
ಮುಂಬೈ: ಭಾರತೀಯ ಷೇರುಮಾರುಕಟ್ಟೆ ಕುಸಿತ ದಾಖಲಿಸಿರುವಂತೆಯೇ ಮತ್ತೊಂದು ಹೀನಾಯ ದಾಖಲೆ ಸೃಷ್ಟಿಯಾಗಿದ್ದು, 2022 ಜೂನ್ ಬಳಿಕ ಮೊದಲ ಬಾರಿಗೆ ಈ ವಾರ ಅತಿದೊಡ್ಡ ಪತನ ಕಂಡಿದೆ.
ಹೌದು.. ಇಂದು ಅಂತ್ಯಗೊಂಡ ವಾರದ ಷೇರು ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (foreign institutional investors) ಹೆಚ್ಚಿನ ಷೇರುಗಳನ್ನು ಮಾರಾಟ ಮಾಡಿದ್ದು, ಇದು ಭಾರತೀಯ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿ ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆಯ ಪತನ ಕಂಡಿದೆ ಎಂದು ಹೇಳಲಾಗಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿನ್ನೆಯವರೆಗೂ 15,243 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಆದರೆ ಇಂದು ಒಂದೇ ದಿನ ಮತ್ತೆ 9,896.95 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದು, ಕಳೆದ ನಾಲ್ಕು ಸೆಷನ್ ಗಳಲ್ಲಿ ಹೂಡಿಕೆದಾರರು ಬರೊಬ್ಬರಿ 40,000 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎನ್ನಲಾಗಿದೆ.
ಪ್ರಮುಖವಾಗಿ ಮದ್ಯ ಪ್ರಾಚ್ಯದಲ್ಲಿನ ಸಂಘರ್ಷ ತೈಲ ಬೆಲೆಗಳ ತೀವ್ರ ಏರಿಕೆಗೆ ಕಾರಣವಾಗಿದ್ದು, ಜಾಗತಿಕ ಆರ್ಥಿಕತೆಗೆ ಹಣದುಬ್ಬರದ ಸವಾಲುಗಳನ್ನು ಒಡ್ಡುತ್ತಿದೆ. ಇದರ ನಡುವೆ ಚೀನಾ ಮತ್ತು ಹಾಂಗ್ ಕಾಂಗ್ ನಡುವಿನ ಸಮಸ್ಯೆ ಕೂಡ ಏಷ್ಯನ್ ಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮ ಬೀರುತ್ತಿದೆ. ಪರಿಣಾಮ ಈ ವಾರಾಂತ್ಯಕ್ಕೆ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.4.5ರಷ್ಟು ಕುಸಿತಗೊಂಡಿವೆ.
ಈ ಹಿಂದೆ ಅಂದರೆ 2022ರ ಜೂನ್ 6 ಮತ್ತು ಜೂನ್ 10 ನಡುವಿನಲ್ಲೂ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.5.6ರಷ್ಟು ಕುಸಿತವಾಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಷೇರುಮಾರುಕಟ್ಟೆಯ ಸೂಚ್ಯಂಕಗಳು ಈ ಪ್ರಮಾಣದಲ್ಲಿ ಕುಸಿದಿವೆ.
ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ ನಷ್ಟ
ಇನ್ನು ಈ ವಾರ ಹೂಡಿಕೆದಾರರಿಗೆ ಸುಮಾರು 17 ಲಕ್ಷ ಕೋಟಿ ರೂ ನಷ್ಟವಾಗಿದ್ದು, ಕಳೆದ ಶುಕ್ರವಾರದ ಮುಕ್ತಾಯದ ವೇಳೆಗೆ 478 ಲಕ್ಷ ಕೋಟಿ ರೂ.ಗಳಷ್ಟಿದ್ದ ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಬಂಡವಾಳವು ಈ ಶುಕ್ರವಾರ 461 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ.
ಚೀನಾದತ್ತ ಹೂಡಿಕೆದಾರರ ಚಿತ್ತ
ಇನ್ನು ಚೀನಾದ ಅಧಿಕಾರಿಗಳು ಜಾರಿಗೊಳಿಸುತ್ತಿರುವ ವಿತ್ತೀಯ ಮತ್ತು ಹಣಕಾಸಿನ ನೀತಿಗಳ ಪ್ರಚೋದನೆಯು ಚೀನಾದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಚೀನಾದ ಕಂಪನಿಗಳ ಗಳಿಕೆಯನ್ನು ಸುಧಾರಿಸುತ್ತದೆ ಎಂಬ ನಿರೀಕ್ಷೆಯ ಮೇಲೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು(FII)ಗಳು ಭಾರತದಿಂದ ಅಗ್ಗದ ಹಾಂಗ್ ಕಾಂಗ್ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ.
ಹೀಗಾಗಿ ಚೀನಾದ ಚೇತರಿಕೆಯ ಭರವಸೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಹೇಳಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ಕಳೆದ ಒಂದು ತಿಂಗಳಲ್ಲಿ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇ.30% ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಅಂತೆಯೇ ಶಾಂಘೈ ಕಾಂಪೋಸಿಟ್ ಸೂಚ್ಯಂಕವು ಕೇವಲ 5 ಅವಧಿಗಳಲ್ಲಿ ಶೇ.20% ಕ್ಕಿಂತ ಹೆಚ್ಚು ಏರಿಕೆಯಾಗಿದೆ.
ಈ ವಾರ ನಿಫ್ಟಿ ರಿಯಾಲ್ಟಿ ಸೂಚ್ಯಂಕವು ಸುಮಾರು ಶೇ. 8.7% ನಷ್ಟು ಕುಸಿತ ದಾಖಲಿಸಿದ್ದು, ಪ್ರಮುಖವಾಗಿ ರಿಯಲ್ ಎಸ್ಟೇಟ್ ಷೇರುಗಳು ಈ ವಾರ ಹೆಚ್ಚು ನಷ್ಟ ಅನುಭವಿಸಿವೆ. ಉಳಿದಂತೆ ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್ ವಲಯದ ಷೇರುಗಳು ಶೇ.6.2ರಷ್ಟು ಕುಸಿದರೆ, ನಿಫ್ಟಿ ಆಟೋ ವಲಯದ ಷೇರುಗಳು ಶೇ.5.7ರಷ್ಟು ಕುಸಿದಿದೆ. ಈ ವಾರ ನಿಫ್ಟಿ50 ಪ್ಯಾಕ್‌ನಲ್ಲಿ ಸುಮಾರು 42 ಷೇರುಗಳು ಕುಸಿತ ದಾಖಲಿಸಿವೆ.
ಅಂತೆಯೇ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಮೌಲ್ಯ ಶೇ. 9% ರಷ್ಟು ಕುಸಿದರೆ, HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ಸಂಸ್ಥೆಗಳ ಷೇರುಗಳ ಮೌಲ್ಯ ತಲಾ ಶೇ.5% ರಷ್ಟು ಕುಸಿದಿವೆ.
Advertisement