

ಮುಂಬೈ: ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಗುರುವಾರವೂ ಷೇರುಮಾರುಕಟ್ಟೆ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಗುರುವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.83ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.93ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 609.87ಅಂಕಗಳ ಏರಿಕೆಯೊಂದಿಗೆ 74,340.09 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 207.40 ಅಂಕಗಳ ಏರಿಕೆಯೊಂದಿಗೆ 22,544.70 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
12 ಲಕ್ಷ ಕೋಟಿ ರೂ ಲಾಭ
ಇನ್ನು ಇಂದಿನ ವಹಿವಾಟಿನಲ್ಲಿ ಬಿಎಸ್‌ಇಯಲ್ಲಿ ಪಟ್ಟಿಯಾದ ಕಂಪನಿಗಳು ಮಾರುಕಟ್ಟೆ ಬಂಡವಾಳೀಕರಣದಲ್ಲಿ 12 ಲಕ್ಷ ಕೋಟಿಗೂ ಹೆಚ್ಚು ಸೇರ್ಪಡೆಯಾಗಿದೆ ಎಂದು ಮೂಲಗಳು ತಿಳಿಸಿಸಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಏಷ್ಯನ್ ಪೇಂಟ್ಸ್, ಎನ್‌ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್, ಹಿಂದೂಸ್ತಾನ್ ಯೂನಿಲಿವರ್, ಸನ್ ಫಾರ್ಮಾಸ್ಯುಟಿಕಲ್ಸ್, ಅದಾನಿ ಪೋರ್ಟ್ಸ್ & ಎಸ್‌ಇಝಡ್, ಆಕ್ಸಿಸ್ ಬ್ಯಾಂಕ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟೈಟಾನ್ ಮತ್ತು ಬಜಾಜ್ ಫೈನಾನ್ಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಟೆಕ್ ಮಹೀಂದ್ರಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಜೊಮಾಟೊ, ಟಾಟಾ ಮೋಟಾರ್ಸ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
ಉಳಿದಂತೆ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳ ಮೌಲ್ಯ 2% ಕ್ಕಿಂತ ಹೆಚ್ಚು ಏರಿಕೆ ಕಂಡರೆ, ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 70 ಡಾಲರ್ ಗಿಂತ ಕ್ಕಿಂತ ಕಡಿಮೆಯಾದ ಕಾರಣ ಬಣ್ಣ ಮತ್ತು ಟೈರ್ ಕಂಪನಿಗಳು ಸೇರಿದಂತೆ ಕಚ್ಚಾ ತೈಲ ಉತ್ಪನ್ನಗಳ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿವೆ. ಕಚ್ಚಾ ತೈಲ ಬೆಲೆಗಳ ಕುಸಿತದಿಂದಾಗಿ ತೈಲ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ 3-4% ರಷ್ಟು ಏರಿಕೆಯಾಯಿತು.
Advertisement