸ್ಟ್ರೀಸ್ ಈಗ ಟೈಟನ್ ಕಂಪನಿ ಲಿಮಿಟೆಡ್ ಆಗಿ ಪರಿವರ್ತನೆಯಾಗಿದೆ. ಇದಕ್ಕೆ ತಕ್ಕಂತೆ ತನ್ನ ನೂತನ ಕಾರ್ಪೋರೇಟ್ ಲಾಂಛನ ಟೈಟನ್ ಸ್ಟಾರ್ ಅನ್ನೂ ಬಿಡುಗಡೆ ಮಾಡಿದೆ.
ಈ ಕುರಿತಂತೆ ಮಾತನಾಡಿದ ಟೈಟನ್ ಕಂಪನಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್, 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಕಂಪನಿ ತನ್ನ ಮುಂದಿನ ಯೋಜನೆಗಳನ್ನು ಪ್ರಕಟಿಸಲು ಇದು ಸೂಕ್ತ ಸಮಯ. ಈ ನಿಟ್ಟಿನಲ್ಲಿ ವೈವಿಧ್ಯಮಯ ಶೈಲಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.
ಜನರ ವಿಶ್ವಾಸ ಮತ್ತು ನಂಬಿಕೆಗೆ ಪಾತ್ರವಾಗಿರುವ ಟೈಟನ್ ಕಂಪನಿ, ಕಾಲು ಶತಮಾನ ಪೂರೈಸಿದ ಹಿನ್ನೆಲೆಯಲ್ಲಿ ಷೇರುದಾರರು, ಗ್ರಾಹಕರು ಮತ್ತು ವಿತರಕರ ಜತೆ ಪರಿಣಾಮಕಾರಿ ಸಂವಹನಕ್ಕಾಗಿ ಜನರಿಗೆ ಆಪ್ತ ಎನಿಸುವ ಹೆಸರು ಮತ್ತು ಲಾಂಛನವನ್ನು ಅಳವಡಿಸಿಕೊಂಡಿದೆ ಎಂದು ತಿಳಿಸಿದರು.
ಥಾಯ್ ಉತ್ಪನ್ನಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ
ರಾಯಲ್ ಥಾಯ್ ಸರ್ಕಾರದ ಆರ್ಥಿಕ ಸಚಿವಾಲಯದ ಅಂತಾರಾಷ್ಟ್ರೀಯ ವ್ಯವಹಾರ ಅಭಿವೃದ್ಧಿ ಇಲಾಖೆಯ ಥೈಲ್ಯಾಂಡ್ ಮೂಲೋತ್ಪನ್ನ ಮತ್ತು ವ್ಯವಹಾರಿಕ ಸಮನ್ವಯ ಪ್ರದರ್ಶನ ಬೆಂಗಳೂರಿನ ಹೊಟೇಲ್ ಲಲಿತ್ ಅಶೋಕದಲ್ಲಿ ಆ.29ರಿಂದ 31ರವರೆಗೆ ನಡೆಯಿತು. ಥಾಯ್ ಉತ್ಪನ್ನಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದ್ದು, ಬೆಂಗಳೂರಿನಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಪರಸ್ಪರ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಈ ಪ್ರದರ್ಶನ ಆಯೋಜಿಸಲಾಗಿತ್ತು. ರಾಯಲ್ ಥಾಯ್ ಸರ್ಕಾರದ ಆರ್ಥಿಕ ಸಚಿವಾಲಯದಡಿ ಬರುವ ಅಂತಾರಾಷ್ಟ್ರೀಯ ಅಭಿ ವೃದ್ಧಿ ಇಲಾಖೆ ಮುಂಬೈನಲ್ಲಿ ಥಾಯ್ ಟ್ರೇಡ್ ಸೆಂಟರ್ ಸ್ಥಾಪಿಸಿ ಎರಡೂ ದೇಶಗಳ ವ್ಯವಹಾರ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ. ಇದೀಗ ಮೂಲೋತ್ಪನ್ನ ಮತ್ತು ವ್ಯವಹಾರಿಕ ಸಮನ್ವಯ ಪ್ರದರ್ಶನದ ಮೂಲಕ ಸಂಬಂಧವನ್ನು ಇನ್ನಷ್ಟು ವೃದ್ಧಿಸಲು ಮುಂದಾಗಿದೆ.
ಐಡಿಯಾ ವಿಎಎಸ್ ಗಿಫ್ಟ್ ಕಾರ್ಡ್ ಬಿಡುಗಡೆ
ದೇಶದ ಪ್ರಮುಖ ಮೊಬೈಲ್ ಆಪರೇಟರ್ ಐಡಿಯಾ ಸೆಲ್ಯೂಲರ್ ಕರ್ನಾಟಕದ ತನ್ನ ಗ್ರಾಹಕರಿಗೆ 'ಐಡಿಯಾ ವಿಎಎಸ್ ಗಿಫ್ಟ್ ಕಾರ್ಡ್' ಬಿಡುಗಡೆ ಮಾಡಿದೆ. ಈ ಗಿಫ್ಟ್ ಕಾರ್ಡ್ ಹೊಂದಿದವರು ಮೌಲ್ಯ ತುಂಬಿದ ಎರಡು ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಡಯಲರ್ ಟೋನ್- ಸಬ್ಸ್ಕ್ರೈಬ್ ಮಾಡಲು ಶ್ರೀ888ಶ್ರೀ1 ಡಯಲ್ ಮಾಡಬೇಕು. ಮಿಸ್ಡ್ ಕಾಲ್ ಅಲರ್ಟ್ಗೆ ಶ್ರೀ777ಶ್ರೀ25 ಡಯಲ್ ಮಾಡಬೇಕು. ಕ್ರಿಕೆಟ್ ಪ್ಯಾಕ್ಗೆ ಶ್ರೀ777ಶ್ರೀ35, ನ್ಯೂಸ್ ಪ್ಯಾಕ್ಗೆ ಶ್ರೀ777ಶ್ರೀ45 ಮತ್ತು ವ್ಯಾಪ್ ಸೇವೆಗಾಗಿ ಶ್ರೀ777ಶ್ರೀ55 ಡಯಲ್ ಮಾಡಬೇಕು. ಈ ಕುರಿತಂತೆ ಮಾತನಾಡಿದ ಐಡಿಯಾ ಸೆಲ್ಯುಲರ್ನ ಮುಖ್ಯ ನಿರ್ವಹಣಾಧಿಕಾರಿ ಶಿವಗಣಪತಿ, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಐಡಿಯಾ ವಿಎಎಸ್ ಗಿಫ್ಟ್ ಕಾರ್ಡ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಇದನ್ನು ಸಂತೋಷದಿಂದ ಸ್ವೀಕರಿಸಲಿದ್ದಾರೆ ಎಂದರು. ವಿವರಕ್ಕೆ ಗ್ರಾಹಕ ಸೇವಾ ಕೇಂದ್ರ 98440 12345 ಸಂಪರ್ಕಿಸಬಹುದು.
ಎಸ್ ಬ್ಯಾಂಕ್ ಹಣ ಪಾವತಿ ಮತ್ತಷ್ಟು ಸರಳ
ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶದಲ್ಲೇ 4ನೇ ಸ್ಥಾನ ಹೊಂದಿರುವ ಎಸ್ ಬ್ಯಾಂಕ್ ತನ್ನ ಮೊಬೈಲ್ ಪಾಯಿಂಟ್ ಆಫ್ ಸೆಲ್ಸ್(ಎಂಪಿಒಎಸ್) ತಂತ್ರಗಾರಿಕೆ ಮೂಲಕ ಇ-ಕಾಮರ್ಸ್ ಹಾಗೂ ಹಂಚಿಕೆಯಾದ ನಂತರ ಹಣ ಪಾವತಿ ವೇದಿಕೆಗಳನ್ನು ಮತ್ತಷ್ಟು ಸರಳೀಕರಣಗೊಳಿಸಿದೆ. ಇದು ವಿಮಾನ ಮತ್ತು ಸಮಗ್ರ ಸಾರಿಗೆ ಹಾಗೂ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಬ್ಲೂಡಾರ್ಟ್ ಸಂಸ್ಥೆಗೆ ಅತ್ಯಂತ ಉಪಯುಕ್ತ ಸೇವೆಯಾಗಿದೆ. ಕ್ಯಾಷ್ ಆನ್ ಡೆಲಿವರಿ(ವಿತರಣೆಯಾದ ನಂತರ ಪಾವತಿ) ಬ್ಲೂಡಾರ್ಟ್ನ ಪ್ರಮುಖ ಸೇವೆಯಾಗಿದ್ದು, ಎಸ್ ಬ್ಯಾಂಕ್ನ ಸರಳ ಯೋಜನೆ ಇದಕ್ಕೆ ಅನುಕೂಲವಾಗಲಿದೆ. ಈ ಕುರಿತಂತೆ ಮಾತನಾಡಿದ ಎಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಸಿತ್ ಒಬೆರಾಯ್, ದೇಶದ ಪಾವತಿ ಸಂಗ್ರಹಣೆ ಪ್ರಕ್ರಿಯೆಯಲ್ಲಿ ವಿನೂತನ ತಂತ್ರಗಾರಿಕೆ ಪರಿಚಯಿಸಲು ಎಸ್ ಬ್ಯಾಂಕ್ ಮತ್ತು ಬ್ಲೂಡಾರ್ಟ್ ಪರಸ್ಪರ ಪಾಲುದಾರಿಕೆ ಹೊಂದಿದೆ ಎಂದರು. ಬ್ಲೂಡಾರ್ಟ್ ಎಕ್ಸ್ಪ್ರೆಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಹಣಕಾಸು ನಿರ್ದೇಶಕ ಯೋಗೇಶ್ ಡಿಂಗ್ರಾ ಹಾಜರಿದ್ದರು.
ಶೇ.80ಕ್ಕೂ ಹೆಚ್ಚು ಮಂದಿಗೆ ವಿಟಮಿನ್ ಡಿ ಕೊರತೆ: ಡಾ. ಸಿದ್ದಾರ್ಥ ಎನ್. ಷಾ
ಭಾರತದಲ್ಲಿ ಶೇ.80ಕ್ಕೂ ಹೆಚ್ಚು ಮಂದಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಜನರಲ್ ಆಫ್ ದ ಅಸೋಸಿಯೇಷನ್ ಆಫ್ ದ ಫಿಜಿಷಿಯನ್ ಆಫ್ ಇಂಡಿಯಾ(ಜೆಎಪಿಐ) ಮುಖ್ಯ ಗೌರವ ಸಂಪಾದಕ ಡಾ. ಸಿದ್ದಾರ್ಥ ಎನ್. ಷಾ ಹೇಳಿದ್ದಾರೆ. ವಿಟಮಿನ್ ಡಿ ಕೊರತೆಯಿಂದಾಗಿ ಅಧಿಕ ರಕ್ತದೊತ್ತಡವೂ ಬರುತ್ತದೆ. ಭಾರತದಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿರುವುದಕ್ಕೆ ವಿಟಮಿನ್ ಡಿ ಕೊರತೆ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಟಮಿನ್ ಡಿ ಕೊರತೆ ತಡೆಗಟ್ಟಲು ಭಾರತೀಯರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ ಅವರು, ಈ ಕೊರತೆ ನಿವಾರಿಸಿದರೆ ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


