ಸತತ 6ನೇ ಬಾರಿಗೆ ರೆಪೋ ದರ ಬದಲಾವಣೆ ಇಲ್ಲ; ಶೇಕಡಾ 6.5 ರಲ್ಲೇ ಮುಂದುವರಿಕೆ: ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ ಸತತ ಆರನೇ ಬಾರಿಗೆ ರೆಪೋ ದರ ಏರಿಕೆ ಮಾಡದೇ ಜನರಿಗೆ ಗುಡ್‌ನ್ಯೂಸ್ ನೀಡಿದೆ.
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಮುಂಬೈ (ಮಹಾರಾಷ್ಟ್ರ): ಭಾರತೀಯ ರಿಸರ್ವ್ ಬ್ಯಾಂಕ್ ಸತತ ಆರನೇ ಬಾರಿಗೆ ರೆಪೋ ದರ ಏರಿಕೆ ಮಾಡದೇ ಜನರಿಗೆ ಗುಡ್‌ನ್ಯೂಸ್ ನೀಡಿದೆ.

ಕಳೆದ 3 ದಿನಗಳಿಂದ ನಡೆದ ಆರ್‌ಬಿಐನ ಹಣಕಾಸು ನೀತಿ ಸಭೆಯ ಬಳಿಕ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಗುರುವಾರ ರೆಪೊ ದರ ಯಥಾಸ್ಥಿತಿ ಉಳಿಸಿಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರಿಂದ ಗೃಹ ಹಾಗೂ ವಾಹನ ಸಾಲದ ಇಎಂಐ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.

ಮಧ್ಯಮ ಆರ್ಥಿಕ ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆ ಬಗ್ಗೆ ನಿಗಾ ಇರಿಸಿದ್ದು, ಹಣದುಬ್ಬರವನ್ನು ಪರಿಶೀಲಿಸಲಾಗುತ್ತಿದೆ ಎಂದು ಶಕ್ತಿಕಾಂತ್‌ ದಾಸ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ರೆಪೋ ದರದಂತೆ ರಿವರ್ಸ್‌ ರೆಪೋ ದರ ಕೂಡಾ ಶೇ.3.5ರಷ್ಟಿದ್ದು, ಬ್ಯಾಂಕ್‌ ಗಳ ಬಡ್ಡಿದರ ಕೂಡಾ ಶೇ.6.75 ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಎಸ್‌ ಡಿಎಫ್‌ (ಸ್ಟ್ಯಾಂಡಿಂಗ್‌ ಡೆಪಾಸಿಟ್‌ ಫೆಸಿಲಿಟಿ) ಶೇ.6.25ರಷ್ಟಿದೆ.

ಆರ್‌ಬಿಐ ಹಣಕಾಸು ನೀತಿ ಸಭೆಯಲ್ಲಿ ಪ್ರಮುಖ ನಿರ್ಧಾರ
ಬಹುತೇಕ ಎಲ್ಲಾ ಎಂಪಿಸಿ ಸದಸ್ಯರು ಈ ನೀತಿ ದರಗಳನ್ನು ಸ್ಥಿರವಾಗಿರಿಸಲು ಒಲವು ತೋರಿದ್ದಾರೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.

ಆರ್‌ಬಿಐ ಸಹ ತನ್ನ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಮಾಡಲು ಮುಂದಾಗಿಲ್ಲ. ಹಣಕಾಸು ನೀತಿ ಮಂಡಳಿಯ 6 ಸದಸ್ಯರಲ್ಲಿ 5 ಸದಸ್ಯರು ಹೊಂದಾಣಿಕೆಯ ನಿಲುವನ್ನು ಕಾಪಾಡಿಕೊಳ್ಳುವ ಪರವಾಗಿದ್ದಾರೆ.

ಆರ್‌ಬಿಐನ ಎಂಪಿಸಿ ಸಮಿತಿಯು ಆರು ಸದಸ್ಯರನ್ನು ಒಳಗೊಂಡಿದೆ. ಇದು ಬಾಹ್ಯ ಹಾಗೂ ಆರ್‌ಬಿಐ ಅಧಿಕಾರಿಗಳನ್ನು ಒಳಗೊಂಡಿದೆ. ಗವರ್ನರ್ ದಾಸ್ ಅವರೊಂದಿಗೆ ಆರ್‌ಬಿಐ ಅಧಿಕಾರಿಗಳಾದ ರಾಜೀವ್ ರಂಜನ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ಮೈಕೆಲ್ ದೇಬಬ್ರತ ಪಾತ್ರಾ ಅವರು ಉಪ ಗವರ್ನರ್ ಆಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಶಶಾಂಕ್ ಭಿಡೆ, ಅಶಿಮಾ ಗೋಯಲ್ ಮತ್ತು ಜಯಂತ್ ಆರ್ ವರ್ಮಾ ಬಾಹ್ಯರವರು ಸದಸ್ಯರಾಗಿದ್ದಾರೆ.

ಏನಿದು ರೆಪೋ ದರ?
ರೆಪೋ ದರದ ರೂಪದಲ್ಲಿ ಹಣದುಬ್ಬರದ ವಿರುದ್ಧ ಹೋರಾಡಲು ಆರ್‌ಬಿಐ ಪ್ರಮುಖ ಹಾಗೂ ಪ್ರಬಲ ಸಾಧನವನ್ನು ಹೊಂದಿದೆ. ಹಣದುಬ್ಬರವು ತುಂಬಾ ಹೆಚ್ಚಿರುವಾಗ, ಭಾರತೀಯ ರಿಸರ್ವ್ ಬ್ಯಾಂಕ್‌ ರೆಪೊ ದರವನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಯಲ್ಲಿ ಹಣದ ಹರಿವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ. ಅದೇ ರೀತಿಯಲ್ಲಿ ರೆಪೊ ದರ ಹೆಚ್ಚಾದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲ ದುಬಾರಿಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com