ಮುಂಬೈ: ಭಾರತೀಯ ಷೇರುಮಾರುಕಟ್ಟೆಯ ಮಹಾ ಕುಸಿತದ ನಡುವೆಯೂ ಸ್ವಿಗ್ಗಿ ನೌಕರರ ಅದೃಷ್ಟ ಖುಲಾಯಿಸಿದ್ದು, Swiggy IPO ಪಟ್ಟಿಯಾದ ಒಂದೇ ದಿನದಲ್ಲಿ 500 ಸಿಬ್ಬಂದಿ ಕೋಟ್ಯಧಿಪತಿಗಳಾಗಿ ಬದಲಾಗಿದ್ದಾರೆ.
ಅಚ್ಚರಿಯಾದರೂ ಇದು ಸತ್ಯ.. ಸ್ವಿಗ್ಗಿ ಬುಧವಾರ ಷೇರುಪೇಟೆಯಲ್ಲಿ ಭರ್ಜರಿಯಾಗಿ ಲಿಸ್ಟ್ ಆಗಿದ್ದು, ಇಂದು ಷೇರುಮಾರುಕಟ್ಟೆ ಭಾರಿ ಕುಸಿತದ ನಡುವೆಯೂ ಸ್ವಿಗ್ಗಿ ಸಂಸ್ಥೆಯ ಷೇರುಗಳು ಭಾರೀ ಏರಿಕೆ ಕಂಡಿವೆ.
ಪರಿಣಾಮ ಸಂಸ್ಥೆಯ ಷೇರುಗಳಲ್ಲಿ ಹೂಡಿಕೆ ಮಾಡಿದ್ದ ಸ್ವಿಗ್ಗಿ ಸಿಬ್ಬಂದಿ ಒಂದೇ ದಿನದಲ್ಲಿ ಭಾರಿ ಲಾಭಾಂಶ ಪಡೆಯುವ ಮೂಲಕ ಕೋಟ್ಯಾದಿಪತಿಗಳಾಗಿ ಬದಲಾಗಿದ್ದಾರೆ.
ಸ್ವಿಗ್ಗಿಯ 500 ಉದ್ಯೋಗಿಗಳು ಒಂದೇ ದಿನದಲ್ಲಿ ಕೋಟ್ಯಧಿಪತಿಗಳಾಗಿ ಬದಲಾಗಿದ್ದು, ಇವರಲ್ಲಿ 70 ಉದ್ಯೋಗಿಗಳು ಕನಿಷ್ಠ 8.5 ಕೋಟಿ ರೂ. (1 ಮಿಲಿಯನ್ ಡಾಲರ್) ಪಡೆದುಕೊಂಡಿದ್ದು, ಮಿಲಿಯನೇರ್‌ಗಳಾಗಿ ರೂಪುಗೊಂಡಿದ್ದಾರೆ.
ಮೂಲಗಳ ಪ್ರಕಾರ ಅತಿ ದೊಡ್ಡ ಐಪಿಒಗಳಲ್ಲಿ ಒಂದಾದ ಸ್ವಿಗ್ಗಿ ಆಡಳಿತ ಮಂಡಳಿ ಸಂಸ್ಥೆ ಜೊತೆ ಸುದೀರ್ಘ ಕಾಲದಿಂದ ಗುರುತಿಸಿಕೊಂಡಿದ್ದ 5,000 ಉದ್ಯೋಗಿಗಳಿಗೆ 9,000 ಕೋಟಿ ರೂ. ಮೊತ್ತದ ಷೇರು ಹಂಚಿಕೆ ಮಾಡಿತ್ತು. ಇದೀಗ ಈ ಷೇರುಗಳೇ ಭಾರಿ ಲಾಭಾಂಶ ಕಂಡು ಈ 5 ಸಾವಿರ ಉದ್ಯೋಗಿಗಳ ಪೈಕಿ 500 ಮಂದಿ ಕೋಟ್ಯಾದಿಪತಿಗಳಾಗಿ ಬದಲಾಗಿದ್ದಾರೆ.
ಅಂತೆಯೇ ಐಪಿಒಗೆ ಮುನ್ನ ಕಳೆದ ತಿಂಗಳಷ್ಟೇ ಸ್ವಿಗ್ಗಿಯ ಸಹ ಸಂಸ್ಥಾಪಕ ಶ್ರೀಹರ್ಷ ಮಜೆಟಿ, ನಂದನ್ ರೆಡ್ಡಿ, ಫಾನಿ ಕಿಶನ್, ಫುಡ್ ಮಾರ್ಕೆಟ್‌ಪ್ಲೇಸ್ ಸಿಇಒ ರೋಹಿತ್ ಕಪೂರ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮುಖ್ಯಸ್ಥ ಅಮಿತೇಶ್ ಝಾ, ಸಿಎಫ್‌ಒ ರಾಹುಲ್ ಬೋಥ್ರಾ, ಎಚ್‌ಆರ್ ಮುಖ್ಯಸ್ಥ ಗಿರೀಶ್ ಮೆನನ್, ಸಿಟಿಒ ಮಧುಸೂದನ್ ರಾವ್ ಹಾಗೂ ಇತರರು 1,600 ಕೋಟಿ ರೂ. ಮೊತ್ತದ ಷೇರುಗಳನ್ನು ಸ್ವೀಕರಿಸಿದ್ದರು.
ಪಟ್ಟಿಯಾದ ಸ್ವಿಗ್ಗಿ ಐಪಿಒ
ಐಪಿಒದಲ್ಲಿ ಷೇರು ಹಂಚಿಕೆ ದರ 390 ರೂ.ಗೆ ಹೋಲಿಸಿದರೆ ಬುಧವಾರ ಎನ್‌ಎಸ್‌ಇನಲ್ಲಿ ಸ್ವಿಗ್ಗಿ ಷೇರುಗಳು ಶೇ. 7.69 ಪ್ರೀಮಿಯಂ ದರದಲ್ಲಿ ಲಿಸ್ಟ್ ಆಗಿದ್ದವು. ಎನ್‌ಎಸ್‌ಇನಲ್ಲಿ 420 ರೂ.ನಲ್ಲಿ ಲಿಸ್ಟ್ ಆಗಿದ್ದರೆ, ಬಿಎಸ್‌ಇನಲ್ಲಿ ಶೇ. 5.6ರಷ್ಟು ಪ್ರೀಮಿಯಂನೊಂದಿಗೆ 412 ರೂ.ನಲ್ಲಿ ಲಿಸ್ಟ್ ಆಗಿತ್ತು. ಆದರೆ, ಲಿಸ್ಟ್ ಆದ ಬಳಿಕವೂ ಷೇರು ಒಂದೇ ಸಮನೆ ಏರಿಕೆ ಕಂಡಿದೆ.
ಒಂದು ಹಂತದಲ್ಲಂತೂ ಷೇರು ಶೇ. 19ಕ್ಕಿಂತ ಹೆಚ್ಚು ಏರಿಕೆ ಕಂಡು 465.80 ರೂ.ಗೆ ತಲುಪಿತ್ತು. ಬಳಿಕ ದಿನದಂತ್ಯಕ್ಕೆ ಷೇರು 66 ರೂ. ಅಥವಾ ಶೇ. 16.92ರಷ್ಟು ಗಳಿಕೆಯೊಂದಿಗೆ 456ರಲ್ಲಿ ವಹಿವಾಟು ಮುಗಿಸಿತು. ಇದರಿಂದ ಐಪಿಒ ಹೂಡಿಕೆದಾರರು, ಇಎಸ್‌ಒಪಿ ಅಡಿಯಲ್ಲಿ ಕಂಪನಿಯಿಂದ ಷೇರು ಪಡೆದವರು ಭರ್ಜರಿ ಲಾಭ ಗಳಿಸಿದ್ದಾರೆ.
Advertisement