ವಾಣಿಜ್ಯ

ಚಿದಂಬರಂ ಬಜೆಟ್ ಸಾವಧಾನದ ಚಿಂತನೆ

ಚಿದಂಬರಂ ಬಜೆಟ್ ಸಾವಧಾನದ ಚಿಂತನೆ
Published On :

ಸುಮಾರು ಎಂಟು ದಿನಗಳ ಹಿಂದೆ, ವಿತ್ತಮಂತ್ರಿ ಚಿದಂಬರಂ ಲೋಕಸಭೆಯಲ್ಲಿ ಸದ್ದು-ಗದ್ದಲದ ನಡುವೆಯೇ, ತಮ್ಮ ಲೇಖಾನುದಾನದ ತಾತ್ಕಾಲಿಕ ಬಜೆಟ್ ಮಂಡಿಸಿದಾಗ ಪ್ರಕಟವಾದ ತತ್‌ಕ್ಷಣದ ಪ್ರತಿಕ್ರಿಯೆ: ಶಹಭಾಷ್, ಸಾಧ್ಯವಿರುವಷ್ಟನ್ನು ಸಾಧಿಸಿದ್ದೀರಿ.
ಆದರೆ ಎರಡು ದಿನಗಳ ಅನಂತರ, ಪೇಟೆಯ ವರ್ತನೆ ಹಾಗೂ ಹಲವು ತೀಕ್ಷ್ಣಮತಿ ಅರ್ಥಶಾಸ್ತ್ರ ಪಂಡಿತರ ಗಂಭೀರ ಹೇಳಿಕೆಗಳನ್ನು ಗಮನಿಸಿದರೆ, ಚಿದಂಬರಂ ಲೇಖಾನುದಾನದ ಶಿಸ್ತನ್ನು ಮುರಿದರೇನೋ ಎನ್ನುವ ಭಾವನೆ ನಿಧಾನವಾಗಿ ಮೂಡುತ್ತಿದೆ. ಒಂದು ವರದಿಯಂತೆ, ಚಿದಂಬರಂ ಅವರ ಭಾಷಣದಲ್ಲಿ ಪ್ರಕಟವಾಗಿರುವ ಅನೇಕ ಅಂಕಿ-ಅಂಶಗಳು ವಾಸ್ತವ ಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲವೆನ್ನುವ ಅಭಿಪ್ರಾಯ ಪ್ರಕಟವಾಗಿದೆ. ಅದು ಎಲ್ಲಿಂದಲೋ ಮಾಯಾಲೋಕದಿಂದ ಬಂದಿರಬೇಕು ಎಂದವರೂ ಇದ್ದಾರೆ. ಇಬ್ಬರು ಪಂಡಿತರ ಪ್ರಕಾರ ಚಿದಂಬರಂ ಸರ್ಕಾರದ ವರಮಾನ ಹಾಗೂ ಆರ್ಥಿಕ ವ್ಯವಸ್ಥೆಯ ಆದಾಯದ ಅಂಶಗಳನ್ನು ಅನಗತ್ಯವಾಗಿ ಉತ್ಪ್ರೇಕ್ಷೆಸಿದ್ದಾರೆ.
ಮಧ್ಯಾವಧಿ-ತಾತ್ಕಾಲಿಕ ಬಜೆಟ್ ಮೂಲತಃ ನಾಲ್ಕಾರು ತಿಂಗಳ ವೆಚ್ಚದ ವಿವರಗಳನ್ನು ತಿಳಿಸುವುದಕ್ಕೆ ಮಾತ್ರ ಅವಕಾಶ ಪಡೆದಿರುತ್ತದೆ. ಈ ಚೌಕಟ್ಟನ್ನು ಚಿದಂಬರಂ ಮೀರಿದ್ದಾರೆ. ಕಾರುಗಳು ಹಾಗೂ ಭಾರಿ ಯಂತ್ರೋಪಕರಣಗಳ ಮೇಲಿನ ಅಬಕಾರಿ ಸುಂಕದ ದರವನ್ನು ಶೇಕಡಾ 2 ರಷ್ಟು ಇಳಿಸಿದ್ದಾರೆ. ಇದು 'ಔಟ್ ಆಫ್ ಆರ್ಡರ್‌' ಎಂದಿದ್ದಾರೆ ಒಬ್ಬ ಪಂಡಿತರು.
ಮುಂದಿನ ಸರ್ಕಾರವನ್ನು (ಅದರ ನಾಯಕರು ಯಾರೇ ಆಗಿರಲಿ) ಈಗಿನ ಸರ್ಕಾರದ ಗುರಿ ಹಾಗೂ ಉದ್ದೇಶಗಳಿಗೆ ಬಾಧಿಸುವುದು ಎಷ್ಟರ ಮಟ್ಟಿಗೆ ಸರಿ? 2014-15ನೇ ಸಾಲಿನ ಇನ್‌ಫ್ಲೇಶನ್ ಗುರಿಯನ್ನು ಶೇಕಡಾ 4.1 ರ ಹಂತಕ್ಕೆ ಮಿತಿಗೊಳಿಸಲು ಈಗಿನ ಸರ್ಕಾರಕ್ಕೆ ಇರುವ ಅಧಿಕಾರವೇನು? ಆಹಾರ ಭದ್ರತೆ ಯೋಜನೆಯ ಜಾರಿಗೆ 1.15 ಲಕ್ಷ ರೂಪಾಯಿಗಳನ್ನು ಮುಂದಿನ ವರ್ಷ ವೆಚ್ಚ ಮಾಡಲೇಬೇಕು ಎಂದು ತಾತ್ಕಾಲಿಕ ಬಜೆಟ್ ಭಾಷಣದಲ್ಲಿ ಹೇಳಿದ್ದು ಎಷ್ಟರಮಟ್ಟಿಗೆ ಸಮಂಜಸ? ಸುಮಾರು 66 ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ರಾಜ್ಯಗಳಿಗೇ ವಹಿಸಿಕೊಟ್ಟು, ಅದರ ವೆಚ್ಚಕ್ಕೆ ಕೇಂದ್ರವೇ ಸೂಕ್ತ ವ್ಯವಸ್ಥೆ ಮಾಡುವ ಪ್ರಸ್ತಾಪವೂ ತಾತ್ಕಾಲಿಕ ಬಜೆಟ್‌ನಲ್ಲಿದೆ. ಈ ಹೊಸ ವ್ಯವಸ್ಥೆಯ ಅಗತ್ಯ ಹಾಗೂ ಅನುಕೂಲತೆಯನ್ನು ಭಾಷಣದಲ್ಲಿ ಎಲ್ಲೂ ವಿವರಿಸಿಲ್ಲ. ಜನಸಾಮಾನ್ಯ ವರ್ಗಗಳಿಗೆ ಒಮ್ಮೆ ನೀಡಿದ ಹಕ್ಕು ಹಾಗೂ ಕೊಡುಗೆಗಳನ್ನು ಅನಂತರ ಹಿಂದಕ್ಕೆ ಪಡೆಯುವುದು ಅಸಾಧ್ಯದ ಮಾತು. ಅದು ಚಿದಂಬರಂ ಅವರಿಗೂ ಗೊತ್ತಿಲ್ಲದೇ ಇಲ್ಲ. ತಾತ್ಕಾಲಿಕ ಬಜೆಟ್‌ನ ಲೇಖಾನುದಾನ ಭಾಷಣದಲ್ಲಿ ವಿತ್ತ ಸಚಿವರು ಪ್ರಕಟಿಸಿರುವ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಹೊಣೆಗಾರಿಕೆಯನ್ನು ಹೊಸ ಸರ್ಕಾರಕ್ಕೇ ಹೊಸಿರಿದ್ದು ಸರಿಯೇ? ನೂತನ ಸರ್ಕಾರಕ್ಕೆ ತನ್ನದೇ ಆದ ಆದ್ಯತೆಗಳು, ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವ ಅವಕಾಶವಿರಬೇಕು ಅಲ್ಲವೇ?
ದೇಶದ ಉತ್ಪಾದನೆ ಹಾಗೂ ಸೇವಾ ಸೌಲಭ್ಯಗಳ ಮೌಲ್ಯದ ವಾರ್ಷಿಕ ಪ್ರಗತಿಯ ಪ್ರಮಾಣ ಗಮನಾರ್ಹವಾಗಿ ಹೆಚ್ಚುವ ಸಂಭವ ತೀರ ಕಡಿಮೆ. ಜನಸಾಮಾನ್ಯ ವರ್ಗಗಳಿಗೆ ಹೊಸದಾಗಿ ಹಲವಾರು ಹಕ್ಕುಗಳನ್ನು ನೀಡಿ, ಅದರಂತೆ ಕೊಡುಗೆ ಉಡುಗೊರೆಗಳನ್ನು ಒದಗಿಸಿ, ಆರ್ಥಿಕ ಪ್ರಗತಿಯ ಸಾಧನೆಗೂ ಸಂಪನ್ಮೂಲಗಳನ್ನು ಒದಗಿಸುವುದು ಹೇಗೆ ? ಈ ವರ್ಷ 3-ಜಿ ಟೆಲಿಕಾಮ್ ತರಂಗಾಂತರ ಹಂಚಿಕೆಯಿಂದ ಭರ್ಜರಿ ಹಣ ಬಂತು. ಮುಂದಿನ ವರ್ಷ? ಲೋಕಸಭೆಯ ಸ್ಥಾನಬಲದ ಕುರ್ಚಿಯಿಂದ ರಿಸರ್ವ್ ಬ್ಯಾಂಕಿಗೆ ಉಪದೇಶ ನೀಡಿದ್ದು ಸಜ್ಜನಿಕೆ ಅಲ್ಲ.


-ಸತ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.