ಚುನಾವಣೆ ಚಿಂತೆ: ನಿಜ ಸ್ಥಿತಿ
ಜನವರಿ ಮೊದಲ ಭಾಗದಲ್ಲಿ ಪೇಟೆ ತಣ್ಣಗಿದೆ. ಡಿಸೆಂಬರ್ನಲ್ಲಿ ಕಂಡು ಬಂದಿದ್ದ ಪ್ರವೃತ್ತಿಯ ಕಾವು ಕಡಿಮೆಯಾಗಿದೆ. ಕೆಲವು ದೊಡ್ಡ ಕಂಪನಿಗಳು ಒಳ್ಳೆಯ ಡಿವಿಡೆಂಡ್ ನೀಡಿರುವುದು ಸಹಜ ಹಾಗೂ ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಕಂಪನಿಗಳ ಗಳಿಕೆ ಹೆಚ್ಚಾಗಬಹುದು. ಸದ್ಯಕ್ಕೆ ಬಡ್ಡಿದರದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬರದೇ ಹೋದರೂ, ಭವಿಷ್ಯದಲ್ಲಿ ಒಳ್ಳೆಯ ಕಾಲದ ನಿರೀಕ್ಷೆ ಸಾಧ್ಯ. ಬರುತೈತೆ ಶುಭಕಾಲ ಎನ್ನುವ ಹಾರೈಕೆ ಇದೆ.
ಆದರೆ ಇದೆಲ್ಲ ಲೆಕ್ಕಾಚಾರವನ್ನೂ ಹೆಚ್ಚುಕಡಿಮೆ ಮಾಡಬಹುದಾದ ಶಕ್ತಿ ಚುನಾವಣೆಯ ಫಲಿತಾಂಶದಲ್ಲಿ ಇರುತ್ತದೆ. ಮೇಲ್ನೋಟಕ್ಕೆ ಪೇಟೆಯ ಜನ, ಉದ್ಯಮಿಗಳು, ಬಿಜೆಪಿ ನೇತೃತ್ವದ ಸರ್ಕಾರದ ರಚನೆಯಾಗಬಹುದೆಂದು ನಿರೀಕ್ಷಿಸಿದ್ದರೂ, ಕಳೆದ ವಾರದ ಘಟನೆಗಳಿಂದ ಆ ಜನ ಹೌಹಾರಿದ್ದಾರೆ. ಚುನಾವಣೆಯಲ್ಲಿ ಇಂತಹದ್ದೇ ಪಕ್ಷ ಗೆಲ್ಲಬೇಕೆನ್ನುವ ಮಾತನ್ನು ಉದ್ಯಮ ವಲಯ ಈಗ ಗಟ್ಟಿಯಾಗಿ ಆಡುತ್ತಿಲ್ಲ. ಸದ್ಯ ಅರಾಜಕತೆಯ ಅಂಚಿನಿಂದ ಆರ್ಥಿಕ ವ್ಯವಸ್ಥೆ- ಆಡಳಿತ ಹೊರಗೆ ಬಂದರೆ ಸಾಕೆನ್ನುವ ಪರಿಸ್ಥಿತಿ. ಈಗ ಪೇಟೆ ಜನ, ಉದ್ಯಮ ವಲಯ ಕಾದು ಕುಳಿತಿರುವುದು, ಒಂದು ಸುಭದ್ರ ಆಡಳಿತ ವ್ಯವಸ್ಥೆಗಾಗಿ. ಚುನಾವಣೆ ಆ ವ್ಯವಸ್ಥೆಗೆ ನೆರವು ನೀಡಬಲ್ಲದೇ?
ಅದೇ ಒಂದು ಯಕ್ಷ ಪ್ರಶ್ನೆ
ಸದ್ಯದಲ್ಲಿ ಗ್ರಾಮೀಣ ಅರ್ಥವ್ಯವಸ್ಥೆ ಒಂದು ಸೀಮಿತ ಚೌಕಟ್ಟಿನಲ್ಲಿ ಸುಧಾರಿಸಿದೆ. ಇದುವರೆಗಿನ ಮಾತು ಹೇಗಾದರೂ ಇರಲಿ, ಭವಿಷ್ಯದಲ್ಲಿ ಪ್ರಗತಿಗೆ ಉದ್ಯೋಗಗಳನ್ನು ನಿರ್ಮಿಸುವ ಯೋಜನೆಗಳು ಬೇಕು. ಸಬ್ಸಿಡಿ- ನೆರವು- ಕೊಡುಗೆ- ಉಡುಗೊರೆಗಳು ಪ್ರಗತಿಯ ವೇಗವನ್ನು ಹೆಚ್ಚಿಸಲಾರವು. ಅದನ್ನು ಪೇಟೆಯ ಜನ ಮನಗಂಡಿದ್ದಾರೆ. ಆದರೆ ಓಟು ಕೊಡುವ ಸಮುದಾಯಗಳಲ್ಲೂ ಅದೇ ಭಾವನೆ ಮೂಡುವುದೋ, ಇಲ್ಲವೋ ಎನ್ನುವುದೇ ಸದ್ಯದಲ್ಲಿನ ಪೇಟೆಯ ಚಿಂತೆ.
ಡಿವಿಡೆಂಟ್ ವಿಚಾರ
ಖಾಸಗಿ ಕಂಪೆನಿಗಳ ಡಿವಿಡೆಂಡ್ಗಳು ಹೆಚ್ಚುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಪೊರೇಟ್ ಇಂಡಿಯಾದ ಡಿವಿಡೆಂಡ್ ಪಾವತಿ ದುಪ್ಪಟ್ಟಾಗಿದೆ. ಆದರೆ, ಕೆಲವು ಸರ್ಕಾರಿ ಕಂಪೆನಿಗಳು ದೊಡ್ಡ ಪ್ರಮಾಣದ ಡಿವಿಡೆಂಡ್ ನೀಡಿದರೂ (ಕೋಲ್ ಇಂಡಿಯಾ), ಸರಾಸರಿ ಲೆಕ್ಕದಲ್ಲಿ ಸರ್ಕಾರಿ ಕಂಪೆನಿಗಳ ಡಿವಿಡೆಂಡ್ ಕಡಿಮೆ. ಕೆಲವು ಬ್ಯಾಂಕ್ಗಳು ಹೆಚ್ಚಿನ ಡಿವಿಡೆಂಡ್ ನೀಡಿ, ಮರು ವರ್ಷದಲ್ಲೇ ಡಿವಿಡೆಂಡ್ ಪ್ರಮಾಣಕ್ಕಿಂತ ಅಧಿಕ ಮೊತ್ತದ ಬಂಡವಾಳವನ್ನು ಸರ್ಕಾರದಿಂದಲೇ ಪಡೆದಿರುವುದೂ ನಿಜ. ವಾಸ್ತವದಲ್ಲಿ ಇದೊಂದು ಅನಾರೋಗ್ಯಕರವಾದ ಅವಸ್ಥೆ. ಆದರೆ ಬಜೆಟ್ ಲೆಕ್ಕಾಚಾರದಲ್ಲಿ ಹೊಂದುವಂತಹದ್ದು. ಒಟ್ಟಾರೆ ಲೆಕ್ಕದಲ್ಲಿ ಡಿವಿಡೆಂಡ್ ಹಂಚಿಕೆಯ ಪ್ರಮಾಣ ಹೆಚ್ಚಾಗುತ್ತಿರುವುದು ನಿಜ. ಆದರೆ ಕೆಲವು ಕಂಪೆನಿಗಳ ಡಿವಿಡೆಂಡ್ ಹಂಚಿಕೆಯ ಸ್ವರೂಪವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಯಾವುದೋ ಒಂದು ನಿರ್ದಿಷ್ಟ ಆಸಕ್ತ ಹಿತಕ್ಕೆ ಅನುಕೂಲ ಮಾಡಿಕೊಡುವ ಪ್ರವೃತ್ತಿ ಕಂಡುಬರುತ್ತಿದೆ. ಎಲ್ಲ ಕಂಪೆನಿಗಳ ಲೆಕ್ಕ ಹಿಡಿದರೆ, ಡಿವಿಡೆಂಡ್ಗಳ ವೃದ್ಧಿ ವಾರ್ಷಿಕ ಚಕ್ರಪಡ್ಡಿ ರೀತಿಯ ಲೆಕ್ಕದಲ್ಲಿ ಶೇಕಡಾ 19ರಷ್ಟು ಹೆಚ್ಚಿವೆ. ರುಪಾಯಿ ಲೆಕ್ಕದಲ್ಲಿ ಡಿವಿಡೆಂಡ್ಗಳ ಮೌಲ್ಯ ಒಂದು ಲಕ್ಷ ಕೋಟಿ ರುಪಾಯಿಗೂ ಜಾಸ್ತಿ.
ಕೊನೆ ಮಾತು
ಈ ಬಾರಿ ವಿತ್ತ ಮಂತ್ರಿ ಚಿದಂಬರಂ, ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಸರ್ಕಾರದ ವೆಚ್ಚಕ್ಕೆ ಕತ್ತರಿ ಹಾಕಬೇಕೆನ್ನುವ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ವೆಚ್ಚ ಸುಮಾರು ಒಂದು ಲಕ್ಷ ಕೋಟಿ ರುಪಾಯಿಗಳಷ್ಟು ಕಡಿಮೆಯಾಗಬಹುದು. ಬಜೆಟ್ನಲ್ಲಿ ಪ್ರಕಟಿಸಿದ ವಿತ್ತೀಯ ಕೊರತೆಯ ಮಿತಿಯನ್ನು ದಾಟುವುದಿಲ್ಲವೆನ್ನುವ ಮಾತನ್ನು ಉಳಿಸಿಕೊಳ್ಳುವುದೇ ಚಿದಂಬರಂ ಅವರ ಉದ್ದೇಶ. ಆದರೆ ಸರ್ಕಾರದ ವೆಚ್ಚ ಕಡಿಮೆಯಾದರೆ, ಅದು ಪ್ರಗತಿಯ ವೇಗವನ್ನು ಕುಗ್ಗಿಸುತ್ತದೆ ಎನ್ನುವುದು ಅನುಭವದ ಮಾತು.
-ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

