

ದೆಹಲಿ: ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಹಾಗೂ ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವ ಬಿಗ್ ಬಜೆಟ್ ಸಿನಿಮಾ "ರಾಮಾಯಣ" ಚಿತ್ರದಲ್ಲಿ ಸೀತಾ ಮಾತೆಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. 2026 ರ ಅಕ್ಟೋಬರ್ನಲ್ಲಿ ಸಿನಿಮಾದ ಮೊದಲ ಭಾಗ ತೆರೆಕಾಣಲಿದೆ. ಇದರ ನಡುವೆಯೇ, ಚಿತ್ರದ ಪಾತ್ರಕ್ಕೆ ಆಯ್ಕೆಯಾದ ಕಲಾವಿದರ ಅದ್ರಲ್ಲೂ, ಸೀತಾ ಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿರುವುದಕ್ಕೆ ಹಿರಿಯ ನಟ ಬೇಸರ ವ್ಯಕ್ತಪಡಿಸಿದ್ದರು. ಆದ್ರೆ, ಇದಕ್ಕೆ ಸಾಯಿ ಪಲ್ಲವಿ ಕೌಂಟರ್ ಕೊಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ಅನ್ನು ಕಪೂರ್ ಹೇಳಿದ್ದೇನು?
ರಾಮಾಯಣ ಸಿನಿಮಾಗೆ ಆಯ್ಕೆ ಮಾಡಿದ ಕಲಾವಿದರ ಬಗ್ಗೆ ಬಾಲಿವುಡ್‌ನ ಹಿರಿಯ ನಟ ಅನ್ನು ಕಪೂರ್ ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸೀತಾ ಮಾತೆ ಪಾತ್ರ ಹಾಗೂ ನಿರ್ದೇಶಕರ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿ, "ಹಿಂದೂಗಳು ಶ್ರೀರಾಮನನ್ನು ಭಗವಾನ್ ನಾರಾಯಣನ ಅವತಾರ ಎಂದು ಪೂಜಿಸುತ್ತಾರೆ, ಸೀತಾ ದೇವಿ ಭಾರತೀಯರಿಗೆ ತಾಯಿಯ ಸ್ಥಾನದಲ್ಲಿದ್ದಾರೆ, ಆದರೆ ನಿಮ್ಮ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರವನ್ನು ಯಾರು ಮಾಡುತ್ತಿದ್ದಾರೆ? ಜನ ಅವರ ಪಾತ್ರವನ್ನು, ಅವರನ್ನು ಒಪ್ಪುತ್ತಾರೆಯೇ?" ಎಂದು ಹೇಳಿದ್ದಾರೆ.
ಅನ್ನು ಕಪೂರ್‌ಗೆ ಸಾಯಿ ಪಲ್ಲವಿ ಕೌಂಟರ್
ಸಂದರ್ಶನದಲ್ಲಿ ಮಾತನಾಡಿದ ಸಾಯಿ ಪಲ್ಲವಿ, "ದೇವತೆಯ ಪಾತ್ರ ಮಾಡುವುದು ನಟರಿಗೆ ಸುಲಭವಾಗಿ ಸಿಗುವ ಅವಕಾಶವಲ್ಲ. ಸೀತೆಯ ಪಾತ್ರವನ್ನು ನಿಭಾಯಿಸುವಾಗ ಕನಿಷ್ಠ ಪಕ್ಷ ನನ್ನ ಆಲೋಚನೆಗಳಲ್ಲಾದರೂ ಅತ್ಯಂತ ಶುದ್ಧವಾಗಿರಲು ನಾನು ಪ್ರಯತ್ನಿಸಿದೆ. ಚಿತ್ರೀಕರಣದ ಸಮಯದಲ್ಲಿ ಯಾವುದೇ ನಕಾರಾತ್ಮಕ ಆಲೋಚನೆಗಳಿಲ್ಲದೆ ಮನಸ್ಸನ್ನು ಸಂಪೂರ್ಣ ತಟಸ್ಥವಾಗಿಟ್ಟುಕೊಂಡು ನನ್ನ ಅತ್ಯುತ್ತಮ ಆವೃತ್ತಿಯನ್ನು ಪರದೆಯ ಮೇಲೆ ತರಲು ಶ್ರಮಿಸಿದ್ದೇನೆ," ಎಂದಿದ್ದಾರೆ.
ಏತನ್ಮಧ್ಯೆ, ಸಂದರ್ಶನದಲ್ಲಿ ಸಾಯಿ ಪಲ್ಲವಿ ಅವರು ತಮ್ಮ ಪಾತ್ರದ ಪವಿತ್ರತೆ ಮತ್ತು ಸಿದ್ಧತೆಯ ಬಗ್ಗೆ ಭಾವುಕ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ಆದರೆ, ಅವರ ಅಭಿಮಾನಿಗಳು ಇದನ್ನು ಅನ್ನು ಕಪೂರ್ ಅವರ ಟೀಕೆಗೆ ನೀಡಿದ ಕೌಂಟರ್ ಎಂದೇ ಕರೆಯುತ್ತಿದ್ದಾರೆ.
₹4,000 ಕೋಟಿ ಭಾರಿ ಬಜೆಟ್‌ನಲ್ಲಿ ರಾಮಾಯಣ!
ಸುಮಾರು ₹4,000 ಕೋಟಿ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿದೆ. ಎರಡು ಭಾಗಗಳಲ್ಲಿ ಮೂಡಿಬರಲಿರುವ ಈ ಚಿತ್ರದಲ್ಲಿ, ರಣಬೀರ್ ಕಪೂರ್ ಶ್ರೀರಾಮನಾಗಿ, ನಟಿ ಸಾಯಿ ಪಲ್ಲವಿ ಸೀತಾ ಮಾತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲಿದ್ದಾರೆ. ಇನ್ನು, ಬಾಲಿವುಡ್‌ನ ಆ್ಯಕ್ಷನ್ ಸ್ಟಾರ್ ಸನ್ನಿ ಡಿಯೋಲ್ ಹನುಮನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ. ಇದರೊಂದಿಗೆ ಹಿರಿಯ ನಟ ಅರುಣ್ ಗೋವಿಲ್ ದಶರಥ ನಿರ್ವಹಿಸುತ್ತಿದ್ದಾರೆ. ಜೊತೆಗೆ, ಕೈಕೇಯಿಯಾಗಿ ಲಾರಾ ದತ್ತಾ, ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ಮತ್ತು ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.