

Canara Bank: ನೀವು ಕೆನರಾ ಬ್ಯಾಂಕ್ ಖಾತೆ ಹೊಂದಿದ್ದೀರಾ? ಹಾಗಿದ್ದರೆ ಇನ್ಮುಂದೆ ಎಟಿಎಂಗೆ ಹೋಗುವ ಮುನ್ನ ಈ ಮಹತ್ವದ ಬದಲಾವಣೆಯನ್ನು ನೀವು ತಿಳಿದುಕೊಳ್ಳಲೇಬೇಕು. ಯಾಕಂದ್ರೆ, ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರಿಗೆ ನೇರ ಹೊಡೆತ ನೀಡುವಂತಹ ಮಹತ್ವದ ನಿರ್ಧಾರವೊಂದನ್ನು ಕೆನರಾ ಬ್ಯಾಂಕ್ ಜಾರಿಗೆ ತಂದಿದೆ. ಹೌದು, ಇಷ್ಟು ದಿನ ಸಲೀಸಾಗಿ ಬಳಸುತ್ತಿದ್ದ ಎಟಿಎಂ ಉಚಿತ ವಹಿವಾಟುಗಳಿಗೆ ಈಗ ಕತ್ತರಿ ಬಿದ್ದಿದ್ದು, ನಿಯಮ ಮೀರಿದರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.! ಅಷ್ಟೇ ಅಲ್ಲ, ಖಾತೆಯಲ್ಲಿ ಹಣವಿಲ್ಲದೆ ಕಾರ್ಡ್ ಸ್ವೈಪ್ ಮಾಡಿದರೂ ದಂಡ ತೆರಬೇಕಾಗುತ್ತದೆ. ಹಾಗಾದರೆ ಸೆಪ್ಟೆಂಬರ್ 1, 2026 ರಿಂದಲೇ ಜಾರಿಗೆ ಬಂದಿರುವ ಹೊಸ ನಿಯಮಗಳೇನು? ಯಾರಿಗೆ ನಷ್ಟ, ಯಾರಿಗೆ ಲಾಭ? ಇಲ್ಲಿದೆ ಆ ಕುರಿತ ಸಂಪೂರ್ಣ ಮಾಹಿತಿ.
ಉಚಿತ ಎಟಿಎಂ ವಹಿವಾಟುಗಳ ಮಿತಿ ಕಡಿತ
ಸಾಮಾನ್ಯ ಗ್ರಾಹಕರಿಗೆ: ಇದುವರೆಗೆ ಕೆನರಾ ಬ್ಯಾಂಕ್ ಎಟಿಎಂಗಳಲ್ಲಿ ಲಭ್ಯವಿದ್ದ ತಿಂಗಳ ಉಚಿತ ವಹಿವಾಟುಗಳ (ಹಣಕಾಸು ಮತ್ತು ಹಣಕಾಸೇತರ ಎರಡೂ ಸೇರಿ) ಸಂಖ್ಯೆಯನ್ನು 6 ರಿಂದ 5ಕ್ಕೆ ಇಳಿಸಲಾಗಿದೆ. ಅಂದರೆ, ಇನ್ನು ಮುಂದೆ ತಿಂಗಳಿಗೆ ಕೇವಲ 5 ಬಾರಿ ಮಾತ್ರ ಉಚಿತವಾಗಿ ಎಟಿಎಂ ಬಳಸಬಹುದು.
ಹಿರಿಯ ನಾಗರಿಕರಿಗೆ: ಮುಂಚಿನಂತೆಯೇ ತಿಂಗಳಿಗೆ 8 ಉಚಿತ ವಹಿವಾಟುಗಳ ಸೌಲಭ್ಯ ಮುಂದುವರಿಯಲಿದೆ (ಯಾವುದೇ ಬದಲಾವಣೆ ಇಲ್ಲ).
ಹೆಚ್ಚುವರಿ ವಹಿವಾಟು ಶುಲ್ಕ ಏರಿಕೆ
ನಿಗದಿತ 5 ಉಚಿತ ವಹಿವಾಟುಗಳ ಮಿತಿ ಮುಗಿದ ನಂತರ, ನಡೆಸುವ ಪ್ರತಿ ಹೆಚ್ಚುವರಿ ಹಣಕಾಸು ವಹಿವಾಟಿಗೆ (ಉದಾಹರಣೆಗೆ: ನಗದು ಹಿಂಪಡೆಯುವಿಕೆ ಅಥವಾ UPI ಮೂಲಕ ಎಟಿಎಂನಿಂದ ನಗದು ಪಡೆಯುವುದು) ಈ ಹಿಂದೆ ₹20 ಶುಲ್ಕವಿತ್ತು. ಈಗ ಅದನ್ನು ₹23 + GST ಗೆ ಹೆಚ್ಚಿಸಲಾಗಿದೆ. ಜೊತೆಗೆ, ಉಚಿತ ಮಿತಿ ಮೀರಿದ ಹಣಕಾಸೇತರ ವಹಿವಾಟುಗಳಿಗೆ (ಬ್ಯಾಲೆನ್ಸ್ ಚೆಕ್, ಮಿನಿ ಸ್ಟೇಟ್‌ಮೆಂಟ್ ಇತ್ಯಾದಿ) ಮುಂಚಿನಂತೆಯೇ ₹5 + GST ಶುಲ್ಕ ಇರಲಿದೆ.
ಎಟಿಎಂ ಟ್ರಾನ್ಸಾಕ್ಷನ್ ಫೇಲ್ ಆದರೆ ಭಾರಿ ದಂಡ!
ಗ್ರಾಹಕರ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದ ಕಾರಣ ಎಟಿಎಂ ವಹಿವಾಟು ತಿರಸ್ಕೃತಗೊಂಡರೆ, ವಿಧಿಸಲಾಗುತ್ತಿದ್ದ ದಂಡವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಹೌದು, ಈ ಹಿಂದಿದ್ದ ₹17 ದಂಡದ ಮೊತ್ತವನ್ನು ಈಗ ನೇರವಾಗಿ ₹23 + GST ಗೆ ಹೆಚ್ಚಿಸಲಾಗಿದೆ. ಆದರೆ, ಉಚಿತ ವಹಿವಾಟು ಮಿತಿ ಮುಗಿದ ಬಳಿಕವೇ ಈ ನಿಯಮ ಅನ್ವಯಿಸುತ್ತದೆ).
ಮುಂದುವರೆದು, ಈ ಎಲ್ಲಾ ದರ ಏರಿಕೆಗಳ ನಡುವೆ ಕೆನರಾ ಬ್ಯಾಂಕ್ ಗ್ರಾಹಕರಿಗೆ ಒಂದು ಸಣ್ಣ ಸಮಾಧಾನಕರ ನಿರ್ಧಾರವನ್ನೂ ಪ್ರಕಟಿಸಿದೆ. ಎಟಿಎಂ ಪಿನ್ ಮರೆತುಹೋದಾಗ ಹೊಸದಾಗಿ ಗ್ರೀನ್ ಪಿನ್ ಜನರೇಟ್ ಮಾಡಲು ವಿಧಿಸುತ್ತಿದ್ದ ಶುಲ್ಕವನ್ನು ₹23 ರಿಂದ ಕೇವಲ ₹5 + GST ಗೆ ಕಡಿತಗೊಳಿಸಲಾಗಿದೆ. ಆದರೆ, ಈ ಶುಲ್ಕಗಳು ಯಾವುದೇ ಆನ್ಲೈನ್ ರೀತಿಯ ವಹಿವಾಟುಗಳಲ್ಲಿ ಇಲ್ಲ! ಹಾಗಾಗಿ, ಅನಗತ್ಯ ಕಡಿತವನ್ನು ತಪ್ಪಿಸಲು ಡಿಜಿಟಲ್ ಬ್ಯಾಂಕಿಂಗ್ (UPI/Net Banking) ಹೆಚ್ಚು ಬಳಸಿ ಮತ್ತು ಎಟಿಎಂ ಬಳಸುವ ಮುನ್ನ ಮೊಬೈಲ್ ಆಪ್‌ನಲ್ಲಿ ಬ್ಯಾಲೆನ್ಸ್ ಪರಿಶೀಲಿಸಿಕೊಳ್ಳುವುದು ಉತ್ತಮ.