

ಇತ್ತೀಚೆಗಷ್ಟೇ ನ್ಯಾನೋ ಟ್ವಿಸ್ಟ್ ಆವೃತ್ತಿಯನ್ನು ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಿತ್ತು. ಆದರೆ ಇದೀಗ ಈ ಹ್ಯಾಚ್ಬ್ಯಾಕ್ ಕಾರಿನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ದೇಶದ ಟಾಟಾ ಸಂಸ್ಥೆಯು ನಿರ್ಧರಿಸಿದೆ.
ಗುಜರಾತ್ನಲ್ಲಿರುವ ಸಾನಂದ್ ಘಟಕದಲ್ಲಿನ ನ್ಯಾನೋ ಉತ್ಪಾದನೆಯನ್ನು ಸದ್ಯಕ್ಕೆ ನಿಲುಗಡೆಗೊಳಿಸಲಾಗುತ್ತಿದೆ. ಅಂದರೆ 30ರಿಂದ 40 ದಿನಗಳ ಕಾಲ ನ್ಯಾನೋ ಯೋಜನೆಯನ್ನು ಕೈಬಿಡಲಾಗುತ್ತದೆ. ಬೇಡಿಕೆ ಕುಸಿದಿರುವುದೇ ನ್ಯಾನೋ ಯೋಜನೆಗೆ ಕತ್ತರಿ ಪ್ರಯೋಗ ಮಾಡಲು ಕಾರಣ. ಸಂಸ್ಥೆಯ ಪ್ರಕಾರ, ನ್ಯಾನೋ ಸ್ಟಾಕ್ ಈಗಾಗಲೇ ಹೆಚ್ಚಿದೆ. ಅಲ್ಲದೆ ಮುಂಬರುವ ಹಬ್ಬದ ಆವೃತ್ತಿಗಾಗಿ ಹೊಸ ಕಾರಿನ ಉತ್ಪಾದನೆಯತ್ತ ಗಮನ ಕೇಂದ್ರಿಕರಿಸಬೇಕಾಗಿದೆ.
ಅಷ್ಟೇ ಅಲ್ಲದೆ ಸಾನಂದ್ ಘಟಕವನ್ನು ಪರಿಷ್ಕೃತಗೊಳಿಸಲಾಗುತ್ತಿದೆ. ಹೊಸ ಕೈಟ್ ಸಣ್ಣ ಕಾರು, ಕಾಂಪಾಕ್ಟ್ಡಾನ್ ಮತ್ತು ಹ್ಯಾಚ್ಬ್ಯಾಕ್ ಕಾರುಗಳು ಇದೇ ಘಟಕದಲ್ಲಿ ನಿರ್ಮಾಣವಾಗುವ ಸಾಧ್ಯತೆಯಿದೆ. ಟಾಟಾ ಪ್ರಕಾರ, ವಾರ್ಷಿಕ ವಾಡಿಕೆಯಂತೆ ಸಾನಂದ್ ಘಟಕವನ್ನು ಅಪ್ಗ್ರೇಡ್ ಮಾಡಲಾಗುತ್ತಿದೆ ಅಷ್ಟೇ.
ಹಣದುಬ್ಬರ ಇಳಿಕೆ
ಹಣದುಬ್ಬರ ಹೆಚ್ಚಾಗುವುದೂ, ರುಪಾಯಿ ಬೆಲೆ ಇಳಿಕೆಯಾಗುತ್ತಿರುವುದೂ ನಿಮಗೆ ಗೊತ್ತು. ಒಂದು ಹೊಸ ವಿಷಯ: ಕಳೆದ ತಿಂಗಳಲ್ಲಿ ಹಣದುಬ್ಬರದ ದರ ತುಂಬಾ ಕಡಿಮೆಯಾಗಿದೆ. ಅಂದರೆ, ಬೆಲೆ ಏರಿಕೆ ಈ ಹಿಂದಿನ ತಿಂಗಳಷ್ಟು ಆಗಿಲ್ಲ ಎಂಬುದು ಅದರ ಅರ್ಥ. ಏಪ್ರಿಲ್ನಲ್ಲಿ ಇದು 8.58 ಶೇ. ಇತ್ತು. ಕಳೆದ ತಿಂಗಳು 8.28ಕ್ಕಿಳಿದಿತ್ತು. ಮೋದಿ ಸರಕಾರ ಬಂತು, ಒಳ್ಳೆಯ ದಿನಗಳು ಬಂದಿವೆ ಎಂಬುದೇ ಇದರರ್ಥವೇ? ಆಹಾರ ಧಾನ್ಯಗಳು, ತರಕಾರಿಗಳ ಬೆಲೆಯೂ ಕೊಂಚ ಇಳಿದಿರುವುದು ಇದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.
3,500 ಕೋಟಿ ಬೇಕು
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ 3,500 ಕೋಟಿ ಠೇವಣಿ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿಕೊಂಡಿದೆ. ಟಯರ್ 1ರ ಅಡಿಯಲ್ಲಿ ಬೇಸ್ ಮೂರು ನಿಯಮದ ಅಡಿಯಲ್ಲಿ ಈ ನೆರವು ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಕಳೆದ ಹಣಕಾಸು ವರ್ಷದಲ್ಲಿ 1,200 ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರ ನೀಡಿತ್ತು. ಇದರ ಜತೆಗೆ ಷೇರ್ ಹೋಲ್ಡಿಂಗ್ ಮಿತಿಯನ್ನು ಕಡಿಮೆಗೊಳಿಸುವ ಬಗ್ಗೆಯೂ ಹಣಕಾಸು ಇಲಾಖೆ ಬ್ಯಾಂಕಿಗೆ ಅನುಮತಿ ನೀಡಿದೆ.
ಎಲ್ಲಾ ಸ್ಮಾರ್ಟ್!
ಕಳೆದ ವರ್ಷಕ್ಕೆ ಹೋಲಿಸಿದರೆ ಮುಂದಿನ ಮೂರು ವರ್ಷಗಳಲ್ಲಿ ಸ್ಮಾರ್ಟ್ ಫೋನ್ಗಳ ಉದ್ದಿಮೆ ಕ್ಷೇತ್ರ ಹಾಲಿ ಪ್ರಮಾಣದ ಮೂರರಷ್ಟು ಬೆಳವಣಿಗೆ ಸಾಧಿಸಲಿದೆ. ಇದು ನೋಕಿಯಾ ಇಂಡಿಯಾದ ಉತ್ತರ ವಿಭಾಗದ ನಿರ್ದೇಶಕ ರವಿ ಕುನ್ವರ್ ಅಭಿಪ್ರಾಯ. 2013ರಲ್ಲಿ 41 ದಶಲಕ್ಷ ಸ್ಮಾರ್ಟ್ ಫೋನುಗಳು ಮಾರಾಟವಾಗಿವೆ. 2017ರ ವೇಳೆಗೆ ಅದರ ಪ್ರಮಾಣ ಹೆಚ್ಚಾಗಲಿದೆ ಎನ್ನುತ್ತಾರೆ ಅವರು.
ಸೋನಿಯಿಂದ ಹೊಸ ಚಾನೆಲ್
ಮನರಂಜನಾ ಜಗತ್ತಿನ ಬಿಗ್ಬಾಸ್ ಸೋನಿಯ ಭಾರತೀಯ ವಿಭಾಗವಾಗಿರುವ ಮಲ್ಟಿ ಸ್ಕ್ರೀನ್ ಮೀಡಿಯಾ ಹೊಸ ಚಾನೆಲ್ಗಳನ್ನು ಆರಂಭಿಸಲಿದೆ. ಅದಕ್ಕೆ ಪೂರಕವಾಗಿ ಅದು ತೆಲುಗಿನ ಮಾ ಚಾನೆಲ್ ಅನ್ನು ಖರೀದಿಸಲಿದೆ. ಇದರ ಜತೆಗೆ ಇತರ ಪ್ರಾದೇಶಿಕ ಭಾಷೆಗಳಲ್ಲಿಯೂ ವಾಹಿನಿಗಳನ್ನು ಆರಂಭಿಸಲಿದೆ. ಇದರೊಂದಿಗೆ ಹೊಸ ಧಾರಾವಾಹಿಗಳನ್ನೂ ಅದು ಆರಂಭಿಸಲಿದೆ. ಅದಕ್ಕೆ ಪೂರಕವಾಗಿ ಮುಂದಿನ ತಿಂಗಳಿಂದ ಅಮಿತಾಭ್ ಬಚ್ಚನ್ ನಟಿಸಿರುವ ಯುದ್ಧ್ ಎಂಬ ಧಾರಾವಾಹಿಯನ್ನು ಅದು ಪ್ರಸಾರ ಮಾಡಲಿದೆ. ಈ ಗುಂಪು ಈಗಾಗಲೇ ಆರು ವಾಹಿನಿಗಳನ್ನು ಹೊಂದಿದ್ದು, ವಾಣಿಜ್ಯಿಕವಾಗಿಯೂ ಅವು ಲಾಭದಲ್ಲಿವೆ ಎನ್ನುವುದು ಗಮನಾರ್ಹ.
ಬ್ರಾಂಡ್ಗಳ ಇ-ಸ್ಟೋರ್
ಇ-ಕಾಮರ್ಸ್ ಕ್ಷೇತ್ರಕ್ಕೆ ಪ್ರಸಿದ್ಧ ಬ್ರಾಂಡ್ಗಳಾದ ಸ್ಯಾಮ್ಸಂಗ್, ಎಲ್ಜಿ ಇಂಡಿಯಾ, ಪ್ಯಾನಸಾನಿಕ್ ಪ್ರವೇಶಿಸಲು ಮುಂದಾಗಿವೆ. ಅವುಗಳೆಲ್ಲವೂ ಪ್ರತ್ಯೇಕವಾಗಿ ಇ- ಸ್ಟೋರ್ಗಳನ್ನು ಆರಂಭಿಸಲು ಸಿದ್ಧತೆ ನಡೆಸಿವೆ. ಈ ಮೂಲಕ ಆನ್ಲೈನ್ನಲ್ಲಿ ದರ ಸಮರಕ್ಕೆ ಸಿದ್ಧತೆ ನಡೆಸಿವೆ. ಎಲ್ಲ ಬ್ರಾಂಡ್ಗಳೂ ತಮ್ಮ ಎಲ್ಲ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಯೋಚಿಸುತ್ತಿವೆ. ಈ ಪೈಕಿ ಪ್ಯಾನಾಸಾನಿಕ್ ಇ- ಸ್ಟೋರ್ ಸದ್ಯದಲ್ಲೇ ಆರಂಭವಾಗಲಿದೆ.