

ನವದೆಹಲಿ: ಆಪಲ್ ಐಫೋನ್‌ಗಳ ಭಾರೀ ರಫ್ತಿನ ಬೆನ್ನಲ್ಲೇ 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್–ಜೂನ್) ಭಾರತದ ಸ್ಮಾರ್ಟ್‌ಫೋನ್ ಗಳ ರಫ್ತು ದಾಖಲೆಯ ಮಟ್ಟಕ್ಕೆ ಏರಿದೆ.
ಈ ಅವಧಿಯಲ್ಲಿ ಸ್ಮಾರ್ಟ್‌ಫೋನ್ ರಫ್ತು ಮೌಲ್ಯ 9.84 ಬಿಲಿಯನ್ ಡಾಲರ್ ತಲುಪಿದ್ದು, ದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲಾಗಿದೆ.
ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 7.97 ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್‌ಗಳು ರಫ್ತಾಗಿದ್ದರೆ, ಈ ಬಾರಿ ಅದು ಶೇ.23.4 ರಷ್ಟು ಏರಿಕೆ ಕಂಡಿದೆ. ಭಾರತದಲ್ಲಿ ತಯಾರಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಿಗೆ ಅಮೆರಿಕದಲ್ಲಿ ಭಾರೀ ಬೇಡಿಕೆ ಮುಂದುವರಿದಿದ್ದು, ಅಮೆರಿಕವೇ ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿ ಉಳಿದಿದೆ.
ಎಲೆಕ್ಟ್ರಾನಿಕ್ಸ್ ರಫ್ತಿನಲ್ಲೂ ಸ್ಮಾರ್ಟ್‌ಫೋನ್‌ಗಳ ಮೇಲುಗೈ
ಏಪ್ರಿಲ್–ಜೂನ್ ಅವಧಿಯಲ್ಲಿ ಭಾರತದ ಒಟ್ಟು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ರಫ್ತು 15.2 ಬಿಲಿಯನ್ ಡಾಲರ್ ಆಗಿದ್ದು, ಇದರಲ್ಲಿ 64.8 ಶೇಕಡಾ ಪಾಲು ಸ್ಮಾರ್ಟ್‌ಫೋನ್‌ಗಳದ್ದಾಗಿದೆ. ಇದರಿಂದ ದೇಶದ ಎಲೆಕ್ಟ್ರಾನಿಕ್ಸ್ ರಫ್ತಿಗೆ ಸ್ಮಾರ್ಟ್‌ಫೋನ್ ಉದ್ಯಮವೇ ಪ್ರಮುಖ ಚಾಲಕ ಎಂಬುದು ಸ್ಪಷ್ಟವಾಗಿದೆ.
'ಮೇಕ್ ಇನ್ ಇಂಡಿಯಾ'ಗೆ ಜಾಗತಿಕ ಮನ್ನಣೆ
ಇತ್ತೀಚಿನ ವರದಿಯ ಪ್ರಕಾರ, 2025ರಲ್ಲಿ ಭಾರತದಲ್ಲಿ ತಯಾರಾದ ('Made in India') ಸ್ಮಾರ್ಟ್‌ಫೋನ್‌ಗಳ ಸಾಗಣೆ 8 ಶೇಕಡಾ ಹೆಚ್ಚಳ ಕಂಡಿದ್ದು, ರಫ್ತು ಮಾತ್ರ 28 ಶೇಕಡಾ ಏರಿಕೆಯಾಗಿದೆ. ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಸ್ಮಾರ್ಟ್‌ಫೋನ್‌ಗಳಲ್ಲಿ ಸುಮಾರು ಮೂರನೇ ಒಂದು ಭಾಗ ರಫ್ತಾಗುತ್ತಿದೆ.
ಐಫೋನ್ ರಫ್ತೇ ಬೆಳವಣಿಗೆಯ ಪ್ರಮುಖ ಶಕ್ತಿ
ಆಪಲ್‌ನ ಉತ್ಪಾದನಾ ಪಾಲುದಾರ ಸಂಸ್ಥೆಗಳಾದ ಫಾಕ್ಸ್‌ಕಾನ್ (Foxconn) ಮತ್ತು ಸ್ಯಾಮ್‌ಸಂಗ್ ಭಾರತದ ರಫ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಫಾಕ್ಸ್‌ಕಾನ್‌ನ ರಫ್ತು 2025ರಲ್ಲಿ 48 ಶೇಕಡಾ ಏರಿಕೆಯಾಗಿದೆ. ಸ್ಯಾಮ್‌ಸಂಗ್‌ನ ರಫ್ತು ಕೊಡುಗೆ 4 ಶೇಕಡಾ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ಭಾರತದಲ್ಲಿ ತಯಾರಾದ ಐಫೋನ್‌ಗಳಿಗೆ ವಿದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯಾಗಿದೆ.
2 ಲಕ್ಷ ಕೋಟಿ ರೂ ಮೌಲ್ಯದ ಐಫೋನ್ ರಫ್ತು
2025-26ನೇ ಹಣಕಾಸು ವರ್ಷದಲ್ಲಿ ಭಾರತದ ಐಫೋನ್ ರಫ್ತು ₹2 ಲಕ್ಷ ಕೋಟಿ ಮೌಲ್ಯ ತಲುಪಿದ್ದು, ಎಲ್ಲಾ ಉತ್ಪನ್ನ ವರ್ಗಗಳಲ್ಲಿ ಆಪಲ್ ದೇಶದ ಅತಿದೊಡ್ಡ ಬ್ರಾಂಡೆಡ್ ರಫ್ತುದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಾರೆ, ಆ ವರ್ಷ ಭಾರತದಿಂದ ಸುಮಾರು 2.6 ಲಕ್ಷ ಕೋಟಿ ರೂ (29.4 ಬಿಲಿಯನ್ ಡಾಲರ್) ಮೌಲ್ಯದ ಸ್ಮಾರ್ಟ್‌ಫೋನ್‌ಗಳು ರಫ್ತಾಗಿದ್ದು, ಅದರಲ್ಲಿ 75 ಶೇಕಡಕ್ಕಿಂತ ಹೆಚ್ಚು (ಸುಮಾರು 22 ಬಿಲಿಯನ್ ಡಾಲರ್) ಪಾಲು ಐಫೋನ್‌ಗಳದ್ದಾಗಿತ್ತು.
ಪಿಎಲ್‌ಐ ಯೋಜನೆಯಿಂದ ವೇಗ
ಕೇಂದ್ರ ಸರ್ಕಾರದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ, ವಿಶೇಷ ಆರ್ಥಿಕ ವಲಯಗಳ (SEZ) ಸುಧಾರಣೆ, ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಹೆಚ್ಚಿದ ಬಜೆಟ್ ಬೆಂಬಲ ಹಾಗೂ ವಿದೇಶಿ ನೇರ ಹೂಡಿಕೆ (FDI) ನಿಯಮಗಳಲ್ಲಿ ಸಡಿಲಿಕೆ ನೀಡಿರುವುದು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.