

ಮುಂಬೈ: ಈ ವರ್ಷದ ಆದಿ ಭಾಗದಲ್ಲಿ ಜನರ ಆದಾಯ ಕುಂಠಿತ, ಪ್ರತಿಕೂಲ ಹವಾಮಾನಗಳಿಂದ ನಮ್ಮ ದೇಶದಲ್ಲಿ ಚಿನ್ನಕ್ಕೆ ಬೇಡಿಕೆ ಶೇಕಡಾ 25ರಷ್ಟು ಕಡಿಮೆಯಾಗಿತ್ತು. ಆದರೆ ಇತ್ತೀಚೆಗೆ ಚಿನ್ನದ ದರ ಇಳಿಕೆಯಾಗಿರುವುದರಿಂದ ಮತ್ತು ಮದುವೆ, ಹಬ್ಬಗಳ ಸೀಸನ್ ಆರಂಭವಾಗುವುದರಿಂದ ಅಂತ್ಯಭಾಗದಲ್ಲಿ ಚಿನ್ನಕ್ಕೆ ಬೇಡಿಕೆ ಮತ್ತೆ ಹೆಚ್ಚಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿದೆ.
ವಿಶ್ವದಲ್ಲಿ ಚೀನಾದ ನಂತರ ಅತಿ ಹೆಚ್ಚು ಚಿನ್ನಕ್ಕೆ ಬೇಡಿಕೆ ಇರುವ ಎರಡನೇ ದೇಶ ಭಾರತವಾಗಿದ್ದು, ಕಳೆದ ವರ್ಷದ 204.9 ಟನ್ ಗಿಂತ ಈ ವರ್ಷ 154.5 ಟನ್ ಗೆ ಇಳಕೆಯಾಗಿದೆ. ಚಿನ್ನದ ಆಮದು ಕೂಡ ಕಳೆದ ವರ್ಷಕ್ಕಿಂತ ಒಂದು ಟನ್ ಕಡಿಮೆಯಾಗಿದೆ.
ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು 800ರಿಂದ ಸಾವಿರ ಟನ್ ಚಿನ್ನ ಆಮದಾಗುತ್ತದೆ.
ಈ ವರ್ಷ ನವೆಂಬರ್-ಡಿಸೆಂಬರ್ ವೇಳೆಗೆ ಚಿನ್ನಕ್ಕೆ ಬೇಡಿಕೆ ಕುದುರಬಹುದು ಎಂಬ ನಿರೀಕ್ಷೆ ನಮಗಿದೆ ಎಂದು ವಿಶ್ವ ಚಿನ್ನ ಮಂಡಳಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಪಿ.ಆರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಚಿನ್ನದ ದರ ಇಳಿಕೆಯಾಗಿರುವುದರಿಂದ ಕಳೆದ ಕೆಲವು ವಾರಗಳಲ್ಲಿ ಮತ್ತೆ ಬೇಡಿಕೆ ಬಂದಿದೆ ಎನ್ನುತ್ತಾರೆ ಅವರು.