

ಮುಂಬೈ: ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿರುವ ಮಧ್ಯಪ್ರಾಚ್ಯ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಹಣದುಬ್ಬರದ ಮೇಲಿನ ಆತಂಕದ ನಡುವೆಯೂ, ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಜನತೆಗೆ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ.
2026-27ನೇ ಹಣಕಾಸು ವರ್ಷದ ಎರಡನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿಯು (MPC) ಸತತ ಎರಡನೇ ಬಾರಿಗೆ ಪ್ರಮುಖ ರೆಪೋ ದರವನ್ನು ಯಾವುದೇ ಬದಲಾವಣೆಯಿಲ್ಲದೆ ಶೇ. 5.25 ರಲ್ಲೇ ಸ್ಥಿರವಾಗಿಡಲು ಏಕಗ್ರೀವ ನಿರ್ಧಾರ ಕೈಗೊಂಡಿದೆ. ಜೊತೆಗೆ, ‘ನ್ಯೂಟ್ರಲ್’ ನೀತಿ ನಿಲುವನ್ನೂ ಮುಂದುವರಿಸಲಾಗಿದೆ.
ಕಳೆದ ಮೂರು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ ಜಾಗತಿಕ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಿದ್ದು, ಕಚ್ಚಾ ತೈಲದ ಬೆಲೆ ಏರಿಕೆಗೆ ಕಾರಣವಾಗಿದೆ. ಇದರಿಂದ ಭಾರತ ಸೇರಿದಂತೆ ತೈಲ ಆಮದು ಅವಲಂಬಿತ ರಾಷ್ಟ್ರಗಳಲ್ಲಿ ಹಣದುಬ್ಬರದ ಆತಂಕ ಹೆಚ್ಚಾಗಿದೆ.
ಏಪ್ರಿಲ್ ತಿಂಗಳಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರ ಶೇಕಡಾ 3.48ಕ್ಕೆ ಇಳಿದು, ಆರ್‌ಬಿಐ ನಿಗದಿಪಡಿಸಿರುವ ಶೇಕಡಾ 4ರ ಗುರಿಯ ಸಮೀಪ ತಲುಪಿದ್ದರೂ, ಮುಂದಿನ ದಿನಗಳಲ್ಲಿ ಹಣದುಬ್ಬರ ಏರಿಕೆಯಾಗುವ ಅಪಾಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆಯಿಂದಿದೆ.
ದುರ್ಬಲ ಮುಂಗಾರು, ಇಂಧನ ಬೆಲೆ ಏರಿಕೆ ಹಾಗೂ ಪೂರೈಕೆ ಸರಪಳಿ ವ್ಯತ್ಯಯಗಳು ಮುಂದಿನ ತಿಂಗಳುಗಳಲ್ಲಿ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ಆರ್‌ಬಿಐ ಅಂದಾಜಿಸಿದೆ.
ಇದರ ಜೊತೆಗೆ ರೂಪಾಯಿ ಮೌಲ್ಯದ ಕುಸಿತವೂ ಆರ್‌ಬಿಐಗೆ ಕಳವಳ ಮೂಡಿಸಿದೆ. 2026ರ ಮೇ 20ರಂದು ಅಮೆರಿಕನ್ ಡಾಲರ್ ಎದುರು ರೂಪಾಯಿ 96.86 ಎಂಬ ದಾಖಲೆಯ ಕನಿಷ್ಠ ಮಟ್ಟದಲ್ಲಿ ವಹಿವಾಟು ಮುಗಿಸಿತ್ತು. ತೈಲ ಬೆಲೆ ಏರಿಕೆ, ಬಂಡವಾಳ ಹೊರಹರಿವು, ವ್ಯಾಪಾರ ಕೊರತೆ ಹಾಗೂ ಡಾಲರ್ ಬಲಿಷ್ಠವಾಗಿರುವುದು ರೂಪಾಯಿ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.
ಈ ವರ್ಷ ಇದೂವರೆಗೆ ರೂಪಾಯಿ ಸುಮಾರು 7 ಶೇಕಡಾ ಮೌಲ್ಯ ಕಳೆದುಕೊಂಡಿದ್ದು, ಫೆಬ್ರವರಿಯಲ್ಲಿ ಇರಾನ್ ಸಂಘರ್ಷ ತೀವ್ರಗೊಂಡ ಬಳಿಕ ಸುಮಾರು 6 ಶೇಕಡಾ ಕುಸಿದಿದೆ.
ಹಣದುಬ್ಬರ ತಗ್ಗಿದ ಹಿನ್ನೆಲೆಯಲ್ಲಿ ಆರ್‌ಬಿಐ 2025ರ ಡಿಸೆಂಬರ್, 2026ರ ಫೆಬ್ರವರಿ ಹಾಗೂ ಏಪ್ರಿಲ್ ತಿಂಗಳಲ್ಲಿ ತಲಾ 25 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೊ ದರ ಕಡಿತ ಮಾಡಿತ್ತು. ನಂತರ ಜೂನ್‌ನಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ದೊಡ್ಡ ಪ್ರಮಾಣದ ಕಡಿತವನ್ನೂ ಘೋಷಿಸಿತ್ತು.
ಭಾರತದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ 2025 ರಲ್ಲಿ ಐತಿಹಾಸಿಕ ಕನಿಷ್ಠ 0.25 ಪ್ರತಿಶತಕ್ಕೆ ಇಳಿದಿತ್ತು, ಇದು ಪ್ರಸ್ತುತ ಸಿಪಿಐ ಸರಣಿ ಪ್ರಾರಂಭವಾದ ನಂತರದ ಕನಿಷ್ಠ ಮಟ್ಟದ್ದಾಗಿದೆ.
Advertisement