ನವದೆಹಲಿ: ಜಾಗತಿಕ ಮಟ್ಟದ ಬ್ಯಾಂಕ್ ರಚನೆಯ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅದರ ಇತರ ಐದು ಸಹಾಯಕ ಬ್ಯಾಂಕ್ ಗಳ ವಿಲೀನಕ್ಕೆ ಸರ್ಕಾರ ಗುರುವಾರ ಒಪ್ಪಿಗೆ ನೀಡಿದೆ. ಆದರೆ ಭಾರತೀಯ ಮಹಿಳಾ ಬ್ಯಾಂಕಿನ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಕೇಂದ್ರ ಸಂಪುಟ ಈ ಮುನ್ನ ವಿಲೀನ ಪ್ರಸ್ತಾಪಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತು. ಬ್ಯಾಂಕಿನ ಅನೇಕ ಮಂಡಳಿಗಳಿಗೆ ಹೋದ ನಂತರ ಅನುಮೋದನೆಯನ್ನು ನೀಡಿತು. ಮಂಡಳಿಯ ಶಿಫಾರಸುಗಳನ್ನು ಇಂದು ಪರಿಶೀಲಿಸಿ ಸಂಪುಟ ಪ್ರಸ್ತಾವನೆಗೆ ಒಪ್ಪಿಗೆ ನೀಡಿತು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಎಸ್ ಬಿಐ ಜೊತೆ ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಟ್ರವಂಕೂರು, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗಳು ವಿಲೀನಗೊಳ್ಳುತ್ತವೆ.
ಎಸ್ ಬಿಐ ಹಾಗೂ ಇತರ ಐದು ಬ್ಯಾಂಕುಗಳ ವಿಲೀನದ ಮೂಲಕ ದೇಶೀಯ ಅಂಶಗಳ ದೃಷ್ಟಿಯಿಂದ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಅತಿ ದೊಡ್ಡ ಬ್ಯಾಂಕು ಎನಿಸಲಿದೆ ಎಂದು ಸಚಿವರು ಕೇಂದ್ರ ಸಂಪುಟ ಸಭೆಯ ಬಳಿಕ ತಿಳಿಸಿದರು.
ವಿಲೀನದ ನಂತರ ಬ್ಯಾಂಕಿನ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ದಕ್ಷತೆಯುಂಟಾಗಲಿದೆ. ಈ ಬ್ಯಾಂಕುಗಳ ಮಧ್ಯೆ ಕಾರ್ಯನಿರ್ವಹಣೆಯ ಸಹಕಾರ ಹೆಚ್ಚಾಗಲಿದೆ. ಕಾರ್ಯಾಚರಣೆಯ ವೆಚ್ಚ ಕಡಿತವಾಗಲಿದೆ. ನಿಧಿಯ ವೆಚ್ಚ ತಗ್ಗಲಿದೆ ಎಂದು ಹೇಳಿದರು.
ವಿಲೀನದಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಪತ್ತಿನ ಮೌಲ್ಯ 37 ಲಕ್ಷ ಕೋಟಿಯಷ್ಟಾಗಲಿದೆ. ದೇಶಾದ್ಯಂತ 22,500 ಶಾಖೆಗಳು ಮತ್ತು 58,000 ಎಟಿಎಂಗಳಿವೆ. ಇದರಡಿ ಸುಮಾರು 50 ಕೋಟಿಗೂ ಅಧಿಕ ಗ್ರಾಹಕರಿದ್ದಾರೆ.
ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಡಿ 16,500 ಶಾಖೆಗಳಿವೆ. 36 ದೇಶಗಳಲ್ಲಿ 191 ವಿದೇಶಿ ಕಚೇರಿಗಳಿವೆ. 2008ರಲ್ಲಿ ಸ್ಟೇಟ್ ಬ್ಯಾಂಕ್ ಜೊತೆಗೆ ಸೌರಾಷ್ಟ್ರ ವಿಲೀನವಾಗಿತ್ತು. ಎರಡು ವರ್ಷ ಕಳೆದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂದೋರ್ ವಿಲೀನವಾಗಿತ್ತು.