Indian Stock Market: ಸತತ 6ನೇ ದಿನವೂ ಷೇರುಮಾರುಕಟ್ಟೆ ಕುಸಿತ; ಮತ್ತೆ ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ನಷ್ಟ!
ಮುಂಬೈ: ಭಾರತೀಯ ಷೇರುಮಾರುಕಟ್ಟೆಯ ಕುಸಿತದ ಹಾದಿ ಸತತ 6ನೇ ದಿನವೂ ಮುಂದುವರೆದಿದ್ದು, ಇಂದು ಒಂದೇ ದಿನ ಹೂಡಿಕೆದಾರರ ಬರೊಬ್ಬರಿ 9 ಲಕ್ಷ ಕೋಟಿ ರೂ ನಷ್ಟವಾಗಿದೆ.
ಹೌದು.. ಕಳೆದೊಂದು ವಾರದಿಂದ ಕುಸಿತದ ಹಾದಿಯಲ್ಲಿ ಸಾಗಿರುವ ಭಾರತೀಯ ಷೇರುಮಾರುಕಟ್ಟೆ ವಾರದ ಆರಂಭಿಕ ದಿನ ಸೋಮವಾರವೂ ಕುಸಿತದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ. ಇಂದು ಸೆನ್ಸೆಕ್ಸ್ 638.45 ಅಂಕಗಳ ಕುಸಿತ ಕಂಡಿದ್ದು, ನಿಫ್ಟಿ ಕೂಡ 218.85 ಅಂಕಗಳ ಕುಸಿತ ಕಂಡಿದೆ.
ಇಂದು ದಿನದ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಚೇತೋಹಾರಿ ವಹಿವಾಟು ನಡೆಸಿತ್ತು. ಇಂದು ಸೆನ್ಸೆಕ್ಸ್ ದಿನದ ಗರಿಷ್ಠ ಮಟ್ಟ 82,137.77 ಅಂಕಗಳಿಗೆ ಏರಿತ್ತಾದರೂ ದಿನದ ವಹಿವಾಟು ಅಂತ್ಯದ ವೇಳೆಗೆ 638.45 ಅಂಕಗಳ ಕುಸಿತ ಕಂಡು, 81,050.00 ಅಂಕಗಳಿಗೆ ಕುಸಿದು ವಹಿವಾಟು ಅಂತ್ಯಗೊಳಿಸಿತು.
ಅಂತೆಯೇ ನಿಫ್ಟಿ ಕೂಡ ಇಂದು 25,084.10 ಅಂಕಗಳೊಂದಿಗೆ ವಹಿವಾಟು ಆರಂಭಿಸಿ ದಿನದ ಗರಿಷ್ಠ ಮಟ್ಟ 25,143.00ಕ್ಕೆ ತಲುಪಿತ್ತು. ಆದರೆ ದಿನದ ವಹಿವಾಟು ಅಂತ್ಯದ ವೇಳೆಗೆ 218.85 ಅಂಕಗಳ ಕುಸಿತ ಕಂಡು 24,795.75 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
ಇನ್ನು ಭಾರತೀಯ ಷೇರುಮಾರುಕಟ್ಟೆ ಕುಸಿತಕ್ಕೆ ಮಧ್ಯಪ್ರಾಚ್ಯದಲ್ಸಿನ ಸಂಘರ್ಷ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು, ಇದಲ್ಲದೆ ಚೀನಾ ಮಾರುಕಟ್ಟೆ ಚೇತೋಹಾರಿ ವಹಿವಾಟು ಕೂಡ ಭಾರತೀಯ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಹೂಡಿಕೆದಾರರು ಭಾರತೀಯ ಷೇರುಗಳನ್ನು ಮಾರಾಟ ಮಾಡಿ ಚೀನಾ ಮಾರುಕಟ್ಟೆ ಮೇಲೆ ಹೂಡಿಕೆ ಮಾಡುತ್ತಿರುವುದು ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಹೂಡಿಕೆದಾರರ 9 ಲಕ್ಷ ಕೋಟಿ ರೂ ನಷ್ಟ
ಇನ್ನು ಇಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತದ ಹಿನ್ನಲೆಯಲ್ಲಿ ಹೂಡಿಕೆದಾರರ ಬರೊಬ್ಬರಿ 9 ಲಕ್ಷ ಕೋಟಿ ರೂ ನಷ್ಟವಾಗಿದೆ. ಆ ಮೂಲಕ ಕಳೆದ 6 ದಿನಗಳಲ್ಲಿ ಹೂಡಿಕೆದಾರರ ಸುಮಾರು 26 ಲಕ್ಷ ಕೋಟಿ ರೂ ನಷ್ಟವಾದಂತಾಗಿದೆ. ಅಂತೆಯೇ ಬಾಂಬೇ ಸ್ಟಾಕ್ ಎಕ್ಸ್ ಚೇಂಜ್ ಲಿಸ್ಟೆಡ್ ಕಂಪನೆಗಳ ಹೂಡಿಕೆ ಮೊತ್ತ 452 ಲಕ್ಷ ಕೋಟಿಗೆ ಕುಸಿದಿದ್ದು, ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಈ ಮೊತ್ತ 461 ಲಕ್ಷ ಕೋಟಿಯಷ್ಟಿತ್ತು.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇನ್ನು ಇಂದಿನ ವಹಿವಾಟಿನಲ್ಲಿ ಬಹುತೇಕ ಎಲ್ಲ ವಲಯಗಳ ಷೇರುಗಳ ಮೌಲ್ಯ ಕುಸಿದಿದ್ದು, ಪ್ರಮುಖವಾಗಿ ಸೆನ್ಸೆಕ್ಸ್ ವಿಭಾಗದಲ್ಲಿ ITC, ಭಾರ್ತಿ ಏರ್ಟೆಲ್, ಮಹೀಂದ್ರ ಅಂಡ್ ಮಹೀಂದ್ರ, ಇನ್ಫೋಸಿಸ್, ಬಜಾಜ್ ಫೈನಾನ್ಸ್, TCS ಮತ್ತು ಟೆಕ್ ಮಹೀಂದ್ರ ಸಂಸ್ಥೆಯ ಷೇರುಗಳ ಮೌಲ್ಯ ಏರಿಕೆ ಕಂಡಿದ್ದು, ಅಂತೆಯೇ NTPC, SBI, ಪವರ್ ಗ್ರಿಡ್, ಇಂಡಸ್ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, HDFC ಬ್ಯಾಂಕ್, ಟೈಟಾನ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ರಿಲಯನ್ಸ್, JSW ಸ್ಟೀಲ್, ನೆಸ್ಲೆ, L&T, HUL, ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ