

ನವದೆಹಲಿ: ಖಾಸಗಿ ಮೊಬೈಲ್ ಕಂಪನಿಗಳಿಗೆ ಸ್ಪರ್ಧೆಯೊಡ್ಡಲು ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ರೂ. 1,099 ಕ್ಕೆ ಅನ್ ಲಿಮಿಟೆಡ್ 3 ಜಿ ಮೊಬೈಲ್ ಡೇಟಾ ಪ್ಲಾನ್ ನ್ನು ಘೋಷಿಸಿದ್ದು, ಈಗಿರುವ ಡೇಟಾ ಪ್ಲಾನ್ ನಲ್ಲಿ ಬಳಕೆ ಮಿತಿಯನ್ನು ಅಧಿಕಗೊಳಿಸಿದೆ.
ನೆಟ್ವರ್ಕ್ ಸುಧಾರಣೆಯಾಗುತ್ತಿರುವುದರಿಂದ ಬಿಎಸ್ ಎನ್ ಎಲ್ ಮೊಬೈಲ್ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದು, 1,099 ರೂ ಗಳಿಗೆ 3 ಜಿ ಅನ್ ಲಿಮಿಟೆಡ್ ಡೇಟಾ ನೀಡುತ್ತಿರುವ ಮೊದಲ ಸಂಸ್ಥೆ ಬಿಎಸ್ ಎನ್ ಎಲ್ ಎಂದು ಬಿಎಸ್ ಎನ್ ಎಲ್ ನ ಎಂ ಡಿ ಅನೂಪ್ ಶ್ರೀವಾಸ್ತವ ತಿಳಿಸಿದ್ದಾರೆ. ಟ್ರಾಯ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಬಿಎಸ್ ಎನ್ ಎಲ್ ಏಪ್ರಿಲ್ ತಿಂಗಳಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಪಡೆದಿದೆ.
ಏಪ್ರಿಲ್ ತಿಂಗಳಲ್ಲಿ ಬಿಎಸ್ ಎನ್ ಎಲ್ ನ ಗ್ರಾಹಕರ ಸಂಖ್ಯೆ 11.39 ಲಕ್ಷಕ್ಕೆ ಏರಿಕೆಯಾಗಿದ್ದು, ಏರ್ ಟೆಲ್ ನ ಗ್ರಾಹಕರ ಸಂಖ್ಯೆ(9.78 ಲಕ್ಷ) ಯನ್ನು ಹಿಂದಿಕ್ಕಿದೆ. ಉಳಿದಂತೆ ಏರ್ ಸೆಲ್(5.72 ಲಕ್ಷ), ರಿಲಯನ್ಸ್ ( 1.1 ಲಕ್ಷ) ವೊಡಾಫೋನ್ 46,600 ಗ್ರಾಹಕ್ರನ್ನು ಹೊಂದಿವೆ.
ಡಾಟಾ ದರಗಳನ್ನು ಇಳಿಕೆ ಮಾಡುವ ಮೂಲಕ ಸ್ಪರ್ಧೆಯೊಡ್ಡುತ್ತಿರುವ ಖಾಸಗಿ ಆಪರೇಟರ್ ಗಳಿಗೆ ಪ್ರತಿಸ್ಪರ್ಧೆಯೊಡ್ಡಲು ಬಿಎಸ್ ಎನ್ ಎಲ್ ರೂ.549 ರ 3 ಜಿ ಡೇಟಾ ಡಾಟಾ ಪ್ಲಾನ್ ನಲ್ಲಿ ಡೇಟಾ ಬಳಕೆಯ ಮಿತಿಯನ್ನು ದುಪ್ಪಟ್ಟುಗೊಳಿಸಿದ್ದು, 1,099 ಕ್ಕೆ ಅನ್ ಲಿಮಿಟೆಡ್ 3 ಜಿ ಮೊಬೈಲ್ ಡೇಟಾ ಪ್ಲಾನ್ ನ್ನು ಘೋಷಿಸಿದೆ. ಬಿಎಸ್ ಎನ್ ಎಲ್ ಕಳೆದ ವರ್ಷ ಕರೆ ದರಗಳನ್ನು ಶೇ.80 ರಷ್ಟು ಕಡಿತಗೊಳಿಸುವ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸಿತ್ತು.