2000 ರೂ. ಮುಖಬೆಲೆ ನೋಟಿಗೆ ಸಮಾಧಿ, RBI ನಿರ್ಧಾರಕ್ಕೇನು ಕಾರಣ? ಹೊಸ ಅವತಾರದಲ್ಲಿ ಮತ್ತೆ 1000 ರೂ ನೋಟು?

ಆರ್‌ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದ್ದು, ಚಲಾವಣೆಗೆ ಬಂದ ಕೇವಲ ಎರಡೇ ವರ್ಷಗಳ ಅವಧಿಯಲ್ಲಿ ಈ ನೋಟು ಹಿಂಪಡೆಯಲು ಕಾರಣವೇನು? ಇಲ್ಲಿದೆ ಉತ್ತರ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆರ್‌ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದ್ದು, ಚಲಾವಣೆಗೆ ಬಂದ ಕೇವಲ ಎರಡೇ ವರ್ಷಗಳ ಅವಧಿಯಲ್ಲಿ ಈ ನೋಟು ಹಿಂಪಡೆಯಲು ಕಾರಣವೇನು? ಇಲ್ಲಿದೆ ಉತ್ತರ..

ಆರ್ ಬಿಐ ನೀಡಿರುವ ಮಾಹಿತಿಯಂತೆ ಇದು ನೋಟ್ ಬ್ಯಾನ್ ಅಲ್ಲ.. ಆದರೆ ನಿಗದಿತ ಸಮಯದವರೆಗೂ 2,000 ರೂ. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ. ಸೆಪ್ಟೆಂಬರ್ 30ರ ಒಳಗೆ ಎಲ್ಲರೂ ನೋಟುಗಳ ಬದಲಾವಣೆ ಇಲ್ಲವೇ ಠೇವಣಿ ಇಡುವಂತೆ ತಿಳಿಸಿದೆ.

ನವೆಂಬರ್ 2016 ರಲ್ಲಿ ಆರ್‌ಬಿಐ ಕಾಯಿದೆ, 1934 ರ ಸೆಕ್ಷನ್ 24 (1) ರ ಅಡಿಯಲ್ಲಿ ರೂ. 500 ಮತ್ತು 1000 ನೋಟುಗಳನ್ನು ಅಮಾನ್ಯಗೊಳಿಸಿದ ನಂತರ, ಆರ್ಥಿಕತೆಯ ಕರೆನ್ಸಿ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೂ.2000 ನೋಟನ್ನು ಪರಿಚಯಿಸಿತು. 2018-19ನೇ ಸಾಲಿನಲ್ಲಿ 2000 ನೋಟುಗಳ ಮುದ್ರಣವನ್ನು ಕೇಂದ್ರವು ಸ್ಥಗಿತಗೊಳಿಸಿದ್ದು, ನಿಗದಿತ ಗುರಿ ತಲುಪಿದ್ದು, ಅಗತ್ಯಕ್ಕೆ ತಕ್ಕಂತೆ ಇತರೆ ಮುಖಬೆಲೆಯ ನೋಟುಗಳು ಲಭ್ಯವಿವೆ. 

ಕಳೆದ ಐದು ವರ್ಷಗಳಲ್ಲಿ, ಆರ್‌ಬಿಐ ಒಂದೇ ಒಂದು ಸಣ್ಣ ಮಾಹಿತಿ ಕೂಡ ಇಲ್ಲದೆ ವ್ಯವಸ್ಥೆಯಿಂದ 3 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ನೋಟುಗಳನ್ನು ಚಲಾವಣೆಯಿಂದ ಹೊರಹಾಕಿದೆ. ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿಯ ಶೇಕಡಾವಾರು ಪ್ರಮಾಣದಲ್ಲಿ, ಅದರ (2000ರೂ ಮುಖಬೆಲೆಯ ನೋಟು) ಪಾಲು FY17 ರಲ್ಲಿ ಶೇ.50.2% ರಿಂದ FY23 ರಲ್ಲಿ 10.8% ಕ್ಕೆ ಕಡಿಮೆಯಾಗಿದೆ. ಇದು ಇದೇ ರೀತಿ ಮುಂದುವರೆದಿದ್ದರೆ ಇನ್ನು ಕೆಲವೇ ತಿಂಗಳುಗಳಲ್ಲಿ 2000 ರೂ ಮುಖಬೆಲೆಯ ನೋಟುಗಳ ಬಳಕೆ ತಾನೇ ತಾನಾಗಿ ಶೂನ್ಯವಾಗಿರುತ್ತಿತ್ತು. ಆದರೆ ಆರ್ ಬಿಐನ ಈ ಘೋಷಣೆ ಅಚ್ಚರಿ ಮೂಡಿಸಿದೆ.

ಕ್ಲೀನ್ ನೋಟ್ ಪಾಲಿಸಿ ನಿಯಮದಂತೆ RBI ನಿರ್ಧಾರ
2000 ರೂ ಮುಖಬೆಲೆಯ ನೋಟುಗಳಲ್ಲಿ ಹೆಚ್ಚಿನವು ಮಾರ್ಚ್ 2017 ಕ್ಕಿಂತ ಮೊದಲು ಬಿಡುಗಡೆಯಾಗಿದೆ. ಇತರ ಮುಖಬೆಲೆಯ ನೋಟುಗಳು ಪ್ರಸ್ತುತ ದೇಶದ ಜನರ ಕರೆನ್ಸಿ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆ. ಈ ಕಾರಣಕ್ಕಾಗಿಯೇ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು "ಕ್ಲೀನ್ ನೋಟ್ ಪಾಲಿಸಿ" ಪ್ರಕಾರ ಚಲಾವಣೆಯಿಂದ ಹಿಂಪಡೆಯಲಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

ಹಾಗಾದರೆ ಏನಿದು ಕ್ಲೀನ್ ನೋಟ್ ನೀತಿ?
ಗುಣಮಟ್ಟದ ನೋಟುಗಳನ್ನು ಚಲಾವಣೆಯಲ್ಲಿಡಲು RBI ಅನುಸರಿಸುವ ನೀತಿಯೇ ಕ್ಲೀನ್ ನೋಟ್ ಪಾಲಿಸಿ. ಸದ್ಯಕ್ಕೆ 2000 ರೂಪಾಯಿ ನೋಟಿನ ವಹಿವಾಟಿನ ವಿಚಾರದಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಜನರು ತಮ್ಮ ವಹಿವಾಟಿಗೆ 2000 ರೂಪಾಯಿ ನೋಟುಗಳನ್ನು ಬಳಸಬಹುದು. ಅಲ್ಲದೆ ಅವುಗಳನ್ನು ಪಾವತಿಯ ರೂಪದಲ್ಲಿ ಪಡೆಯಬಹುದು. ಇಲ್ಲದಿದ್ದರೆ, ನೋಟುಗಳನ್ನು ಸೆಪ್ಟೆಂಬರ್ 30, 2023 ರಂದು ಅಥವಾ ಮೊದಲು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗುತ್ತದೆ.

2024ರ ಚುನಾವಣಾ ಅಕ್ರಮಕ್ಕೆ ಬ್ರೇಕ್ ಹಾಕಲು ಈ ನಿರ್ಧಾರವೇ?
ಒಂದು ಮೂಲದ ಪ್ರಕಾರ 2024 ರ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆಗಳನ್ನು ಆರಂಭಿಸಿದ್ದು, ಹೆಚ್ಚಿನ ಮುಖಬೆಲೆಯ ನೋಟುಗಳ ಸಂಗ್ರಹಣೆ ಮುಂದಾಗಿವೆ ಎಂದು ಹೇಳಲಾಗಿದೆ. ಅನುಮಾನಾಸ್ಪದವಾಗಿ ಹೆಚ್ಚಿನ ಮುಖಬೆಲೆಯ ನೋಟುಗಳ ಸಂಗ್ರಹಣೆ ಮತ್ತು ದುರುಪಯೋಗವನ್ನು ತಪ್ಪಿಸಲು ಆರ್ ಬಿಐ ನ ಈ ನಿರ್ಧಾರ ಸಹಾಯ ಮಾಡುತ್ತದೆ ಎನ್ನಲಾಗಿದೆ. 

ಈ ಬಗ್ಗೆ ಮಾತನಾಡಿರುವ ವಿತ್ತೀಯ ತಜ್ಞ, ಹಣಕಾಸು ವಲಯದ ರೇಟಿಂಗ್‌ ವಿಭಾಗದ ಮುಖ್ಯಸ್ಥ ಅನಿಲ್ ಗುಪ್ತಾ ಅವರು, 'ಸೆಪ್ಟೆಂಬರ್, 30 ರ ನಂತರ 3.6 ಲಕ್ಷ ಕೋಟಿ ರೂಪಾಯಿ ಮೌಲ್ಯದ ರೂ 2,000 ರೂ ಮುಖಬೆಲೆಯ ನೋಟುಗಳ ಪ್ರಸ್ತುತ ಚಲಾವಣೆಯಲ್ಲಿಲ್ಲ.. ಹಾಲಿ ವಿದ್ಯಮಾನದಿಂದ ಬಹುಶಃ ಎರಡು ವಿಷಯಗಳು ಸಂಭವಿಸಬಹುದು.. ಒಂದು, ಕೇಂದ್ರ ಬ್ಯಾಂಕ್ (ಆರ್ ಬಿಐ) ಕೊರತೆಯನ್ನು ಸರಿದೂಗಿಸಲು ಹೆಚ್ಚು ರೂ 100, ರೂ 200 ಮತ್ತು ರೂ 500 ನೋಟುಗಳನ್ನು ಮುದ್ರಿಸಬಹುದು. ಎರಡು, ನಾವು ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿ (ಪ್ರಸ್ತುತ ಸುಮಾರು 34.8 ಲಕ್ಷ ಕೋಟಿ)ಯಲ್ಲಿ ಕಡಿತವನ್ನು ನೋಡಬಹುದು.. 
ಅಲ್ಲದೆ 2000 ರೂ ಮುಖಬೆಲೆಯ 3.6 ಲಕ್ಷ ಕೋಟಿ ರೂಗಳು ಬ್ಯಾಕಿಂಗ್ ವ್ಯವಸ್ಥೆಗೆ ಮರಳುತ್ತಿರುವುದರಿಂದ ಅಲ್ಪಾವಧಿಗಾದರೂ ಬಡ್ಡಿದರಗಳಲ್ಲಿ ಇಳಿಕೆ ಕಾಣಬಹುದು. ಇದು ಮತ್ತೊಂದು ಉಪಯೋಗವಾಗಿದೆ ಎಂದು ಹೇಳಿದ್ದಾರೆ.

ಇದೇ ವಾದಕ್ಕೆ ಇಂಬು ನೀಡುವಂತೆ ಐಸಿಆರ್ ಎ ರೇಟಿಂಗ್ಸ್ ನ ಹಣಕಾಸು ವಲಯದ ರೇಟಿಂಗ್‌ ವಿಭಾಗದ ಹಿರಿಯ ಉಪ ಮುಖ್ಯಸ್ಥ ಕಾರ್ತಿಕ್ ಶ್ರೀನಿವಾಸನ್ ಅವರು ಮಾತನಾಡಿದ್ದು, 'ನೋಟು ಅಮಾನ್ಯೀಕರಣದ ಸಮಯದಲ್ಲಿ ಕಂಡುಬಂದಂತೆ, ಬ್ಯಾಂಕ್‌ಗಳ ಠೇವಣಿ ಸಂಗ್ರಹವು ಸಮೀಪದ ಅವಧಿಯಲ್ಲಿ ಸ್ವಲ್ಪಮಟ್ಟಿಗೆ ಸುಧಾರಿಸಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಇದು ಠೇವಣಿ ದರಗಳ ಹೆಚ್ಚಳದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅಲ್ಪಾವಧಿಯ ಬಡ್ಡಿದರಗಳಲ್ಲಿ ಮಿತಗೊಳಿಸುವಿಕೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಹೊಸ ಅವತಾರದಲ್ಲಿ 1000 ರೂ ಮುಖಬೆಲೆಯ ನೋಟು ಮತ್ತೆ ಚಲಾವಣೆಗೆ?
ಪಿಂಕ್ ನೋಟುಗಳ (2000 ರೂ) ಯೋಜಿತ ಅವಸಾನವು ಭಾರತದ ಆದರ್ಶ ಕರೆನ್ಸಿ ಮಿಶ್ರಣದ ಬಗ್ಗೆ ಒಂದು ಸೂಕ್ತವಾದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಮತ್ತು ರೂ 500 ದೇಶದ ಅತ್ಯುನ್ನತ ಮುಖಬೆಲೆಯಾಗಿ ಉಳಿಯುತ್ತದೆಯೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. 2016 ರವರೆಗೆ ಚಲಾವಣೆಯಲ್ಲಿದ್ದ ರೂ 500-ರೂ 1,000 ನೋಟುಗಳಿಗೆ ಹೊಸ ರೂ 500-ರೂ 2000 ನೋಟುಗಳನ್ನು ಪರ್ಯಾಯವಾಗಿ ಚಾಲ್ತಿಗೆ ತರಲಾಗಿತ್ತು. ಹಳೆಯ 500 ರೂ ಮತ್ತು 1000 ಮುಖ ಬೆಲೆಯ ನೋಟುಗಳು ಅಂದು ಚಲಾವಣೆಯಲ್ಲಿದ್ದ ಒಟ್ಟು ಕರೆನ್ಸಿಯ ಶೇ.80% ಕ್ಕಿಂತ ಹೆಚ್ಚು ಪಾಲು ಹೊಂದಿತ್ತು. ಆದರೆ ಈಗಿರುವ ರೂ 500 ಮುಖಬೆಲೆಯ ನೋಟುಗಳು ಕೇವಲ ಶೇ.70% ಕ್ಕಿಂತ ಹೆಚ್ಚು ಪಾಲು ಹೊಂದಿದ್ದು, ಈಗ ಮತ್ತೆ ಆರ್ ಬಿಐ ಹೊಸ ಅವತಾರದಲ್ಲಿ 1000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. 

2018ರಿಂದಲೇ ಆರ್ ಬಿಐ ಈ ಬಗ್ಗೆ ಗಂಭೀರ ಚಿಂತನೆ ಮಾಡಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ 2018ರಿಂದಲೇ ಅರ್ ಬಿಐ 2000 ರೂ ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತ ಮಾಡಿದ್ದು ಮಾತ್ರವಲ್ಲದೇ ಕ್ರಮೇಣ ಎಟಿಎಂಗಳಲ್ಲೂ ಪಿಂಕ್ ನೋಟುಗಳು ಸಿಗದಂತೆ ಮಾಡಿತ್ತು. ವಿತ್ತೀಯ ವರ್ಷ 2018ರಲ್ಲಿ ಕಡಿಮೆ ಅಥವಾ ಯಾವುದೇ ಹೊಸ ಪಿಂಕ್ ನೋಟುಗಳನ್ನು ಆರ್ ಬಿಐ ಮುದ್ರಿಸಿಲ್ಲ, ಏಕೆಂದರೆ ಒಟ್ಟು ಕರೆನ್ಸಿ ಮಿಶ್ರಣವು ಶೇ3.3% ರಲ್ಲಿ ಬದಲಾಗದೆ ಹಾಗೆಯೇ ಉಳಿದಿದೆ. ಅತ್ಯಧಿಕ ಮುಖಬೆಲೆಯ ನೋಟುಗಳ ಇಂತಹ ಸಮತಟ್ಟಾದ ಬೆಳವಣಿಗೆ ದರವು ಕನಿಷ್ಠ 20 ವರ್ಷಗಳಲ್ಲಿ ಇದೇ ಮೊದಲನೆಯದು! 2016 ರವರೆಗೆ ಅತ್ಯಧಿಕ ಮುಖಬೆಲೆಯಾಗಿದ್ದ ರೂ 1,000 ನೋಟು, 2001 ರಿಂದ ಮರು-ಪರಿಚಯಿಸಿದ ನಂತರ ಪರಿಮಾಣ ಅಥವಾ ಮೌಲ್ಯದಲ್ಲಿ ಎಂದಿಗೂ ಕಳಪೆ ಬೆಳವಣಿಗೆ ದಾಖಲಿಸಿಲ್ಲ.

ಮೌಲ್ಯದ ಪ್ರಕಾರ, ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿಯಲ್ಲಿ ರೂ 2,000 ನೋಟುಗಳ ಪಾಲು FY17 (ವಿತ್ತೀಯ ವರ್ಷ) ರಲ್ಲಿ ಶೇ.50.2% ರಿಂದ FY18 ರಲ್ಲಿ 37.3% ಕ್ಕೆ ಇಳಿದಿದೆ. ತರುವಾಯ, FY18 ರಲ್ಲಿ, ಇದು FY19 ರಲ್ಲಿ 31.2%, FY20 ರಲ್ಲಿ 22.6%, FY21 ರಲ್ಲಿ 17.3% ಮತ್ತು FY22 ರಲ್ಲಿ 13.8% ಕ್ಕೆ ಇಳಿಯಿತು. FY23 ಡೇಟಾವನ್ನು ಮುಂದಿನ ವಾರ ಪ್ರಕಟಿಸಲಾಗುವುದು, ಆದರೆ RBI ಸೂಚಿಸಿದಂತೆ, ಅದರ ಪಾಲು ಈಗ 10.8% ರಷ್ಟಿದೆ.

FY17 ರಲ್ಲಿ, 6.6 ಲಕ್ಷ ಕೋಟಿ ಮೌಲ್ಯದ ಪಿಂಕ್ ನೋಟುಗಳಿದ್ದವು. FY18 ರಲ್ಲಿ ಅದು 6.7 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿತು.. ಆ ಬಳಿಕ ಈ ಪಿಂಕ್ ನೋಟುಗಳ ಕುಸಿತವು ಪ್ರಾರಂಭವಾಯಿತು. ಇದರ ಮೌಲ್ಯವು FY19 ರಲ್ಲಿ 6.5 ಲಕ್ಷ ಕೋಟಿಗೆ ಕ್ರಮೇಣ ಕಡಿಮೆಯಾಯಿತು, FY20 ರಲ್ಲಿ 5.5 ಲಕ್ಷ ಕೋಟಿ ರೂ., FY21 ರಲ್ಲಿ 4.9 ಲಕ್ಷ ಕೋಟಿ, FY22 ರಲ್ಲಿ 4.3 ಲಕ್ಷ ಕೋಟಿ ಮತ್ತು ಅಂತಿಮವಾಗಿ FY23 ರಲ್ಲಿ 3.62 ಲಕ್ಷ ಕೋಟಿ ರೂ.ಗೆ ಕುಸಿಯಿತು. ಇದಕ್ಕೆ ತದ್ವಿರುದ್ಧ ಎಂಬಂತೆ 500 ರೂ ಮುಖಬೆಲೆಯ ನೋಟುಗಳು ತಮ್ಮ ಆರೋಹಣ ಪ್ರಾರಂಭಿಸಿದವು. FY17 ರಲ್ಲಿ ಇವುಗಳ ಪ್ರಮಾಣ ಶೇ.22.5% ರಿಂದ ಕ್ರಮೇಣ ಏರಿಕೆಯಾಗ ತೊಡಗಿತು. ಇದು FY22 ರಲ್ಲಿ 73.3% ಕ್ಕೆ ಏರಿಕೆಯಾಗುವ ಮೂಲಕ ಮೂರು ಪಟ್ಟು ಹೆಚ್ಚಾಗಿದೆ, ಇದು ರೂ 500 ನಮ್ಮ ಕರೆನ್ಸಿ ಮಿಶ್ರಣದ ಮೂಲಾಧಾರವಾಗಿರಬಹುದು ಎಂದು ಸೂಚಿಸುತ್ತದೆ. ಮೌಲ್ಯದ ಪ್ರಕಾರ, ಇದು FY17 ರಲ್ಲಿ ಸುಮಾರು 500 ರೂ ಮುಖಬೆಲೆಯ ನೋಟುಗಳು 3 ಲಕ್ಷ ಕೋಟಿಯಿಂದ FY22 ರಲ್ಲಿ 22.8 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com