

ಬೆಂಗಳೂರು: ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ ಡಿಐ)ಗೆ ಕರ್ನಾಟಕ ರಾಜ್ಯ ಸೂಕ್ತ ಸ್ಥಳ ಎಂದು ಅಮೆರಿಕ ವಾಣಿಜ್ಯ ಇಲಾಖೆಯ ನಿವೃತ್ತ ಸಹಾಯಕ ಕಾರ್ಯದರ್ಶಿ ಡಾ. ರೇಮಂಡ್ ವಿಕ್ಕೆರಿ ಅಭಿಪ್ರಾಯಪಟ್ಟರು. ನಗರದಲ್ಲಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಮಹಾಒಕ್ಕೂಟದ (ಎಫ್ ಕೆಸಿಸಿಐ)ನಲ್ಲಿ ಮಂಗಳವಾರ ಏರ್ಪಡಿಸಿದ್ದ `ಭಾರತ ಎಫ್ ಡಿಐಗೆ ಪ್ರಶಸ್ತ ಸ್ಥಳ' ಸಂವಾದದಲ್ಲಿ ಹೇಳಿದರು. ಇಪ್ಪತ್ತು ವರ್ಷಗಳ ಹಿಂದೆ ಅಮೆರಿಕ ಮತ್ತು ಭಾರತದ ನಡುವೆ ಹೆಚ್ಚಿನ ನಬಾಂಧವ್ಯ ಏರ್ಪಟ್ಟಿರಲಿಲ್ಲ. ಡಾ. ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಅಣು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಈ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಸಂಬಂಧ ಹೆಚ್ಚಿತು ಎಂದರು. ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಒಬಾಮ ಈ ಸಂಬಂಧವನ್ನು ಮತ್ತಷ್ಟು ಬಲಗೊಳಿಸಿದ್ದಾರೆ. ಅಮೆರಿಕ ಭಾರತದತ್ತ ಕಣ್ಣು ಹಾಯಿಸಿದೆ. ಅದರ ಫಲವಾಗಿ ತಾವು ಭಾರತ ಪ್ರವಾಸ ಕೈಗೊಂಡಾಗ ಕರ್ನಾಟಕ ಪ್ರಶಸ್ತ ಸ್ಥಳ ಎಂಬ ಸಲಹೆ ಬಂದಿತು. ರಕ್ಷಣಾ ಸಾಧನಗಳನ್ನುತಯಾರಿಸಲು ಬೇಕಾದ ತಂತ್ರಜ್ಞಾನ ವನ್ನು ಸಣ್ಣ, ಮಧ್ಯಮ ಕೈಗಾರಿಕಾ ವಲಯಕ್ಕೆ ನೀಡಿ ಉತ್ತೇಜಿಸಬೇಕು. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗುತ್ತದೆ. ಭಾರತದಲ್ಲಿ ಮೂಲ ಸೌಕರ್ಯ ಕಲ್ಪಿಸಲು ವಿಶ್ವಬ್ಯಾಂಕ್ ಇದುವರೆಗೆ 1.7 ಟ್ರಿಲಿಯನ್ ಡಾಲರ್ ನೀಡಿದೆ ಎಂದರು.
ಆರ್ಥಿಕ ನಿಶ್ಚಯಕ್ಕೆ ಮುಂದಾಗಬೇಕು: ಅಭಿವೃದ್ಧಿ ಹೊಂದುತ್ತಿರುವ ಭಾರತ ತುರ್ತಾಗಿ ಆರ್ಥಿಕ ಒಪ್ಪಂದಗಳಿಗೆ ಮುಂದಾಗಬೇಕು. ಇದರಿಂದ ಆದಾಯವೃದ್ಧಿಯಾಗುವುದರ ಜತೆಗೆ ವಿಶ್ವಕ್ಕೆ ತೆರೆದುಕೊಳ್ಳಲಿದೆ. ಭಾರತ 1990ರಲ್ಲಿ ಖಾಸಗೀಕರಣಕ್ಕೆ ಮುಂದಾದಾಗ ವ್ಯಾಪಾರ, ಹೂಡಿಕೆ ವಿಸ್ತರಿಸಿತು. ಅದರ ಪರಿಣಾಮ ಭಾರತ ವಿಶ್ವದ ಬೃಹತ್ ಮಾರುಕಟ್ಟೆಯಾಗಿ ರೂಪುಗೊಂಡಿದೆ ಎಂದು ರೇಮಂಡ್ ತಿಳಿಸಿದರು.
ಭಾರತಕ್ಕಿರುವ ಸವಾಲುಗಳು: ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಭಾರತ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇದನ್ನು ಎದುರಿಸಲು ಪ್ರಧಾನಿ ಮೋದಿ ಸಿದ್ಧಛಿತೆ ನಡೆಸಿದ್ದಾರೆ. ಭಾರತ ತೆರಿಗೆ, ಕಾರ್ಮಿಕ ನೀತಿಗಳು ಮೂಲ ಸೌಕರ್ಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಮೇಕ್ ಇನ್ ಇಂಡಿಯಾ ಇವೆಲ್ಲವನ್ನು ಪರಿಹರಿಸಲಿದೆಯೇ ನೋಡಬೇಕು ಎಂದರು.
ಎಫ್ ಕೆಸಿಸಿಐ ಅಧ್ಯಕ್ಷ ತಲ್ಲಂ ದ್ವಾಕರನಾಥ್ ಮಾತನಾಡಿ, ಭಾರತದಲ್ಲಿನ ವೈಜ್ಞಾನಿಕ ಮತ್ತು ತಂತ್ರಜ್ಞಾನ, ಅಪಾರ ಮಾನವ ಸಂಪನ್ಮೂಲಕ್ಕೆ ಪೂರಕವಾಗಿ ವಿದೇಶೀ ಹೂಡಿಕೆಯಾಗಬೇಕೆಂದು ಅಭಿಪ್ರಾಯಪಟ್ಟರು. ಎಫ್ ಕೆಸಿಸಿಐ
ಉಪಾಧ್ಯಕ್ಷ ಕೆ.ರವಿ, ಹಿರಿಯ ಉಪಾಧ್ಯಕ್ಷಎಂ.ಸಿ.ದಿನೇಶ್ ಮತ್ತಿತರರು
ಉಪಸ್ಥಿತರಿದ್ದರು.