

ಕಂತು ಕಂತಾಗಿ ವಿಮೆ ಕಟ್ಟುತ್ತಿರುವಾಗ ಮುಂದಿನ ದಿನಗಳಲ್ಲಿ ಸಿಗಬಹುದಾದ ಒಟ್ಟು ಮೊತ್ತದ ಲೆಕ್ಕ ಮಾಡಿ. ಅಷ್ಟು ಮೊತ್ತವನ್ನು ಯಾವುದಕ್ಕೆ ಹೂಡುತ್ತೀರಿ? ಆಕಸ್ಮಿಕ ಸಾವು ಸಂಭವಿಸಿದರೆ ಕಟ್ಟಿದ ಅಷ್ಟು ಮೊತ್ತ ಯಾರಿಗೆ ಸಿಗಬೇಕು ಎಂದು ಬಯಸುತ್ತೀರಿ? ಹೆಂಡತಿ, ಮಗ ಅಥವಾ ಮಗಳು ಹೀಗೆ ಯಾರಿಗೆ ತನ್ನ ಮರಣಾನಂತರ ವಿಮೆ ಸಹಾಯದಿಂದ ಕೂಡಿಟ್ಟ ಹಣ ಸಿಗಬೇಕು ಎಂದು ಮೊದಲೇ ನಿರ್ದೇಶಿಸುತ್ತಿರೋ ಅದನ್ನೇ ನಾಮನಿರ್ದೇಶನ ಎನ್ನಲಾಗುತ್ತದೆ.
ನಾಮ ನಿರ್ದೇಶನದ ಮಹತ್ವ
ಹೆಚ್ಚಿನ ಸಂದರ್ಭಗಳಲ್ಲಿ ನಾಮನಿರ್ದೇಶನವನ್ನು ಗೊತ್ತುಪಡಿಸದೆ ಸಾವನಪ್ಪಿದ ವ್ಯಕ್ತಿಯ ಸಂಬಂಧಿಕರು ಆ ಮೊತ್ತಕ್ಕಾಗಿ ಕೋರ್ಟು ಕಚೇರಿ ಎಂದು ಅಲೆಯುತ್ತಾರೆ. ಅಂಥ ಸಂದರ್ಭಗಳಲ್ಲಿ ನ್ಯಾಯಾಲಯ ಅನುಕ್ರಮದಾರರ ಪ್ರಮಾಣ ಪತ್ರವನ್ನು ಕೇಳುತ್ತದೆ. ಸಾವನ್ನಪ್ಪಿದ ವ್ಯಕ್ತಿಯ ವಾರಸುದಾರ ಎಂಬುದನ್ನು ಪ್ರಮಾಣ ಪತ್ರದ ಮೂಲಕ ಸಾಬೀತುಪಡಿಸಬೇಕು. ಹಾಗೂ ಬಹಳ ತಡವಾಗಿ ಕಾರ್ಯಸಾಧಿತವಾಗುತ್ತದೆ. ಇಂಥ ಪರಿಸ್ಥಿತಿ ಬಾರದಂತೆ ತಡೆಗಟ್ಟಲು ನಾಮ ನಿರ್ದೇಶನ ಸೂಚಿಸಲೇಬೇಕು.
ನಾಮನಿರ್ದೇಶಕರ ಅರ್ಹತೆ
ನಾಮನಿರ್ದೇಶನಕ್ಕೆ ಒಳಗಾದವರಿಗೆ ಆ ಮೊತ್ತವನ್ನು ಸಕಾರಾತ್ಮಕವಾಗಿ ಬಳಸುವ ಅರಿವು ಇರಬೇಕು. ದುಡ್ಡು ಸಿಕ್ಕಿತೆಂದು ಒಟ್ಟಾರೆ ಖರ್ಚು ಮಾಡುವವರಾದರೆ ನೀವು ಅಷ್ಟು ದಿನಗಳಿಂದ ಕೂಡುತ್ತಾ ಬಂದಿದ್ದು ನೀರಲ್ಲಿ ಮಾಡಿದ ಹೋಮದಂತೆ ಆಗುತ್ತದೆ. ವಿಮಾದಾರನ ಜೊತೆ ನಾಮನಿರ್ದೇಶನಕ್ಕೆ ಒಳಗಾಗುವವನ ಸಂಪೂರ್ಣ ವಿಳಾಸ ಇರಬೇಕು. ಪ್ರಸ್ತಾವನೆಯ ಪ್ರತಿಯಲ್ಲಿ ಬರೆಯುವಾಗ ಬೇಕಾಗುತ್ತದೆ. ಕಾನೂನುಬದ್ಧ ಉತ್ತರಾಧಿಕಾರಿ ಪಾಲಿಸಿದಾರರ ನಾಮನಿರ್ದೇಶಕರಾಗಿರಬೇಕು. ರಕ್ತ ಸಂಬಂಧಿ ಅಥವಾ ಗಂಡ ಅಥವಾ ಹೆಂಡತಿ ಇಂಥ ಸಂಬಂಧಗಳ ನಡುವಿನವರು ನಾಮನಿರ್ದೇಶನಕ್ಕೆ ಒಳಗಾಗುವ ಅರ್ಹತೆ ಹೊಂದಿರುತ್ತಾರೆ. ಹೆಸರು ಸೂಚಿಸಿದ ಮೇಲೆ ಆ ವ್ಯಕ್ತಿ ನಿಮಗೇನು ಆಗಬೇಕು ಎಂಬುದನ್ನೂ ಬರೆಯಬೇಕು. ಉದಾಹರಣೆಗೆ ಹೆಂಡತಿ, ಅಕ್ಕ, ಮಗ ಇತ್ಯಾದಿ. ನಾಮನಿರ್ದೇಶಿಸಿದ ವ್ಯಕ್ತಿ ಸಣ್ಣ ಪ್ರಾಯದವರಾಗಿದ್ದರೆ ಅವರಿಗೆ 18 ವರ್ಷ ತುಂಬುವವರೆಗೂ ಜವಾಬ್ದಾರಿಗರ ಹೆಸರನ್ನೂ ಸೂಚಿಸಬೇಕು. ನಾಮನಿರ್ದೇಶಕರ ಹುಟ್ಟಿದ ದಿನಾಂಕವನ್ನು ಸರಿಯಾಗಿ ನಮೂದಿಸಿರಬೇಕು.
ವಿಲ್ ಮತ್ತು ನಾಮನಿರ್ದೇಶನ
ಹೆಚ್ಚಿನ ಸಂದರ್ಭಗಳಲ್ಲಿ ವಿಲ್ ಮತ್ತು ನಾಮನಿರ್ದೇಶನದ ನಡುವೆ ವ್ಯತ್ಯಾಸಗಳು ಕಂಡುಬರುತ್ತವೆ. ನಾಮನಿರ್ದೇಶನ ಎಂಬುದು ಪಿತ್ರಾರ್ಜಿತವಾಗಿ ಬರುವಂಥದ್ದಲ್ಲ. ಅಲ್ಲಿ ಯಾರ ಹೆಸರನ್ನು ನಮೂದಿಸಿರುತ್ತಾರೋ ಅವರಿಗೆ ಎಲ್ಲ ವಿಮೆ ಹಕ್ಕುಗಳು ಸಲ್ಲುತ್ತವೆ. ವಿಮಾ ಸಂಸ್ಥೆಗೆ ನೀವು ಹೀಗೂ ನಾಮನಿರ್ದೇಶನವನ್ನು ಸಲ್ಲಿಸಬಹುದು. ನನ್ನ ಸಾವಿನ ನಂತರ ವಿಮೆ ಪಾಲಿಸಿಯ ಸಂಪೂರ್ಣ ಹಕ್ಕನ್ನು ಇಂಥವರಿಗೆ ನೀಡಬೇಕು ಎಂದು ಬರೆದಿಡಬಹುದು. ವಿಲ್ ಬರೆಯುವಾಗ ನನ್ನ ಸಾವಿನ ನಂತರ ಎಲ್ಲ ಆಸ್ತಿಪಾಸ್ತಿಗಳ ಸಂಪೂರ್ಣ ಹಕ್ಕುದಾರರು ಇಂಥವರಾಗಿರುತ್ತಾರೆ ಎಂದು. ಇಲ್ಲಿ ವಿಲ್‌ನಲ್ಲಿ ಸೂಚಿಸಿದ ವ್ಯಕ್ತಿ ಮತ್ತು ನಾಮನಿರ್ದೇಶನದಲ್ಲಿ ಸೂಚಿಸಿದ ವ್ಯಕ್ತಿ ಒಬ್ಬರೇ ಆಗಿರಬಹುದು ಅಥವಾ ಪ್ರತ್ಯೇಕ ವ್ಯಕ್ತಿ ಆಗಿರಬಹುದು.
ಇವುಗಳನ್ನು ಪಾಲಿಸಿ...
- ವಿಮೆ ಮಾಡಿಸಿರುವ ಕುರಿತಾಗಿ ನಾಮನಿರ್ದೇಶಿಸಿರುವ ವ್ಯಕ್ತಿಗೆ ಅಥವಾ ನಿಮ್ಮ ಕುಟುಂಬದ ಯಾರಾದರೊಬ್ಬರು ಸದಸ್ಯರಿಗೆ ಮೊದಲೇ ಹೇಳಿಬಿಡಿ. ನೀವು ಇಲ್ಲದಿರುವಾಗ ಸಮಸ್ಯೆಯಾಗ ಕೂಡದು.
- ಪಾಲಿಸಿದಾರ ಆಕಸ್ಮಿಕವಾಗಿ ಸತ್ತರೆ ಹೊಸ ಪಾಲಿಸಿದಾರ ಯಾರು ಎಂಬುದು ಸಂಸ್ಥೆಯ ಅರಿವಿಗೆ ಬರಬೇಕಾಗುತ್ತದೆ. ಹೊಸ ಪಾಲಿಸಿದಾರನಾಗುವವನಿಗೂ ಈ ವಿಚಾರ ತಿಳಿದಿರಬೇಕು.
- ನಾಮನಿರ್ದೇಶಕರಾಗಿ ಒಂದಕ್ಕಿಂತ ಹೆಚ್ಚು ಹೆಸರನ್ನು ಸೇರಿಸುವುದರಿಂದ ಸಮಸ್ಯೆಗಳು ಉದ್ಭವವಾಗುತ್ತವೆ. ಏಕವ್ಯಕ್ತಿ ಸೂಚಕ ಉತ್ತಮ ಮಾರ್ಗ. <
(ಲೇಖಕರು ಬಜಾಜ್ ಅಲಿಯಾನ್ಸ್ ಲೈಫ್ ಇನ್ಸೂರೆನ್ಸ್ ವಿಭಾಗದ ತಾಂತ್ರಿಕ ಮುಖ್ಯಸ್ಥ)
-ಪಿ. ರವಿ ಕುಟುಂಬರಾವ್