ಭಾರತೀಯ ಷೇರು ಮಾರುಕಟ್ಟೆ ತಲ್ಲಣ; 800 ಅಂಕಗಳಷ್ಟು ಕುಸಿತ ಕಂಡ ಸೆನ್ಸೆಕ್ಸ್

ಕಪ್ಪುಹಣ, ಖೋಟಾ ನೋಟು ಮತ್ತು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಕಪ್ಪುಹಣ, ಖೋಟಾ ನೋಟು ಮತ್ತು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಮಧ್ಯ ರಾತ್ರಿಯಿಂದಲೇ ಜಾರಿಗೆ ಬರುವಂತೆ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ದೇಶಾದ್ಯಂತ ಚಲಾವಣೆಗೊಳ್ಳುವುದನ್ನು ನಿಷೇಧಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆಯ ಇಂದಿನ ವಹಿವಾಟಿನ ಆರಂಭದಲ್ಲಿಯೇ ಭಾರೀ ಕುಸಿತ ಕಂಡುಬಂದಿದೆ. 
ಇಂದು ಬೆಳಗ್ಗೆ 9.43ರ ಹೊತ್ತಿಗೆ ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 706 ಅಂಕಗಳಷ್ಟು ಕುಸಿತ ಕಂಡುಬಂದು 26 ಸಾವಿರದ 885ರಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ ಸಹ 231 ಅಂಕ ಕುಸಿತ ಕಂಡು ಬಂದಿದ್ದು 8 ಸಾವಿರದ 312ರಲ್ಲಿ ವಹಿವಾಟು ನಡೆಸುತ್ತಿತ್ತು. ವಿಸ್ತಾರ ಮಾರುಕಟ್ಟೆಯಲ್ಲಿ ಬಿಎಸ್ ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇಕಡಾ 8ರಷ್ಟು ಕುಸಿತ ಕಂಡುಬಂದಿವೆ.
ಜಾಗತಿಕ ಮಾರುಕಟ್ಟೆ: ಏಷ್ಯಾ ಮಾರುಕಟ್ಟೆಯಲ್ಲಿ ಅಮೆರಿಕಾ ಡಾಲರ್ ಬೆಲೆ ಕುಸಿದು ಷೇರು ಮಾರುಕಟ್ಟೆಯಲ್ಲಿ ತಲ್ಲಣವನ್ನುಂಟುಮಾಡಿದೆ. ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಹಿಲರಿ ಕ್ಲಿಂಟನ್ ಮಧ್ಯೆ ಗೆಲುವಿನ ಅಂತರ ಕಡಿಮೆಯಾಗಿರುವುದು, ಡೊನಾಲ್ಡ್ ಅವರು ಮುಂಚೂಣಿಯಲ್ಲಿರುವುದು ಕೂಡ ಭಾರತ ಹಾಗೂ ಚೀನಾ ಷೇರು ಮಾರುಕಟ್ಟೆ ಫಲಿತಾಂಶದ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ.
ಮುಂಬೈ ಷೇರು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ಆಟೋಮೊಬೈಲ್, ಗ್ರಾಹಕ ಬಳಕೆ ವಸ್ತುಗಳು, ಬ್ಯಾಂಕ್ ಷೇರುಗಳಲ್ಲಿ ಇಳಿಕೆ ಕಂಡುಬಂದಿದೆ.
ಈ ಸುದ್ದಿ ಬರೆಯುವಷ್ಟು ಹೊತ್ತಿಗೆ ಮುಂಬೈ ಷೇರು ಮಾರುಕಟ್ಟೆ ವಹಿವಾಟು 799  ಅಂಕ ಕುಸಿದು 26 ಸಾವಿರದ 785ರಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ 265 ಅಂಕಗಳಷ್ಟು ಕುಸಿತ ಕಂಡು 8 ಸಾವಿರದ 271 ರಲ್ಲಿ ವಹಿವಾಟು ನಡೆಸುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com