ಷೇರುಮಾರುಕಟ್ಟೆ ಕುಸಿತ: ಹೂಡಿಕೆದಾರರಿಗೆ 5.47 ಲಕ್ಷ ಕೋಟಿ ರೂ. ನಷ್ಟ

ಹಣದುಬ್ಬರ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಭಾರತೀಯ ಷೇರುಮಾರುಕಟ್ಟೆ ಕುಸಿತದತ್ತ ಮುಖ ಮಾಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 1500ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು ಹೂಡಿಕೆದಾರರ 5.47 ಲಕ್ಷ ಕೋಟಿ ರೂ ನಷ್ಟವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಹಣದುಬ್ಬರ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಭಾರತೀಯ ಷೇರುಮಾರುಕಟ್ಟೆ ಕುಸಿತದತ್ತ ಮುಖ ಮಾಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 1500ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು ಹೂಡಿಕೆದಾರರ 5.47 ಲಕ್ಷ ಕೋಟಿ ರೂ ನಷ್ಟವಾಗಿದೆ.

ಜಾಗತಿಕ ಷೇರುಮಾರುಕಟ್ಟೆಯಲ್ಲಿ ನೀರಸ ವಹಿವಾಟಿನ ಪರಿಣಾಮ ಸೋಮವಾರ (ಜೂನ್ 13) ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 1,500ಕ್ಕೂ ಅಧಿಕ ಅಂಕಗಳಷ್ಟು ಕುಸಿತ ಕಂಡಿದೆ. ಇದರಿಂದಾಗಿ ಹೂಡಿಕೆದಾರರ 5.47 ಲಕ್ಷ ಕೋಟಿ ರೂಪಾಯಿ ನಷ್ಟ ಕಂಡಿದೆ.

ಇಂದು ಆರಂಭಿಕ ವಹಿವಾಟಿನಲ್ಲಿ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 1,568.46 ಅಂಕಗಳಷ್ಟು ಇಳಿಕೆಯಾಗಿದ್ದು, 52,734.98 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡ 451.9 ಅಂಕಗಳಷ್ಟು ಕುಸಿತಗೊಂಡಿದ್ದು, 15,749.90 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಸಿಯೋಲ್, ಟೋಕಿಯೊ, ಹಾಂಗ್ ಕಾಂಗ್, ಶಾಂಘೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಭಾರೀ ಇಳಿಕೆ ಕಂಡಿದೆ. ಅಮೆರಿಕದ ಷೇರು ಮಾರುಕಟ್ಟೆ ಶುಕ್ರವಾರ ಭಾರೀ ಇಳಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿತ್ತು.

ಭಾರೀ ಪ್ರಮಾಣದಲ್ಲಿ ಸೆನ್ಸೆಕ್ಸ್, ನಿಫ್ಟಿ ಕುಸಿತ ಪರಿಣಾಮ ಹೂಡಿಕೆದಾರರು 5.47 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಈಕ್ವಿಟಿಗಳಲ್ಲಿನ ದುರ್ಬಲ ಪ್ರವೃತ್ತಿಗೆ ಅನುಗುಣವಾಗಿ, ಬಿಎಸ್‌ಇ-ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು ಬೆಳಗಿನ ವಹಿವಾಟಿನಲ್ಲಿ ರೂ 5,47,410.81 ಕೋಟಿಯಿಂದ ರೂ 2,46,36,948.05 ಕೋಟಿಗೆ ಕುಸಿದಿದೆ.

ಇಂದಿನ ವಹಿವಾಟಿನಲ್ಲಿ ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳ ಮೌಲ್ಯ ಭಾರೀ ಕುಸಿತ ಕಂಡಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದಿದ್ದು, ವಿನಿಮಯ ಮಾಹಿತಿಯ ಪ್ರಕಾರ ಶುಕ್ರವಾರ ರೂ 3,973.95 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com