

ನವದೆಹಲಿ: ಹೊಸ ವರ್ಷದ ಮೊದಲ ದಿನದಿಂದ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿ ಹಣವನ್ನು ಗ್ರಾಹಕರು ನೇರವಾಗಿ ಅವರ ಬ್ಯಾಂಕ್ ಖಾತೆಯಿಂದ ಪಡೆಯಬಹುದಾಗಿದ್ದು, ಇನ್ನು ಮುಂದೆ ಗ್ರಾಹಕರು ಅಡುಗೆ ಅನಿಲವನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬಹುದಾಗಿದೆ.
ನೇರ ಸೌಲಭ್ಯ ವರ್ಗಾವಣೆಯಡಿ ಎಲ್‌ಪಿಜಿ ಬಳಕೆದಾರರ ಆಧಾರ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿ ಅಂಥವರಿಗೆ ಮಾರುಕಟ್ಟೆ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸರಬರಾಜು ಮಾಡಲಾಗುತ್ತದೆ. ನಂತರ ದೊರೆಯಬಹುದಾದ ಸಬ್ಸಿಡಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಸ್ಥಳೀಯ ಎಲ್‌ಪಿಜಿ ಬಳಕೆದಾರರು ಎಲ್‌ಪಿಜಿಯ ನೇರ ಸೌಲಭ್ಯ ವರ್ಗಾವಣೆ ಯೋಜನೆಗೆ ಸೇರಿದ ಕ್ಷಣದಲ್ಲೇ ಅವರ ಬ್ಯಾಂಕ್ ಖಾತೆಗೆ 568.ರುಗಳು ಜಮಾ ಆಗಲಿದ್ದು, ಈ ಯೋಜನೆಗೆ ಪಹಾಲ್ ಎಂದು ಮರುನಾಮಕರಣ ಮಾಡಲಾಗಿದೆ. ಈ ಹಣವನ್ನು ಗ್ರಾಹಕರು ಮಾರುಕಟ್ಟೆ ದರದಲ್ಲಿ 14.2 ಕೆ.ಜಿ ಅಡುಗೆ ಅನಿಲ ಸಿಲಿಂಡರ್ ಪಡೆಯಲು ಬಳಸಹುದು.
2013ರಲ್ಲಿ ಯುಪಿಎ ಸರ್ಕಾರ ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆಯನ್ನು ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಠಾತ್ತನೆ ಸ್ಥಗಿತಗೊಳಿಸಲಾಗಿತ್ತು. ಈಗ ಈ ಯೋಜನೆಯನ್ನು ನಗದು ಸಬ್ಸಿಡಿ ಪಡೆಯಲು ಆಧಾರ್ ಸಂಖ್ಯೆಯ ಅಗತ್ಯದಿಂದ ಹೊರತುಪಡಿಸಿ ಪರಿಷ್ಕರಿಸಲಾಗಿದೆ.