

ನವದೆಹಲಿ: ಇನ್ನು ಮುಂದೆ ಭವಿಷ್ಯ ನಿಧಿ ಹಣಕ್ಕೆ ಬ್ಯಾಂಕು, ಪೋಸ್ಟ್ ಆಫೀಸಿಗೆ ಹೋಗಿ ಸರದಿಯಲ್ಲಿ ನಿಂತು ಕಾಯಬೇಕಾಗಿಲ್ಲ. ಉದ್ಯೋಗ ಭವಿಷ್ಯ ನಿಧಿ ಸಂಸ್ಥೆ, ಆನ್ ಲೈನ್ ಮೂಲಕ ಗ್ರಾಹಕರು ಪಿಂಚಣಿ ಹಣವನ್ನು ಪಡೆಯುವ ವ್ಯವಸ್ಥೆಯನ್ನು ಮಾರ್ಚ್ ಕೊನೆಗೆ ಜಾರಿಗೆ ತರಲಿದೆ.
ಸರ್ಕಾರದ ಸಾಮಾಜಿಕ ಯೋಜನೆಗಳಿಗೆ ಆಧಾರ್ ಕಾರ್ಡನ್ನು ಬಳಸಬಹುದೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ ನಂತರ ಭವಿಷ್ಯನಿಧಿ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ. ಇದು ಕಾರ್ಯಾರಂಭ ಮಾಡಲು ಆರಂಭಿಸಿದರೆ ಪಿಎಫ್ ಗ್ರಾಹಕರು ತಮ್ಮ ಹಣ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಮೂರು ಗಂಟೆಗಳೊಳಗೆ ಅವರ ಖಾತೆಗೆ ನೇರವಾಗಿ ಹಣ ತಲುಪುತ್ತದೆ.
ಆನ್ ಲೈನ್ ವ್ಯವಹಾರಕ್ಕೆ ನಾವು ಕಾರ್ಮಿಕ ಇಲಾಖೆಗೆ ಪತ್ರ ಬರೆದಿದ್ದೇವೆ. ಇದು ಮುಂದಿನ ವರ್ಷ ಮಾರ್ಚ್ ಅಂತ್ಯಕ್ಕೆ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಕೇಂದ್ರ ಭವಿಷ್ಯನಿಧಿ ಆಯುಕ್ತ ಕೆ.ಕೆ.ಜಲನ್ ತಿಳಿಸಿದ್ದಾರೆ.
ಆಧಾರ್ ಕಾರ್ಡುನ್ನು ಸ್ವತಂತ್ರವಾಗಿ ಕೇಂದ್ರ ಸರ್ಕಾರದ ಸಾಮಾಜಿಕ ಯೋಜನೆಗಳಾದ ನರೇಗಾ, ಭವಿಷ್ಯ ನಿಧಿ ಮತ್ತು ಜನಧನ ಯೋಜನೆಗಳಿಗೆ ಬಳಸಬಹುದೆಂದು ಆದೇಶ ನೀಡಿತ್ತು.ಈ ಹಿನ್ನೆಲೆಯಲ್ಲಿ ಭವಿಷ್ಯನಿಧಿ ಸಂಸ್ಥೆ ಗ್ರಾಹಕರಿಗೆ ತ್ವರಿತವಾಗಿ ಸೇವೆ ನೀಡಲು ಆನ್ ಲೈನ್ ವ್ಯವಸ್ಥೆ ಜಾರಿಗೆ ತರಲಿದೆ. ದೇಶಾದ್ಯಂತ 5 ಕೋಟಿಗೂ ಅಧಿಕ ಭವಿಷ್ಯ ನಿಧಿ ಗ್ರಾಹಕರಿದ್ದಾರೆ.