Warranty vs Guarantee: ಹೊಸ ಮೊಬೈಲ್, ಫ್ರಿಡ್ಜ್, ಟಿವಿ ಖರೀದಿಸುವಾಗ ಅಂಗಡಿಯವರು ಒಂದು ವರ್ಷ ವಾರಂಟಿ ಇದೆ, ಗ್ಯಾರಂಟಿ ಇದೆ ಎಂದು ಹೇಳುತ್ತಾರೆ. ಆದರೆ ಈ ಎರಡು ಪದಗಳ ಅರ್ಥ ಒಂದೇ ಅಲ್ಲ. ಅನೇಕ ಜನರು ಇವೆರಡನ್ನೂ ಒಂದೇ ಎಂದು ತಿಳಿದುಕೊಂಡು ಖರೀದಿ ಮಾಡುತ್ತಿದ್ದಾರೆ. ಆದರೆ, ನಂತರ ವಸ್ತು ಹಾಳಾದಾಗ ಬದಲಾಯಿಸಿಕೊಡಬೇಕೆಂದು ಕೇಳಿದರೆ ಅಂಗಡಿಯವರು ರಿಪೇರಿ ಮಾತ್ರ ಮಾಡಿಕೊಡುತ್ತೇವೆ ಎನ್ನುತ್ತಾರೆ. ಹೀಗಾಗದಂತೆ ತಡೆಯಲು ವಾರಂಟಿ ಮತ್ತು ಗ್ಯಾರಂಟಿ ನಡುವಿನ ವ್ಯತ್ಯಾಸವನ್ನು ಮೊದಲೇ ತಿಳಿದುಕೊಳ್ಳುವುದು ಬಹಳ ಮುಖ್ಯ. ಆ ಕುರಿತ ವರದಿ ಇಲ್ಲಿದೆ:
ವಾರಂಟಿ ಅಂದ್ರೆ ಏನು?
ವಾರಂಟಿ ಎಂದರೆ ಕಂಪನಿ ನೀಡುವ ಲಿಖಿತ ಭರವಸೆ. ನೀವು ಕೊಂಡ ವಸ್ತು ನಿರ್ದಿಷ್ಟ ಅವಧಿಯಲ್ಲಿ ಹಾಳಾದರೆ ಕಂಪನಿ ಉಚಿತವಾಗಿ ರಿಪೇರಿ ಮಾಡಿಕೊಡುತ್ತದೆ ಅಥವಾ ಬಿಡಿಭಾಗ ಬದಲಿಸಿಕೊಡುತ್ತದೆ. ಉದಾಹರಣೆಗೆ ಮೊಬೈಲ್ ಗೆ 1 ವರ್ಷ ವಾರಂಟಿ ಅಂದರೆ ಆ 1 ವರ್ಷದಲ್ಲಿ ತಯಾರಿ ದೋಷದಿಂದ ಹಾಳಾದರೆ ಕಂಪನಿಯೇ ಸರಿಪಡಿಸಬೇಕು. ಆದರೆ ನೀವು ಬೀಳಿಸಿ ಒಡೆದರೆ, ನೀರಿನಲ್ಲಿ ಬಿದ್ದರೆ ವಾರಂಟಿ ಸಿಗುವುದಿಲ್ಲ. ವಾರಂಟಿ ಸಾಮಾನ್ಯವಾಗಿ ಉತ್ಪನ್ನದ ಮೇಲೆ ಇರುತ್ತದೆ.
ಗ್ಯಾರಂಟಿ ಅಂದ್ರೆ ಏನು?
ಗ್ಯಾರಂಟಿ ಎಂದರೆ ವಸ್ತುವಿನ ಗುಣಮಟ್ಟ ಅಥವಾ ಕಾರ್ಯಕ್ಷಮತೆ ಬಗ್ಗೆ ನೀಡುವ ಭರವಸೆ. ಉದಾಹರಣೆಗೆ ಈ ಬ್ಯಾಟರಿ 5 ವರ್ಷ ಬಾಳಿಕೆ ಬರುತ್ತದೆ ಎಂದು ಗ್ಯಾರಂಟಿ ಕೊಟ್ಟರೆ ಆ ಅವಧಿಯಲ್ಲಿ ಅದು ಕೆಲಸ ಮಾಡದಿದ್ದರೆ ಕಂಪನಿ ಹೊಸದನ್ನು ಕೊಡಬೇಕು ಅಥವಾ ಹಣ ವಾಪಸ್ ಕೊಡಬೇಕು. ಗ್ಯಾರಂಟಿ ಹೆಚ್ಚಾಗಿ ಸೇವೆ ಅಥವಾ ಫಲಿತಾಂಶದ ಮೇಲೆ ಇರುತ್ತದೆ. ಗ್ಯಾರಂಟಿ ಬಾಯಿ ಮಾತಿನಲ್ಲೂ ಇರಬಹುದು ಆದರೆ ಲಿಖಿತವಾಗಿ ಇದ್ದರೆ ಮಾತ್ರ ಕಾನೂನು ಹೋರಾಟಕ್ಕೆ ಅನುಕೂಲ.
ಹಾಗಾದ್ರೆ, ಇವೆರಡರ ನಡುವಿನ ಮುಖ್ಯ ವ್ಯತ್ಯಾಸವೇನು?
ವಾರಂಟಿ ರಿಪೇರಿಗೆ ಸಂಬಂಧಿಸಿದ್ದು, ಗ್ಯಾರಂಟಿ ಬದಲಾವಣೆ ಅಥವಾ ಹಣ ವಾಪಸ್ ಗೆ ಸಂಬಂಧಿಸಿದ್ದು. ವಾರಂಟಿ ಅವಧಿಯಲ್ಲಿ ನೀವು ಕಂಪನಿಯ ಸರ್ವಿಸ್ ಸೆಂಟರ್ ಗೆ ಹೋಗಬೇಕು. ಗ್ಯಾರಂಟಿಯಲ್ಲಿ ಮಾರಾಟಗಾರನೇ ಜವಾಬ್ದಾರನಾಗುತ್ತಾನೆ. ವಾರಂಟಿ ಸಾಮಾನ್ಯವಾಗಿ 1 ರಿಂದ 5 ವರ್ಷ ಇರುತ್ತದೆ. ಗ್ಯಾರಂಟಿ ಉತ್ಪನ್ನವನ್ನು ಅವಲಂಬಿಸಿ ದೀರ್ಘಾವಧಿಯವರೆಗೆ ಇರಬಹುದು. ಗ್ಯಾರಂಟಿ ಮುರಿದರೆ ಗ್ರಾಹಕ ನ್ಯಾಯಾಲಯಕ್ಕೆ ಹೋಗಬಹುದು.
ಖರೀದಿಸುವಾಗ ಏನು ಮಾಡಬೇಕು?
ವಸ್ತು ಕೊಂಡುಕೊಳ್ಳುವಾಗ ವಾರಂಟಿ ಕಾರ್ಡ್ ತೆಗೆದುಕೊಳ್ಳಿ, ಅದರಲ್ಲಿ ಏನೇನು ಕವರ್ ಆಗುತ್ತದೆ, ಏನಾಗುವುದಿಲ್ಲ ಎಂದು ಓದಿ. ಬಾಯಿ ಮಾತಿನ ಗ್ಯಾರಂಟಿಯನ್ನು ನಂಬಬೇಡಿ, ಬಿಲ್ ಮೇಲೆ ಬರೆಸಿಕೊಳ್ಳಿ. ಆನ್ ಲೈನ್ ನಲ್ಲಿ ಕೊಂಡರೆ ವಾರಂಟಿ ನಿಯಮಗಳನ್ನು ಸ್ಕ್ರೀನ್ ಶಾಟ್ ತೆಗೆದಿಡಿ.