

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI)ಕೇಂದ್ರ ಸರ್ಕಾರಕ್ಕೆ ಶುಕ್ರವಾರ 2025-26 ಹಣಕಾಸು ವರ್ಷದ ಲಾಭಾಂಶ ನೀಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ₹2.87 ಲಕ್ಷ ಕೋಟಿ ರೂಗಳ ಡಿವಿಡೆಂಡ್ ಘೋಷಣೆ ಮಾಡಿದೆ.
ಜಾಗತಿಕ ಭೌಗೋಳಿಕ-ರಾಜಕೀಯ ಸವಾಲುಗಳ ನಡುವೆಯೂ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಅವಕಾಶ ಮತ್ತು ಹಣಕಾಸು ಸಡಿಲಿಕೆ ಒದಗಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
2024-25 ಹಣಕಾಸು ವರ್ಷದ ಲಾಭಾಂಶ ಅಥವಾ ಅಧಿಕ ಮೊತ್ತ ವರ್ಗಾವಣೆ ₹2.69 ಲಕ್ಷ ಕೋಟಿ ಆಗಿದ್ದು, ಇದು 2023-24ರ ಪಾವತಿಗಿಂತ ಶೇಕಡಾ 27.4ರಷ್ಟು ಹೆಚ್ಚು ಆಗಿದೆ.
ಇದಕ್ಕೂ ಮೊದಲು RBI, 2023-24 ಹಣಕಾಸು ವರ್ಷಕ್ಕೆ ಸರ್ಕಾರಕ್ಕೆ ₹2.1 ಲಕ್ಷ ಕೋಟಿ ಡಿವಿಡೆಂಡ್ ವರ್ಗಾಯಿಸಿತ್ತು. ಅಂತೆಯೇ 2022-23ರಲ್ಲಿ ಈ ಮೊತ್ತ ₹87,416 ಕೋಟಿ ಆಗಿತ್ತು.
ಈ ಡಿವಿಡೆಂಡ್ ಪಾವತಿ ಕುರಿತ ನಿರ್ಧಾರವನ್ನು RBI ಗವರ್ನರ್ ಸಂಜಯ್ ಮಲ್ಹೋತ್ರಾ (Sanjay Malhotra) ಅವರ ಅಧ್ಯಕ್ಷತೆಯಲ್ಲಿ ನಡೆದ RBI ಕೇಂದ್ರ ನಿರ್ದೇಶಕ ಮಂಡಳಿಯ 623ನೇ ಸಭೆಯಲ್ಲಿ ಕೈಗೊಳ್ಳಲಾಯಿತು.
RBI ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, “ಅಪಾಯ ಮೀಸಲು ಮತ್ತು ಕಾನೂನುಬದ್ಧ ನಿಧಿಗಳಿಗೆ ವರ್ಗಾವಣೆಗೆ ಮುನ್ನದ ನಿವ್ವಳ ಆದಾಯವು 2025-26 ಹಣಕಾಸು ವರ್ಷದಲ್ಲಿ ₹3,95,972.10 ಕೋಟಿಗೆ ಏರಿಕೆಯಾಗಿದೆ. ಇದು 2024-25ರಲ್ಲಿ ದಾಖಲಾಗಿದ್ದ ₹3,13,455.77 ಕೋಟಿಯೊಂದಿಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ' ಎಂದು ಹೇಳಿದೆ.
ಇದೇ ವೇಳೆ, ಕೇಂದ್ರ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ಕೂಡ ಮಹತ್ತರವಾಗಿ ವಿಸ್ತರಗೊಂಡಿದ್ದು, 2026ರ ಮಾರ್ಚ್ 31ರ ವೇಳೆಗೆ ಅದು 20.61 ಶೇಕಡಾ ಏರಿಕೆಯೊಂದಿಗೆ ₹91,97,121.08 ಕೋಟಿಗೆ ತಲುಪಿದೆ ಎಂದು ಆರ್ ಬಿಐ ಮೂಲಗಳು ತಿಳಿಸಿವೆ.
Advertisement