ಇಸ್ರೇಲಿಗಳು ತಮ್ಮ ಮೇಲೆ ಆದ ಆಕ್ರಮಣಕ್ಕೆ ಹಲುಬುತ್ತಾ ಅಥವಾ ಶೋಕ ಆಚರಿಸುತ್ತಾ ಕೂರುವ ಜಾಯಮಾನದವರಲ್ಲ. ದಾಳಿಗೆ ವಿರುದ್ಧವಾಗಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಹಾನಿ ಮಾಡುವ ದಾಳಿ ಮಾಡುವುದು ಜಗತ್ತಿಗೆ ಇಸ್ರೇಲ್ ಬಗ್ಗೆ ತಿಳಿದಿರುವ ಅತಿ ಸಾಮಾನ್ಯ ವಿಷಯ . ಇಸ್ರೇಲ್ ತನ್ನ ಸುತ್ತ ಇರುವ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿಲ್ಲ. ಇಸ್ರೇಲ್ ಸುತ್ತಾ ಲೆಬನಾನ್, ಸಿರಿಯಾ, ಸೌದಿ ಅರೇಬಿಯಾ, ಪ್ಯಾಲೇಸ್ತೀನ್, ಜೋರ್ಡನ್, ಈಜಿಪ್ಟ್ ದೇಶಗಳನ್ನ ಹೊಂದಿದೆ. ಇವೆಲ್ಲಾ ಮುಸ್ಲಿಂ ದೇಶಗಳು . ಈ ಎಲ್ಲಾ ದೇಶಗಳಿಗೂ ಇಸ್ರೇಲ್ ಎಂದರೆ ರಕ್ತ ಕುದಿಯುತ್ತದೆ. ಅದಕ್ಕೆ ಕಾರಣ ಇಸ್ರೇಲ್ ಇರುವ ಜಾಗ ನಮ್ಮದು ಇಸ್ರೇಲ್ ಗೆ ಸೇರಿದ್ದೇ ಅಲ್ಲ ಎನ್ನುವುದು ಬಹಳ ಹಳೆಯ ವಾದ. ಹೀಗಾಗಿ ಇಸ್ರೇಲ್ ಸದಾ ಎಚ್ಚರದಿಂದ ಇರಬೇಕಾದ ಪರಿಸ್ಥಿತಿಯಲ್ಲಿದೆ. ಸದಾ ಒಂದಲ್ಲ ಒಂದು ಆಕ್ರಮಣಗಳಿಗೆ ಇಸ್ರೇಲ್ ಗುರಿಯಾಗುತ್ತಲೇ ಇರುತ್ತದೆ . ಇಸ್ರೇಲ್ ಗೆ ನೀವು ಭೇಟಿ ಕೊಟ್ಟಿದ್ದೆ ಆದರೆ ಅಲ್ಲಿ ಅಘೋಷಿತ ಯುದ್ಧದ ಪರಿಸರ ಇರುವುದು ನಿಮ್ಮ ಅರಿವಿಗೆ ಬಂದೀತು. ಹಾಗೆಂದು ಜನ ಭಯಭೀತರಾಗಿದ್ದಾರೆ ಎಂದುಕೊಂಡರೆ ಅದು ತಪ್ಪು. ಜನ ಸಾಮಾನ್ಯ ರೀತಿಯಲ್ಲಿ ತಮ್ಮ ಜೀವನ ನೆಡೆಸುತ್ತಾ ಇರುತ್ತಾರೆ. ಜೋರಾಗಿ ಸೈರನ್ ಕೂಗುತ್ತದೆ. ಆ ಸೈರನ್ ಯುದ್ಧದ ಅಥವಾ ಆಪತ್ತು ಎನ್ನುವ ಸಂಕೇತ. ಜನ ಇಂತಹ ಸೈರನ್ ಗೆ ಹೊಂದಿಕೊಂಡಿದ್ದಾರೆ. ಅಲ್ಲಿ ಪ್ಯಾನಿಕ್ ಅನ್ನುವುದು ಇಲ್ಲ. ನಿಮ್ಮ ಪಕ್ಕದಲ್ಲಿ ಬೀಚ್ ನಲ್ಲಿ ಮಲಗಿದ್ದ ಪುರುಷ ಅಥವಾ ಮಹಿಳೆ ಕೆಲವು ನಿಮಿಷಗಳಲ್ಲಿ ಸೈನಿಕರಾಗಿ ಬದಲಾಗುತ್ತಾರೆ. ಪ್ರವಾಸಿಗನಿಗೆ ಕೀಪ್ ಯುವರ್ ಕೂಲ್ ಎಲ್ಲಾ ಕಂಟ್ರೋಲ್ ನಲ್ಲಿದೆ ಎನ್ನುವ ತಣ್ಣನೆಯ ಭಾವನೆ ನೀಡುತ್ತಾರೆ. ಮುಂದಿನ ಕತೆ, ಇಸ್ರೇಲಿಗಳು ನೀಡುವ ಖಡಕ್ ಉತ್ತರ ಜಗತ್ತಿಗೆ ತಿಳಿದಿದೆ. ಇಷ್ಟೆ ಆಗಿದ್ದರೆ ಇಸ್ರೇಲ್ ವಿಶೇಷ ಅನ್ನಿಸುತ್ತಾ ಇರಲಿಲ್ಲ ಜಗತ್ತಿಗೆ ಒಂದು ದಾರಿಯಾದರೆ ಇಸ್ರೇಲಿಗಳು ಮಾತ್ರ ತಮ್ಮದೆ ದಾರಿಯಲ್ಲಿ ತಮ್ಮದೆ ವೇಗದಲ್ಲಿ ಸಾಗುತ್ತಾರೆ. ಏನದು ಅಂತಹ ವೈಶಿಷ್ಟ್ಯಗಳು ಎನ್ನುವುದರ ಸುತ್ತ ಒಂದು ರೌಂಡ್ ಹಾಕೋಣ ಬನ್ನಿ.