
ಬೀಜಿಂಗ್: ಚೀನಾಗೆ ತಟ್ಟಿರುವ ಆರ್ಥಿಕ ಹಿಂಜರಿತದ ಬಿಸಿ ಭಾರತಕ್ಕೂ ಸಹ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಹೇಳಿದ್ದಾರೆ.
ಚೀನಾ ಆರ್ಥಿಕತೆಯಲ್ಲಿನ ಹಿಂಜರಿತ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೆಗೆ ಇದು ವಿರುದ್ಧವಾಗಿದೆ. ಚೀನಾದಲ್ಲಿನ ಆರ್ಥಿಕ ಹಿಂಜರಿತ ಕೇವಲ ಭಾರತದ ಮೇಲೆ ಮಾತ್ರವಲ್ಲ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ಭಾರತದಿಂದ ರಫ್ತಾಗುವ ಕೆಲವು ಉತ್ಪನ್ನಗಳಿಗೆ
ಚೀನಾದಲ್ಲಿ ಸಾಕಷ್ಟು ಬೇಡಿಕೆ ಇಲ್ಲ. ಹಲವಾರು ದೇಶಗಳು ಚೀನಾದಿಂದ ಆಮದು ಮಾಡಿಕೊಳ್ಳುವಷ್ಟು ಆ ದೇಶಕ್ಕೆ ರಫ್ತು ಮಾಡುವುದಿಲ್ಲ.
ಇಂತಹ ದೇಶಗಳೆಲ್ಲ ನಮ್ಮಿಂದ ಖರೀದಿಸುವುದು ಕಡಿಮೆ. ಇದರಿಂದ ಭಾರತದ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಹಾಂಕಾಂಗ್ ಮೂಲದ ಮಾರ್ನಿಂಗ್ ಪೋಸ್ಟ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ರಾಜನ್ ಹೇಳಿದ್ದಾರೆ. ಭಾರತ ಗ್ರಾಹಕ ಉತ್ಪನ್ನ ಆಮದು ದೇಶವಾಗಿದ್ದು ದರಗಳು ಕಡಿಮೆಯಾಗಿರುವುದರಿಂದ ಸ್ವಲ್ಪ ಸಹಕಾರಿಯಷ್ಟೆ. ಅದನ್ನು ಬಿಟ್ಟರೆ ಚೀನಾ ಹಿಂಜರಿತ ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದಿದ್ದಾರೆ.
Advertisement