ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ಒಂದು ಸಿಹಿ ಸುದ್ದಿ. ಕನ್ನಡವೂ ಸೇರಿದಂತೆ ಎಂಟು ಭಾರತೀಯ ಭಾಷೆಗಳನ್ನು ಬಳಸಲು ಸ್ಯಾಮ್ಸಂಗ್ನ ಗ್ಯಾಲಕ್ಸಿ ಗ್ರಾಂಡ್, ಗ್ಯಾಲಕ್ಸಿ ಎಸ್4 ಮತ್ತು ಟ್ಯಾಬ್ 3ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಿಂದಿ, ಬಂಗಾಳಿ, ತಮಿಳು, ತೆಲುಗು, ಮಲೆಯಾಳಂ, ಮರಾಠಿ ಮತ್ತು ಗುಜರಾತಿ ಇತರ ಭಾಷೆಗಳು. ಈ ನೂತನ ಸೇವೆಯಿಂದಾಗಿ ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ಮೆಚ್ಚಿನ ಅಪ್ಲಿಕೇಶನ್ಗಳನ್ನು ಸ್ಯಾಮ್ಸಂಗ್ ಅಪ್ಲಿಕೇಶನ್ ಸ್ಟೋರ್ನಲ್ಲಿ ತಮ್ಮದೇ ಭಾಷೆಯಲ್ಲಿ ಪಡೆಯಬಹುದು. ಮನರಂಜನೆ, ಗೇಮ್ಸ್ ಸೇರಿದಂತೆ ಪ್ರಮುಖ ಮಾಹಿತಿಗಳು ಆಯಾ ಭಾಷೆಗಳಲ್ಲಿ ಸಿಗಲಿದೆ. ಸಾಮಾಜಿಕ ಜಾಲ ತಾಣಗಳು, ಪ್ರಮುಖ ಪತ್ರಿಕೆಗಳನ್ನೂ ಆಯಾ ಭಾಷೆಗಳಲ್ಲೇ ವೀಕ್ಷಿಸಲು ಸಾಧ್ಯವಾಗುತ್ತದೆ.