

ಮುಂಬೈ: ಸತತವಾಗಿ ಕುಸಿಯುತ್ತಿರುವ ಭಾರತೀಯ ಷೇರುಮಾರುಕಟ್ಟೆ ಗುರುವಾರವೂ ಭಾರಿ ಪ್ರಮಾಣದ ಇಳಿಕೆ ಕಂಡಿದ್ದು, ಇಂದು ಒಂದೇ ದಿನ ಸೆನ್ಸೆಕ್ಸ್ ಬರೊಬ್ಬರಿ 1,045 ಅಂಕ ಕುಸಿತ ಕಂಡಿದೆ.
ಹೌದು.. ಇಂದು ಕೂಡ ಭಾರತೀಯ ಷೇರುಮಾರುಕಟ್ಟೆ ಭಾರಿ ಪ್ರಮಾಣದ ಕುಸಿತವಾಗಿದ್ದು, ಷೇರುಮಾರುಕಟ್ಟೆ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿವೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.44ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.64ರಷ್ಟು ಕುಸಿತ ದಾಖಲಿಸಿದೆ.
ಸೆನ್ಸೆಕ್ಸ್ ಇಂದು 1,045.46ಅಂಕಗಳ ಕುಸಿತದೊಂದಿಗೆ 71,593.24 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 371.25 ಅಂಕಗಳ ಇಳಿಕೆಯೊಂದಿಗೆ 22,231.80 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಕುಸಿತಕ್ಕೆ ಕಾರಣ
ಷೇರುಪೇಟೆಯಲ್ಲಿನ ಈ ಕುಸಿತಕ್ಕೆ ಹಲವು ಅಂಶಗಳು ಕಾರಣವಾಗಿವೆ. ಒಂದು ದಿನದ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ನೀತಿ ನಿಲುವನ್ನು ‘ತಟಸ್ಥ’ದಿಂದ ‘ಮಿತವಾದ ಬಿಗಿಗೊಳಿಸುವಿಕೆ’ (Calibrated Tightening) ಕಡೆಗೆ ಬದಲಿಸಿತ್ತು. ಇದೂ ಹೂಡಿಕೆದಾರರ ಭಾವನೆ ಮೇಲೆ ಪರಿಣಾಮ ಬೀರಿದೆ.
ಇದರ ಜೊತೆಗೆ ಮಧ್ಯಪ್ರಾಚ್ಯದಲ್ಲಿ ಪೂರೈಕೆ ಕುರಿತ ಆತಂಕ ಮುಂದುವರಿದಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಯೂ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.3.9ರಷ್ಟು ಏರಿಕೆ ಕಂಡು ದಿನದ ಗರಿಷ್ಠ ಮಟ್ಟವಾದ ಬ್ಯಾರೆಲ್‌ಗೆ 104.09 ಡಾಲರ್‌ಗೆ ತಲುಪಿದೆ.
ಕಚ್ಚಾ ತೈಲ ಬೆಲೆ ಏರಿಕೆ, ಆರ್‌ಬಿಐ ನೀತಿ ನಿಲುವಿನ ಬದಲಾವಣೆ ಹಾಗೂ ಮಾರುಕಟ್ಟೆಯಲ್ಲಿನ ಮಾರಾಟದ ಒತ್ತಡ ಹೂಡಿಕೆದಾರರ ಆತಂಕವನ್ನು ಹೆಚ್ಚಿಸಿದ್ದು, ಪ್ರಮುಖ ಸೂಚ್ಯಂಕಗಳು ಭಾರೀ ಕುಸಿತದೊಂದಿಗೆ ವಹಿವಾಟು ಮುಗಿಸಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟೈಟನ್, ಟ್ರೆಂಟ್, ಟಿಸಿಎಸ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಕೋಟಕ್ ಬ್ಯಾಂಕ್, ಎಸ್ ಬಿಐಎನ್, ಹಿಂದೂಸ್ತಾನ್ ಯೂನಿಲಿವರ್, ಎಚ್ ಡಿಎಫ್ ಸಿ ಬ್ಯಾಂಕ್, ಸನ್ ಫಾರ್ಮಾ, ಅಲ್ಟ್ರಾ ಸಿಮೆಂಟ್, ಭಾರ್ತಿ ಏರ್ಟೆಲ್, ಟಾಟಾ ಸ್ಟೀಲ್, ಏಷ್ಯನ್ ಪೇಯಿಂಟ್ಸ್, ಮಹೀಂದ್ರ ಅಂಡ್ ಮಹೀಂದ್ರ, ಎನ್ ಟಿಪಿಸಿ, ಮಾರುತಿ, ಎಲ್ ಅಂಡ್ ಟಿ, ಎಟರ್ನಲ್, ರಿಲಯನ್ಸ್, ಪವರ್ ಗ್ರಿಡ್, ಬಿಇಎಲ್, ಇಂಡಿಗೋ, ಅದಾನಿ ಪೋರ್ಟ್ಸ್ ಮತ್ತು ಐಟಿಸಿ ಸಂಸ್ಥೆಯ ಷೇರುಗಳ ಮೌಲ್ಯ ಕುಸಿದಿದೆ.
ಉಳಿದಂತೆ ಇನ್ಫೋಸಿಸ್, ಟೆಕ್ ಮಹೀಂದ್ರ, ಹೆಚ್ ಸಿಎಲ್ ಟೆಕ್ ಮತ್ತು ಎಕ್ಸಿಸ್ ಬ್ಯಾಂಕ್ ಸಂಸ್ಥೆಯ ಷೇರುಗಳು ಮಾತ್ರ ಲಾಭಾಂಶ ಕಂಡಿವೆ.
ಹೂಡಿಕೆದಾರರಿಗೆ ಒಂದೇ ದಿನ 10 ಲಕ್ಷ ಕೋಟಿ ರೂ ನಷ್ಟ
ಷೇರು ಮಾರುಕಟ್ಟೆ ಕುಸಿತ: ಬುಧವಾರದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್‌ನ ಎಲ್ಲ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣ 4,70,98,931 ಕೋಟಿಯಷ್ಟಿತ್ತು.
ಗುರುವಾರದ ವಹಿವಾಟಿನ ಅಂತ್ಯಕ್ಕೆ ಇದು 4,60,97,839 ಕೋಟಿ ರೂಗೆ ಕುಸಿದಿದೆ. ಇದರ ಪರಿಣಾಮ ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು ಸುಮಾರು 10.01 ಲಕ್ಷ ಕೋಟಿ ರೂ ಕಡಿಮೆಯಾಗಿದೆ.