
ಮುಂಬೈ: ಭಾರತೀಯ ಷೇರುಮಾರುಕಟ್ಟೆ ಗುರುವಾರ ಕೂಡ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ್ದು, ಇಂದು ಸೆನ್ಸೆಕ್ಸ್ 349 ಅಂಕಗಳ ಏರಿಕೆ ಕಂಡಿದ್ದರೆ, ನಿಫ್ಟಿ 99.60 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
ಹೌದು.. ಸತತ 4ನೇ ದಿನವೂ ಭಾರತೀಯ ಷೇರುಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದು, ಸೆನ್ಸೆಕ್ಸ್ ಇಂದು 349.05 ಅಂಕಗಳು ಅಂದರೆ ಶೇ.0.43ರಷ್ಟು ಏರಿಕೆಯೊಂದಿಗೆ 82,134.61 ಅಂಕಗಳಿಗೆ ಏರಿಕೆಯಾಗಿದ್ದು, ನಿಫ್ಟಿ ಕೂಡ 99.60 ಅಂಕಗಳು ಅಂದರೆ ಶೇ.0.40ರಷ್ಟು ಅಂಕಗಳ ಏರಿಕೆಯೊಂದಿಗೆ 25,151.95 ಅಂಕಗಳಿಗೇರಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಸೆನ್ಸೆಕ್ಸ್-ನಿಫ್ಟಿ ಸಾರ್ವಕಾಲಿಕ ದಾಖಲೆ
ಅಂತೆಯೇ ಇಂದಿನ ಸಕಾರಾತ್ಮಕ ವಹಿವಾಟಿನೊಂದಿಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ 82 ಸಾವಿರ ಗಡಿ ದಾಟಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 500.27 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ 82,285.83 ಅಂಕಗಳಿಗೆ ಏರಿಕೆಯಾಗಿತ್ತು. ಬಳಿಕ ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 82,134.61 ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ ಇಂದಿನ ವಹಿವಾಟಿನ ವೇಳೆ 140.55 ಅಂಕಗಳ ಏರಿಕೆಯೊಂದಿಗೆ 25,192.90 ಅಂಕಗಳಿಗೆ ಏರಿಕೆಯಾಗಿತ್ತು. ದಿನದ ವಹಿವಾಟು ಅಂತ್ಯದ ವೇಳೆಗೆ 25,151.95 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿತು.
ರಿಲಯನ್ಸ್ ಸಂಸ್ಥೆಯ ಬೋನಸ್ ವಿಚಾರ ಮತ್ತು ರಿಲಯನ್ಸ್ ಕ್ಲೌಡ್ ಮಾರುಕಟ್ಟೆ ಪ್ರವೇಶ ವಿಚಾರಗಳು ಇಂದು ರಿಲಯನ್ಸ್ ಸಂಸ್ಥೆಯ ಷೇರುಗಳ ಮೌಲ್ಯ ಏರಿಕೆಯಲ್ಲಿ ಗಣನೀಯ ಪಾತ್ರವಹಿಸಿದ್ದು, ರಿಲಯನ್ಸ್ ಸಂಸ್ಥೆಯ ಷೇರುಗಳ ಮೌಲ್ಯ ಇಂದು ಶೇ.1.55ರಷ್ಟು ಅಂದರೆ 46.30ರೂ ಏರಿಕೆಯಾಗಿ 3,042.90ರೂಗೆ ಏರಿದೆ.
ಇದಲ್ಲದೆ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟಾಟಾ ಮೋಟಾರ್ಸ್ ಸಂಸ್ಥೆಯ ಷೇರುಗಳ ಮೌಲ್ಯ ಶೇ.4ರಷ್ಟು ಏರಿಕೆಯಾಗಿದ್ದು, ಬಜಾಜ್ ಫಿನ್ ಸರ್ವ್, ಹೆಚ್ ಸಿಎಲ್ ಟೆಕ್ನಾಲಜಿ, ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರಾ, ಮಾರುತಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗಳ ಷೇರುಗಳು ಲಾಭಾಂಶ ಕಂಡಿವೆ.
Advertisement