
ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಶುಕ್ರವಾರ ಅತೀದೊಡ್ಡ ರಕ್ತಪಾತವೇ ಸಂಭವಿಸಿದ್ದು, ನಿಫ್ಟಿ ಇತಿಹಾಸದಲ್ಲೇ ಭಾರಿ ಪ್ರಮಾಣದ ಕುಸಿತ ದಾಖಲಿಸಿದೆ.
ಹೌದು.. ಶುಕ್ರವಾರ ಭಾರತೀಯ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಷೇರುಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಪ್ರಮುಖವಾಗಿ ನಿಫ್ಟಿ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ಕುಸಿತ ಕಂಡಿದೆ
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.90ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ1.86ರಷ್ಟು ಇಳಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 1,414.33ಅಂಕಗಳ ಕುಸಿತದೊಂದಿಗೆ 73,198.10 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 420.35 ಅಂಕಗಳ ಇಳಿಕೆಯೊಂದಿಗೆ 22,124.70 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಭಾರತೀಯ ಷೇರು ಸೂಚ್ಯಂಕ ನಿಫ್ಟಿ ಫೆಬ್ರವರಿ ಅಂತ್ಯದಲ್ಲಿ ಸತತ ಐದನೇ ಮಾಸಿಕ ನಷ್ಟದೊಂದಿಗೆ ಕೊನೆಗೊಂಡಿದೆ.
ನಿಫ್ಟಿ ಇತಿಹಾಸದಲ್ಲೇ ಅತೀ ದೊಡ್ಡ ಕುಸಿತ
ಇನ್ನು ಭಾರತೀಯ ಷೇರುಮಾರುಕಟ್ಟೆಗೆ ನಿಫ್ಟಿ ಸೇರ್ಪಡೆಯಾದ ದಿನದಿಂದ ಈ ವರೆಗೂ ನಿಫ್ಟಿ ಸೂಚ್ಯಂಕದಲ್ಲಿ ಈ ಪ್ರಮಾಣದ ಕುಸಿತವಾಗಿರಲಿಲ್ಲ. ಈ ಮೂಲಕ ನಿಫ್ಟಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ತಿಂಗಳುಗಳವರೆಗೆ 6 ಬಾರಿ ದೀರ್ಘಕಾಲದ ಕುಸಿತ ಅನುಭವಿಸಿದ್ದು ಇದೇ ಮೊದಲಾಗಿದೆ. ಈ ಹಿಂದೆ ಸೆಪ್ಟೆಂಬರ್ 1994 ರಿಂದ ಏಪ್ರಿಲ್ 1995 ರವರೆಗೆ ಅತ್ಯಂತ ದೀರ್ಘಕಾಲದ ನಷ್ಟದ ಸರಣಿ ಸಂಭವಿಸಿತ್ತು. ಈ ಸಮಯದಲ್ಲಿ ಸೂಚ್ಯಂಕವು ಸತತ ಎಂಟು ತಿಂಗಳುಗಳಲ್ಲಿ 31.4% ರಷ್ಟು ಕುಸಿದಿತ್ತು. 1996 ರಲ್ಲಿ ಪ್ರಾರಂಭವಾದ ನಂತರದ ಅತಿ ದೀರ್ಘವಾದ ಕುಸಿತ ಇದಾಗಿದೆ ಎಂದು ಹೇಳಲಾಗಿದೆ.
93.65 ಲಕ್ಷ ಕೋಟಿ ನಷ್ಟ
ಇನ್ನು ಇಂದಿನ ವಹಿವಾಟಿನಿಂದ ಷೇರುಮಾರುಕಟ್ಟೆಯ ಹೂಡಿಕೆದಾರರಿಗೆ ಬರೊಬ್ಬರಿ 93.65 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ 27 ರಂದು ದಾಖಲಾಗಿದ್ದ 85,978.25 ರ ದಾಖಲೆಯ ಗರಿಷ್ಠ ಮಟ್ಟದಿಂದ, ಬಿಎಸ್ಇ ಸೂಚ್ಯಂಕ ಬರೊಬ್ಬರಿ 12,780.15 ಪಾಯಿಂಟ್ ಗಳು ಅಥವಾ ಶೇ.14.86 ಪ್ರತಿಶತ ಕುಸಿದಿದೆ. ನಿಫ್ಟಿ ಸೆಪ್ಟೆಂಬರ್ 27, 2024 ರಂದು ದಾಖಲಾಗಿದ್ದ 26,277.35 ರ ಜೀವಮಾನದ ಗರಿಷ್ಠ ಮಟ್ಟದಿಂದ 4,152.65 ಅಂಕಗಳು ಅಥವಾ 15.80 ಪ್ರತಿಶತದಷ್ಟು ಕುಸಿದಿದೆ.
ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟೆಕ್ ಮಹೀಂದ್ರ ಸಂಸ್ಛೆಯ ಷೇರುಮೌಲ್ಯ ಶೇಕಡಾ 6.19 ರಷ್ಟು ಕುಸಿದಿದ್ದು, ಇಂಡಸ್ ಇಂಡ್, ಎಂ ಅಂಡ್ ಎಂ, ಭಾರ್ತಿ ಏರ್ಟೆಲ್, ಇನ್ಫೋಸಿಸ್, ಟಾಟಾ ಮೋಟರ್ಸ್, ಟೈಟನ್, ನೆಸ್ಲೆ ಇಂಡಿಯಾ, ಟಿಸಿಎಸ್ ಮತ್ತು ಮಾರುತಿ ಸುಜುಕಿ ಸಂಸ್ಥೆಗಳ ಷೇರುಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದೆ.
Advertisement