

ನವದೆಹಲಿ: ಡಾಟಾ ಸೇವೆಗಳಿಗೆ ವಿವಿಧ ದರ ನಿಗದಿಪಡಿಸುವುದನ್ನು ನಿಷೇಧಿಸಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ ನಿನ್ನೆ ಆದೇಶ ಹೊರಡಿಸಿರುವುದು ನೆಟ್ ನ್ಯೂಟ್ರಾಲಿಟಿಯನ್ನು ಬೆಂಬಲಿಸುವವರಿಗೆ ಭಾರೀ ಯಶಸ್ಸನ್ನು ನೀಡಿದೆ. ಹಾಗಾದರೆ ದೂರಸಂಪರ್ಕ ಪ್ರಾಧಿಕಾರ ನೆಟ್ ನ್ಯೂಟ್ರಾಲಿಟಿ ವಿಷಯವನ್ನು ಹೇಗೆ ನಿಭಾಯಿಸುತ್ತದೆ. ವೆಬ್ ಸೈಟ್ ಗಳು, ಅಪ್ಲಿಕೇಶನ್ ಮತ್ತು ಸೇವೆಗಳನ್ನು ನೀಡುವ ಕಂಪೆನಿಗಳು ನೆಟ್ ನ್ಯೂಟ್ರಾಲಿಟಿಯನ್ನು ಹೇಗೆ ಉಲ್ಲಂಘಿಸುತ್ತವೆ, ವಿವಿಧ ದರ ನಿಗದಿ ಪ್ರಾಧಿಕಾರದ ಕೆಲಸವೇನು ಬನ್ನಿ ನೋಡೋಣ:
ಡಾಟಾ ಸೇವೆ ಒದಗಿಸುವವರು ಗ್ರಾಹಕರಿಗೆ ವಿವಿಧ ಡಾಟಾ ದರಗಳನ್ನು ನಿಗದಿಪಡಿಸುವುದನ್ನು ವಿವಿಧ ದರ ನಿಗದಿ ಎನ್ನುತ್ತೇವೆ. ಉದಾಹರಣೆಗೆ ಏರ್ ಟೆಲ್, ವೊಡಾಫೋನ್, ರಿಲಯನ್ಸ್ ಜಿಯೋ ಮೊದಲಾದವು. ಗ್ರಾಹಕರಿಗೆ ಯಾವ ರೀತಿ ಕಂಪೆನಿಗಳು ವಿಷಯಗಳನ್ನು ನೀಡುತ್ತವೆ ಎಂಬುದರ ಆಧಾರದ ಮೇಲೆ ದರ ನಿಗದಿಯಾಗುತ್ತದೆ. ಉದಾಹರಣೆಗೆ ಒಂದು ವೆಬ್ ಸೈಟ್ ಗೆ ಒಂದು ದರ, ಇನ್ನೊಂದಕ್ಕೆ ಮತ್ತೊಂದು ದರ ನಿಗದಿಪಡಿಸುತ್ತಾರೆ. ಪರೋಕ್ಷವಾಗಿ ಕೂಡ ದರ ನಿಗದಿಪಡಿಸುವಂತಿಲ್ಲ. ಆದರೆ ನಿನ್ನೆ ಟ್ರಾಯ್ ನೀಡಿದ ಆದೇಶದ ಪ್ರಕಾರ ಇನ್ನು ಮುಂದೆ ವೆಬ್ ಸೈಟ್ ಬಳಕೆಯಲ್ಲಿ ದರ ವ್ಯತ್ಯಾಸವಿರುವುದಿಲ್ಲ.
ಹತ್ತಿರದ ಸಂಪರ್ಕದಲ್ಲಿ ವಿವಿಧ ದರ ನಿಗದಿ: ಇಂಟ್ರಾನೆಟ್, ಖಾಸಗಿ ಸಂಪರ್ಕ ಜಾಲಗಳಲ್ಲಿ ವಿವಿಧ ದರ ನಿಗದಿಪಡಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ದರ ನಿಗದಿಯಾಗುವುದಿಲ್ಲ. ಹತ್ತಿರದ ಗುಂಪುಗಳಲ್ಲಿ ಇಂಟರ್ನೆಟ್ ಗಳನ್ನು ಬಳಸಲು ಕಡಿಮೆ ದರ ನಿಗದಿಯಾಗುತ್ತದೆ. ನೈಸರ್ಗಿಕ ಮತ್ತು ಮಾನವ ನಿರ್ಮಿತ ತುರ್ತುಪರಿಸ್ಥಿತಿಗಳಲ್ಲಿ ಕಡಿಮೆ ದರ ನಿಗದಿ ಮಾಡಲಾಗುತ್ತದೆ.
ಫೇಸ್ ಬುಕ್ ನ ಉಚಿತ ಬಳಕೆ: ಟ್ರಾಯ್ ಕಳೆದ ಎರಡು ವಾರಗಳ ಹಿಂದೆಯೇ ಫೇಸ್ ಬುಕ್ ಪ್ರೀ ಬೇಸಿಕ್ಸ್ ಪ್ಲಾನ್ ನ್ನು ತೆಗೆದುಹಾಕಿತ್ತು. ಇದೀಗ ವಿವಿಧ ದರ ನಿಗದಿ ಪ್ರಾಧಿಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಫ್ರೀ ಬೇಸಿಕ್ಸ್ ಅಂದರೆ ಫೇಸ್ ಬುಕ್ ಕಂಪೆನಿ ಕೆಲವು ನಿರ್ದಿಷ್ಟ ಡಾಟಾ ಸೇವೆ ಪೂರೈಕೆದಾರರೊಂದಿಗೆ ಸೇರಿ ಆಯ್ಕೆಯ ವೆಬ್ ಸೈಟ್ ಮತ್ತು ಅಪ್ಲಿಕೇಶನ್ ಗಳನ್ನು ಆಯಾ ಡಾಟಾ ಸೇವೆ ಪೂರೈಕೆದಾರರ ಗ್ರಾಹಕರಿಗೆ ಉಚಿತವಾಗಿ ನೀಡುವುದಾಗಿದೆ. ಇದರಿಂದ ಬೇರೆ ವೆಬ್ ಸೈಟ್ ಮತ್ತು ಆಪ್ ಪೂರೈಕೆಯ ಡಾಟಾ ಕಂಪೆನಿಗಳ ಮೇಲೆ ಹೊಡೆತ ಬೀಳುತ್ತದೆ.