

ಲಂಡನ್: ಗೂಗಲ್ ಕಂಪೆನಿಯು ಲಂಡನ್ ಸರ್ಕಾರಕ್ಕೆ 130 ದಶಲಕ್ಷ ಪೌಂಡ್ ತೆರಿಗೆ ಪಾವತಿಸಲು ಒಪ್ಪಿಕೊಂಡಿದೆ. ಆದರೆ ಈ ಮೊತ್ತ ಕಡಿಮೆಯಾಗಿದೆ ಎಂದು ಶಿಕ್ಷಣ ತಜ್ಞರು, ಪ್ರಚಾರಕರು ಟೀಕಿಸಿದ್ದಾರೆ.
ಯುರೋಪ್ ರಾಷ್ಟ್ರಗಳಿಂದ ಗೂಗಲ್ ಗೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ಆದಾಯವಿದ್ದು, ಆದರೆ ಸರಿಯಾಗಿ ತೆರಿಗೆ ಪಾವತಿಸುತ್ತಿಲ್ಲ. ಐರ್ಲೆಂಡ್, ಬರ್ಮುಡಾ, ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ ಗೂಗಲ್ ಹೆಚ್ಚಿನ ಬಳಕೆದಾರರನ್ನು ಹೊಂದಿದೆ.
2005ರಿಂದ ಗೂಗಲ್ ಕಂಪೆನಿ ಸರಿಯಾಗಿ ತೆರಿಗೆ ಪಾವತಿಸುತ್ತಿಲ್ಲ ಎಂದು 2013ರಲ್ಲಿ ಇಂಗ್ಲೆಂಡು ಸಂಸತ್ತು ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ತೆರಿಗೆ ಇಲಾಖೆ ಅಧಿಕಾರಿಗಳು ಗೂಗಲ್ 130 ದಶಲಕ್ಷ ಪೌಂಡ್ ತೆರಿಗೆ ಕಟ್ಟಲು ಒಪ್ಪಿಕೊಂಡಿದ್ದಾರೆ.
ಇಂಗ್ಲೆಂಡ್ ಸರ್ಕಾರದ ಹಣಕಾಸು ಇಲಾಖೆಯ ವಕ್ತಾರೆ ಒಪ್ಪಂದವನ್ನು ಸ್ವಾಗತಿಸಿದ್ದು, ಗೂಗಲ್ ಕಂಪೆನಿಯು ಇಂಗ್ಲೆಂಡ್ ನಲ್ಲಿ ಮಾಡಿದ ವ್ಯಾಪಾರದ ಲಾಭದಲ್ಲಿ ತೆರಿಗೆ ಕಟ್ಟಲು ಮುಂದಾಗಿರುವುದು ಸ್ವಾಗತಾರ್ಹ. ಇದು ಹೊಸ ತೆರಿಗೆ ಕಾನೂನಿಗೆ ನಾಂದಿ ಹಾಡಲಿದೆ ಎಂದು ಹೇಳಿದ್ದಾರೆ.
ಆದರೆ ಗೂಗಲ್ ಒಪ್ಪಂದದ ಈ ಮೊತ್ತ ಕಂಪೆನಿ ಗಳಿಸುತ್ತಿರುವ ಲಾಭಕ್ಕೆ ಹೋಲಿಸಿದರೆ ತೀರಾ ಕಡಿಮೆ ಪ್ರಮಾಣದ್ದಾಗಿದೆ ಎಂದು ಅಲ್ಲಿನ ಶಿಕ್ಷಣ ತಜ್ಞರು ಟೀಕಿಸಿದ್ದಾರೆ.