ಅಡಕೆಗೆ ಬಂದ ಮಾನ

ಅಡಕೆಗೆ ಬಂದ ಮಾನ
Updated on: 

ಸುಮಾರು ನಾಲ್ಕು ದಶಕಗಳ ನಂತರ ಮೊದಲ ಬಾರಿ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ಎಪ್ಪತ್ತರ ದಶಕದಲ್ಲಿ ಪಾತಾಳಕ್ಕಿಳಿದ ಅಡಿಕೆ ದರ ಎರಡು-ಮೂರು ತಿಂಗಳಿನಿಂದ ಗಗನಕ್ಕೇರುತ್ತಿದೆ. ಈ ಮಧ್ಯೆ ಸ್ವಲ್ಪ ಸ್ವಲ್ಪ ಏರಿದರೂ ಈಗಿನಂತೆ ಕಣ್ಣಿಗೆ ರಾಚುವಷ್ಟು ಮತ್ತು ಮಾಧ್ಯಮದಲ್ಲಿ ದಪ್ಪಕ್ಷರದಲ್ಲಿ ಪ್ರಚಾರ ಪಡೆಯುವಷ್ಟು ಏರಿರಲಿಲ್ಲ. ಈ ಏರಿಕೆ ಅಡಿಕೆ ಬೆಳೆಯುವ ಖರ್ಚಿಗೆ ಸಾಟಿಯಾಗದಿದ್ದರೂ ಇದು ಈ ನಿಟ್ಟಿನಲ್ಲಿ ಸಾಗಬಹುದು ಎನ್ನುವ ಆಶಾಭಾವನೆ ಅಡಿಕೆ ಬೆಳೆಗಾರರಲ್ಲಿ ಮೂಡಿದೆ. ಕಳೆದ ಒಂದು ತಿಂಗಳಿನಲ್ಲಿ ಅಡಿಕೆ ಬೆಳೆಯ ಪ್ರಮುಖ ಮಾರುಕಟ್ಟೆಯಾದ ಶಿವಮೊಗ್ಗದಲ್ಲಿ ಕೆಂಪು ಅಡಿಕೆ ಕ್ವಿಂಟಾಲ್‌ಗೆ ದಾಖಲೆ 51 ಸಾವಿರಕ್ಕೆ
ಏರಿದರೆ, ಶಿರಸಿ ಮಾರುಕಟ್ಟೆಯಲ್ಲಿ ಬಿಳಿ ವರೈಟಿ ಚಾಲಿ 20 ಸಾವಿರ ದಾಟಿದೆ.  ಅಡಿಕೆ ಬೆಳೆಗಾರ ನಾಲ್ಕು ದಶಕಗಳಲ್ಲಿ ಮೊದಲ ಬಾರಿ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾನೆ. ಈ ದರ ಎಷ್ಟು ದಿನ ಉಳಿಯಬಹುದು... ಎಷ್ಟಕ್ಕೆ ಏರಬಹುದು ತಿಳಿಯದು.
ಅರ್ಥಶಾಸ್ತ್ರದ ಪ್ರಕಾರ ಮಾರುಕಟ್ಟೆಯಲ್ಲಿ ಒಂದು ವಸ್ತುವಿನ ದರ ನಿಗದಿಯಾಗುವುದು ಅದರ ಪೂರೈಕೆ ಮತ್ತು ಅದಕ್ಕಿರುವ ಬೇಡಿಕೆಯ ಆಧಾರದ ಮೇಲೆ. ಕಳೆದ ವರ್ಷದ ಮಹಾಮಳೆಯಿಂದಾಗಿ ಸುಮಾರು ಶೇ. 40 ಬೆಳೆ ನಾಶವಾಗಿದ್ದು, ಪೂರೈಕೆಯಲ್ಲಿ ಖೋತಾ ಆಗಿದ್ದು ನಿಜ. ಇದರ ಪರಿಣಾಮ ಅಡಿಕೆ ಸೀಸನ್ ಆರಂಭದ ಒಂದೆರಡು ತಿಂಗಳಿನಲ್ಲಿಯೇ ಕಾಣಬೇಕಾಗಿತ್ತು. ಆದರೆ ಕಳೆದ 8 ತಿಂಗಳಿನಿಂದ ಸ್ಪಂದಿಸದ ಮಾರುಕಟ್ಟೆ ಈಗ ಸ್ಪಂದಿಸುವುದು ಯಾಕೆ ಎನ್ನುವುದು ಯಕ್ಷಪ್ರಶ್ನೆ.
ಅಡಿಕೆ ದರ ಏರಲು ಮುಖ್ಯ ಕಾರಣ ಆಮದು ಅಡಿಕೆ ಮೇಲಿನ ಕೇಂದ್ರ ಸರ್ಕಾರ ಹೆಚ್ಚಿಸಿರುವ ಆಮದು ಶುಲ್ಕ ಎಂದು ಹೇಳಲಾಗುತ್ತಿದೆ. ಈ ಶುಲ್ಕ ಏರಿಕೆಯಿಂದ ಆಮದು ಅಡಿಕೆ ತುಟ್ಟಿಯಾಗಿ ದೇಶೀಯ ಅಡಿಕೆಗೆ ಬೇಡಿಕೆ ಹೆಚ್ಚಾಗಿ ನಮ್ಮ ಅಡಿಕೆ ದರ ಹೆಚ್ಚುತ್ತಿದೆ ಎಂದು ಮಾರುಕಟ್ಟೆ ಪಂಡಿತರು ವಿಶ್ಲೇಷಿಸುತ್ತಾರೆ. ಆದರೆ ಆಮದು ಶುಲ್ಕ ಹೆಚ್ಚಳ ಇತ್ತೀಚಿನ ಬೆಳವಣಿಗೆಯಾಗಿರದೇ ಸುಮಾರು ಹತ್ತು ತಿಂಗಳಾಗಿವೆ. ಈ ಹತ್ತು ತಿಂಗಳಲ್ಲಿ ಕಾಣದ ಪರಿಣಾಮ ಈಗ ದಿಢೀರನೆ ಕಾಣುತ್ತಿರುವುದು ಯಾಕೆ? ಮಾರುಕಟ್ಟೆಯಲ್ಲಿ ಒಂದು ವಸ್ತುವಿನ ದರದಲ್ಲಿ ಏರುಪೇರಾಗಲು ಇನ್ನೊಂದು ಮುಖ್ಯ ಕಾರಣ ಕೆಲವು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಪಟ್ಟ  ಬೆಳವಣಿಗೆಗಳು, ಕೆಲವು ಹೊಸ ಕಾನೂನುಗಳು, ನೀತಿ ನಿಯಮಾವಳಿಗಳು ಮತ್ತು ಕೆಲವು ಅನಿವಾರ್ಯವಾದ ನಿಯಂತ್ರಣಗಳು. ನಮ್ಮ ದೇಶದಲ್ಲಿ ಮಹಾ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದ್ದು ಅದಕ್ಕೆ ಸಂಬಂಧಪಟ್ಟ ಕಠಿಣವಾದ ನೀತಿ ಸಂಹಿತೆಯ ಪ್ರಕಾರ ಮತದಾರರನ್ನು ಒಲಿಸುವ ಯಾವುದೇ ಹೆಜ್ಜೆಯನ್ನು ಇಡುವಂತಿಲ್ಲ. ಅಂಥಹ ಯಾವುದೇ ಬೆಳವಣಿಗೆ ಕಳೆದ 2-3 ತಿಂಗಳಿನಿಂದ ಆಗಲಿಲ್ಲ.
ಹಾಗಿದ್ದರೆ ಕಾರಣವೇನು?
ತಮ್ಮಲ್ಲಿರುವ ಅಡಿಕೆ ದಾಸ್ತಾನಿಗೆ ಹೆಚ್ಚಿನ ದರ ಪಡೆಯಲು ಕೆಲವರು ಆಡುತ್ತಿರುವ  ಆಟವೇ? ತಾವೇ ದರ ಹೆಚ್ಚಿಸಿ, ತಮಗೆ ಅನುಕೂಲಕರವಾದ ಮತ್ತು ಲಾಭದಾಯಕವಾದ ದರ ಬಂದಾಗ ತಮ್ಮ ದಾಸ್ತಾನನ್ನು ಖಾಲಿ ಮಾಡಿಕೊಳ್ಳುವ ಹುನ್ನಾರವೇ? ಹೀಗೊಂದು ಸಂದೇಹ ಅಡಿಕೆ  ಬೆಳೆಗಾರರನ್ನು ಕಾಡುತ್ತಿದೆ. ಹಾಗಿದ್ದರೆ ಅಡಿಕೆ ದರ ಏರಲಿಕ್ಕೆ ಕಾರಣವೇನು? ವಿದೇಶದಿಂದ ಬೇಡಿಕೆಯೇ? ಯಾವುದಾದರೂ ಬದಲಿ ಉಪಯೋಗಕ್ಕೆ ಅಡಿಕೆಗೆ ದೊರೆಯಿತೇ? ಈವರೆಗಿನ ಸಾಂಪ್ರದಾಯಿಕ ಉಪಯೋಗದಿಂದ ಅಡಿಕೆ ದರ ಈ ರೀತಿಯಾಗಿ ಉತ್ತರಮುಖಿಯಾಗಿ ಪುಟಿಯಲು ಸಾಧ್ಯವಿಲ್ಲ. ಆ ಸತ್ಯ ಹೊರಬರಲು ಕಾಲ ಇನ್ನೂ ಬಂದಿಲ್ಲ.

ಈ ಬೆಲೆ ಏರಿಕೆಯಿಂದ ಯಾರಿಗೆ ಲಾಭ?
ಅಡಿಕೆ ಬೆಳೆಗಾರರಿರುವ ಪ್ರದೇಶದಲ್ಲಿರುವ ಸಹಕಾರಿ ಸಂಘಗಳಿಗೆ ಇದರಿಂದ ಲಾಭವಾಗುವ ನಿರೀಕ್ಷೆ ಹೆಚ್ಚು. ಸುಸ್ತಿ ಸಾಲದ ಪ್ರಮಾಣ ಮತ್ತು ಸುಸ್ತಿ ಸಾಲಗಾರರ ಸಂಖ್ಯೆ ಗಮನಾರ್ಹವಾಗಿ ಇಳಿಯುವ ಸಾಧ್ಯತೆ ಹೆಚ್ಚು. ಅಡಿಕೆ ಬೆಳೆಗಾರರು ಸಾಲ ಮರುಪಾವತಿಯಲ್ಲಿ ಯಾವಾಗಲೂ ಮುಂದೆ. ಇಂತಹ ಸಂದರ್ಭವನ್ನು ಅವರು ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಾರಾ? ಅಧಿಕವಾಗಿ ಈವರೆಗೆ ಬೆನ್ನೆಲುಬು ಮುರಿದುಕೊಂಡಿರುವ ಇವರು ಭವಿಷ್ಯದತ್ತ ನೋಡಬಹುದು.

ಇತರ ಪರಿಣಾಮಗಳೇನು?
ಅಡಿಕೆ ಬೆಲೆ ಸ್ಥಿರೀಕರಣಕ್ಕಾಗಿ ಅಡಿಕೆ ಮಂಡಳಿ ಪ್ರಸ್ತಾಪಿಸುವ ಪ್ರಯತ್ನಕ್ಕೆ ಮತ್ತು ಅಡಿಕೆಯ ಬದಲಿ ಉಪಯೋಗದ ಬಗೆಗಿನ ಚಿಂತನೆಗೆ ಹಿನ್ನೆಡೆ ಉಂಟಾಗುವ ಸಾಧ್ಯತೆ ಕಾಣುತ್ತಿದೆ. ಅಡಿಕೆ ಬದುಕಿನ ಬೆಳೆ ಅಲ್ಲವೆಂದು ಅದರ ಬದಲಿಗೆ ಬೇರೆ ಹಣಕಾಸು ಬೆಳೆ ಬೆಳೆಯುವ ವಿಚಾರಕ್ಕೆ ತಡೆ ಉಂಟಾಗಬಹುದು. ಅಡಿಕೆ ಬೆಳೆಯುವ ಪ್ರದೇಶದಲ್ಲಿ  ಸ್ಥಳೀಯ ಮಾಧ್ಯಮದಲ್ಲಿ ಪದೇ ಪದೇ ಕಾಣುತ್ತಿರುವ ಅಡಿಕೆ ತೋಟ ಮಾರಾಟಕ್ಕಿದೆ ಎನ್ನುವ ಜಾಹೀರಾತು ಇನ್ನು ಮೇಲೆ ಕಾಣದಿರಬಹುದು. ಅಡಿಕೆ ತೋಟದಿಂದ ಬದುಕು ಅಸಾಧ್ಯವೆಂದು ಬದಲಿ ಉದ್ಯೋಗ ಹಿಡಿದು ಊರು ಬಿಟ್ಟವರಲ್ಲಿ ಕೆಲವರಾದರೂ ಅಡಿಕೆ ತೋಟಕ್ಕೆ ಮರಳಬಹುದು.


= ರಮಾನಂದ ಶರ್ಮಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com