ಭಾರತದಲ್ಲಿ ಟಿಕ್ ಟಾಕ್ ನಿಷೇಧ; 6 ಶತಕೋಟಿ ಡಾಲರ್ ನಷ್ಟ

ಭಾರತದಲ್ಲಿ ಟಿಕ್ ಟಾಕ್ ನಿಷೇಧವಾದ ಕೆಲವೇ ದಿನಗಳ ಅಂತರದಲ್ಲಿ ಟಿಕ್ ಟಾಕ್ ಮಾತೃಸಂಸ್ಥೆಗೆ ಬರೊಬ್ಬರಿ 6 ಶತಕೋಟಿ ಡಾಲರ್ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.
ಟಿಕ್ ಟಾಕ್ ಆಪ್
ಟಿಕ್ ಟಾಕ್ ಆಪ್

ಬೀಜಿಂಗ್: ಭಾರತದಲ್ಲಿ ಟಿಕ್ ಟಾಕ್ ನಿಷೇಧವಾದ ಕೆಲವೇ ದಿನಗಳ ಅಂತರದಲ್ಲಿ ಟಿಕ್ ಟಾಕ್ ಮಾತೃಸಂಸ್ಥೆಗೆ ಬರೊಬ್ಬರಿ 6 ಶತಕೋಟಿ ಡಾಲರ್ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ ಭಾರತ ಸರ್ಕಾರ ಜೂನ್ 29ರಂದು ಆದೇಶ ಹೊರಡಿಸಿದೆ. ಅಂತೆಯೇ ಈಗಾಗಲೇ ಈ ಆ್ಯಪ್‌ಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಗಲ್ವಾನ್ ಸಂಘರ್ಷದ ಬೆನ್ನಲ್ಲೇ ಚೀನಾ ಮೂಲದ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ಸುರಕ್ಷತೆ ಹಾಗೂ ದತ್ತಾಂಶ ಕಳ್ಳತನ ಆರೋಪದ ಮೇರೆಗೆ ನಿಷೇಧ ಹೇರಿತ್ತು. 

ಚೀನಾ ಮೂಲದ ಟಿಕ್‌ಟಾಕ್, ಶೇರ್ ಇಟ್, ಯುಸಿ ಬ್ರೌಸರ್, ಬೈದು ನಕ್ಷೆ, ಹೆಲೋ, ಮಿ ಕಮ್ಯುನಿಟಿ, ಕ್ಲಬ್ ಫ್ಯಾಕ್ಟರಿ, ವೀಚಾಟ್ ಮತ್ತು ಯುಸಿ ನ್ಯೂಸ್ ಸೇರಿದಂತೆ ಚೀನಾ ಲಿಂಕ್‌ಗಳೊಂದಿಗಿನ 59 ಆ್ಯಪ್‌ಗಳನ್ನು ನಿಷೇಧಿಸಿತ್ತು. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಅಡಿಯಲ್ಲಿ ಈ ಆ್ಯಪ್‌ಗಳನ್ನು ನಿಷೇಧ ಮಾಡಲಾಗಿತ್ತು.
 
ಇದೀಗ ಟಿಕ್ ಟಾಕ್ ಕಂಪೆನಿಯ ಮಾತೃಸಂಸ್ಥೆ ಬೈಟ್ ಡ್ಯಾನ್ಸ್ ಗೆ 6 ಶತಕೋಟಿ ಡಾಲರ್  ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಟ್ವೀಟ್ ಮಾಡಿದ್ದು, ಭಾರತ ಚೀನಾ ನಡುವಿನ ಘರ್ಷಣೆಯಿಂದಾಗಿ ಚೀನಾದ ಟಿಕ್ ಟಾಕ್ ಸೇರಿದಂತೆ 59 ಅಪ್ಲಿಕೇಶನ್ ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ. ಭಾರತ ಸರ್ಕಾರದ ಈ ನಿರ್ಧಾರದಿಂದ ಟಿಕ್ ಟಾಕ್ ಕಂಪೆನಿಯ ಮಾತೃಸಂಸ್ಥೆ ಬೈಟ್ ಡ್ಯಾನ್ಸ್ ಗೆ 6 ಶತಕೋಟಿ ಡಾಲರ್(45 ಸಾವಿರ ಕೋಟಿ ರೂ)ನಷ್ಟವಾಗಿದೆ ಎಂದು ತಿಳಿಸಿದೆ.

ಚೀನಾದ ಆ್ಯಪ್ ಗಳಿಗೆ ಭಾರತ ವಿಶ್ವದ ಅತೀ ದೊಡ್ಡ ಮಾರುಕಟ್ಟೆಯಾಗಿತ್ತು. ಆದರೆ ಭಾರತ ಸರ್ಕಾರದ ದಿಡೀರ್ ನಿರ್ಣಯದಿಂದಾಗಿ ಚೀನಾದ ಆ್ಯಪ್ ಮಾಲೀಕತ್ವದ ಸಂಸ್ಥೆಗಳು ಭಾರಿ ನಷ್ಟ ಅನುಭವಿಸುತ್ತಿವೆ. ಇದೇ ವಿಚಾರವಾಗಿ ಮೊಬೈಲ್ ಅಪ್ಲಿಕೇಶನ್ ವಿಶ್ಲೇಷಣಾ ಕಂಪನಿಯಾದ ಸೆನ್ಸಾರ್ ಟ್ವೊರ್ನ್ ಮಾಹಿತಿಯ ಪ್ರಕಾರ, ಮೇ ತಿಂಗಳಲ್ಲಿ ವಿಶ್ವಾದ್ಯಂತ ಟಿಕ್‌ಟಾಕ್ ಅನ್ನು 112 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ ಮತ್ತು ಭಾರತದಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿದ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ. ಅಂದರೆ ಅಮೆರಿಕಾದಲ್ಲಿ ಡೌನ್‌ಲೋಡ್ ಮಾಡಿದ ಸಂಖ್ಯೆಗಿಂತ ಭಾರತದಲ್ಲಿ ಎರಡು ಪಟ್ಟು ಹೆಚ್ಚು ಮಂದಿ ಡೌನ್ಲೋಡ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com