

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮೇಲೂ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರಿ ಪರಿಣಾಮ ಬೀರುತ್ತಿದ್ದು, ಅತ್ತ ಹಿಲರಿ ಕ್ಲಿಂಟನ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ಪೈಪೋಟಿ ತೀವ್ರ ವಾಗುತ್ತಿದ್ದಂತೆಯೇ ಇತ್ತ ಸೆನ್ಸೆಕ್ಸ್ 350 ಅಂಕಗಳ ಕುಸಿತಕಂಡಿದೆ.
ಪ್ರಮುಖವಾಗಿ ಭಾರತೀಯ ಷೇರುದಾರರು ಹಿಲರಿ ಚುನಾವಣೆಯಲ್ಲಿ ಮುನ್ನಡೆ ಸಾಧಿಸಬಹುದು ಎಂಬ ಅನಿಸಿಕೆ ಹೊಂದಿದ್ದು, ಇದೀಗ ಟ್ರಂಪ್ ಹಿಲರಿಗೆ ತೀವ್ರ ಪೈಪೋಟಿ ನೀಡುತ್ತಿರುವುದು ಷೇರುಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ. ಕೆಲ ಕ್ಷೇತ್ರಗಳಲ್ಲಿ ಟ್ರಂಪ್ ಗಿಂತ ಹಿಲರಿ ಹಿನ್ನಡೆಯನುಭವಿಸಿದ್ದು, ಇದು ಷೇರುಪೇಟೆಯ ಪತನಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಪ್ರಸ್ತುತ ಸೆನ್ಸೆಕ್ಸ್ 350 ಅಂಕಗಳ ಇಳಿಕೆಯೊಂದಿಗೆ 27, 533 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಅಂತೆಯೇ ನಿಫ್ಟಿ ಕೂಡ 81 ಅಂಕಗಳ ಪತನದೊಂದಿಗೆ 8, 545 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.
ರುಪಾಯಿ ಮೌಲ್ಯ ಕೂಡ ಕುಸಿತ
ಕೇವಲ ಷೇರುಮಾರುಕಟ್ಟೆಯಷ್ಟೇ ಅಲ್ಲದೇ ರುಪಾಯಿ ಮೌಲ್ಯದ ಮೇಲೂ ಅಮೆರಿಕ ಅಧ್ಯಕ್ಷೀ ಚುನಾವಣೆ ಪರಿಣಾಮ ಬೀರಿದ್ದು, ರುಪಾಯಿ ಮೌಲ್ಯ ಕೂಡ ಕುಸಿತ ಕಂಡಿದೆ. ಇಂದು ಮಧ್ಯಾಹ್ಮದ ವಹಿವಾಟಿನ ವೇಳೆಗೆ ರುಪಾಯಿ ಮೌಲ್ಯದಲ್ಲಿ ಶೇ. 15 ಪೈಸೆಯಷ್ಟು ಕುಸಿತ ಕಂಡುಬಂದಿದ್ದು, ಪ್ರಸ್ತುತ ಪ್ರತೀ ಡಾಲರ್ ಎದುರು ರುಪಾಯಿ ಮೌಲ್ಯ 66.86ಕ್ಕೆ ಕುಸಿತಕಂಡಿದೆ. ಅಂತೆಯೇ ಜಪಾನ್ ಷೇರುಮಾರುಕಟ್ಟೆಯ ಕುಸಿತ ಕೂಡ ಭಾರತೀಯ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.